ಏಕಶಿಲಾ ಬೆಟ್ಟಕ್ಕೆ ರೋಪ್‌ವೇಗೆ ಹಸಿರು ನಿಶಾನೆ: ಕೆಎನ್‌ಆರ್ ಅಭಿನಂದನೆ

ಮಧುಗಿರಿ, ಏ. ೨೦- ಏಷ್ಯಾದ ಅತಿ ದೊಡ್ಡ ಮಧುಗಿರಿ ಏಕಶಿಲಾ ಬೆಟ್ಟಕ್ಕೆ ರೋಪ್ ವೇ ಕಾಮಗಾರಿ ಪ್ರಕ್ರಿಯೆಗೆ ಹಸಿರು ನಿಶಾನೆ ದೊರೆತಿದ್ದು, ಇದಕ್ಕೆ ಕಾರಣವಾದ ಎಲ್ಲರಿಗೂ ಮಾಜಿ ಶಾಸಕ ಕೆ.ಎನ್. ರಾಜಣ್ಣ ಅಭಿನಂದನೆ ಸಲ್ಲಿಸಿದ್ದಾರೆ.
ಪಟ್ಟಣದ ಸ್ವಗೃಹದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮನವೊಲಿಸಿದ ಹಿನ್ನೆಲೆಯಲ್ಲಿ ಬಜೆಟ್‌ನಲ್ಲಿ ಮಧುಗಿರಿ ಸೇರಿದಂತೆ ಇನ್ನಿತರ ೮ ಕಡೆ ರೋಪ್ ವೇ ಅಳವಡಿಸಲು ತೀರ್ಮಾನಿಸಿಲಾಗಿತ್ತು. ಬಾಂಬೆಯಿಂದ ದಾರಾಷಾ ಕಂಪೆನಿಯವರು ಮಧುಗಿರಿಗೆ ಆಗಮಿಸಿ ಸರ್ವೆ ಕಾಮಗಾರಿಯನ್ನೂ ಸಹ ಕೈಗೊಂಡಿದ್ದರು. ನಾನು ಶಾಸಕನಾಗಿದ್ದಾಗ ಸಂದರ್ಭದಲ್ಲಿ ಅಂದಿನ ಡೆಪ್ಯುಟಿ ಕಮೀಷನರ್ ಮೋಹನ್‌ರಾಜ್ ರವರ ಅವಧಿಯಲ್ಲಿ ರೋಪ್ ವೇ ಕಾಮಗಾರಿಯ ಬೇಸ್ಮೆಂಟ್‌ಗಾಗಿ ೧೦ ಎಕರೆ ಭೂಮಿ ಮಂಜೂರು ಮಾಡಿಸಿ ಪ್ರವಾಸೋದ್ಯಮ ಇಲಾಖೆಯವರಿಗೆ ಹಸ್ತಾಂತರ ಮಾಡಲಾಗಿತ್ತು.
ಆ ಸಂದರ್ಭದಲ್ಲಿ ಸರ್ವೆ ಮಾಡಬೇಕೆಂದು ಆರ್ಕಿಯಾಲಜಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದರು. ನಂತರದ ದಿನಗಳಲ್ಲಿ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಕೊಲ್ಕೊತ್ತಾದಿಂದ ಒಬ್ಬರನ್ನು ಕರೆಸಿ ಡ್ರೋಣ್ ಕ್ಯಾಮೆರಾ ಬಳಸಿ ತಾಲ್ಲೂಕಿನ ಹಿರಿಯ ಅಧಿಕಾರಿಗಳೊಂದಿಗೆ ಸ್ವತಃ ನಾನೂ ಸಹ ಮಧುಗಿರಿ ಏಕಶಿಲಾ ಬೆಟ್ಟವೇರಿ ಸರ್ವೆ ಕಾರ್ಯ ಕೈಗೊಳ್ಳಲಾಗಿತ್ತು. ನಂತರದ ದಿನಗಳಲ್ಲಿ ಸರ್ಕಾರ ಬದಲಾದ ಹಿನ್ನೆಲೆಯಲ್ಲಿ ಈ ಕಾಮಗಾರಿ ಪ್ರಕ್ರಿಯೆ ನೆನೆದುಗಿದೆ ಬಿದ್ದಿತ್ತು. ಈಗ ಕಾಮಗಾರಿ ಆರಂಭಕ್ಕೆ ಸರ್ಕಾರದಿಂದ ಹಸಿರು ನಿಶಾನೆ ದೊರೆತಿದ್ದು, ಇದಕ್ಕೆ ಕಾರಣರಾದ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.