
ಮಧುಗಿರಿಯ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ಕ್ಷೀರಭಾಗ್ಯ ಯೋಜನೆಯ ದಶಮಾನೋತ್ಸವ ಸಂಭ್ರಮಾಚರಣೆ ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಸಚಿವರಾದ ಡಾ. ಜಿ. ಪರಮೇಶ್ವರ್, ಕೆ.ಎನ್. ರಾಜಣ್ಣ. ಕೆ. ವೆಂಕಟೇಶ್. ಭೀಮಾನಾಯ್ಕ್, ಶಾಸಕರಾದ ಟಿ.ಬಿ. ಜಯಚಂದ್ರ, ಕೆ. ಷಡಕ್ಷರಿ, ಹೆಚ್.ವಿ. ವೆಂಕಟೇಶ್, ಡಾ. ರಂಗನಾಥ್, ಎಸ್.ಆರ್. ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ಮತ್ತಿತರರು ಚಿತ್ರದಲ್ಲಿದ್ದಾರೆ.
ತುಮಕೂರು/ಮಧುಗಿರಿ, ಸೆ. ೬- ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಕ್ಷೀರಭಾಗ್ಯ ಯೋಜನೆಗೆ ದಶಮಾನೋತ್ಸವದ ಸಂಭ್ರಮ. ಈ ಯೋಜನೆ ಜಾರಿಗೆ ಬಂದು ೧೦ ವರ್ಷಗಳು ಸಂದಿರುವ ಹಿನ್ನೆಲೆಯಲ್ಲಿ ಕ್ಷೀರಕ್ರಾಂತಿಯ ದಶಮಾನೋತ್ಸವ ಸಂಭ್ರಮಾಚರಣೆಗೆ ಕಲ್ಪತರುನಾಡಿನ ಏಕಶಿಲಾ ನಗರಿ ಮಧುಗಿರಿ ಇಂದು ಸಾಕ್ಷಿಯಾಯಿತು.೨೦೧೩ ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೊದಲನೇ ಬಾರಿಗೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಬಳಿಕ ೨೦೧೩ರ ಆ. ೧ ರಂದು ೧ ರಿಂದ ೧೦ನೇ ತರಗತಿಯ ಶಾಲಾ ಮಕ್ಕಳ ಅಪೌಷ್ಠಿಕತೆ ನಿವಾರಣೆಗಾಗಿ ಮಹತ್ವದ ಕ್ಷೀರಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದರು. ಇದೀಗ ಈ ಯೋಜನೆ ೧೦ ವರ್ಷ ಯಶಸ್ವಿಯಾಗಿ ಪೂರೈಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತ, ಬೆಂಗಳೂರು ಹಾಗೂ ರಾಜ್ಯದ ಎಲ್ಲಾ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಗಳ ಸಹಯೋಗದೊಂದಿಗೆ ಕ್ಷೀರಭಾಗ್ಯ ಯೋಜನೆಯ ದಶಮಾನೋತ್ಸವವನ್ನು ಆಚರಿಸಲಾಯಿತು.
ಮಧುಗಿರಿಯ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ಭವ್ಯವಾಗಿ ಸಿದ್ದಗೊಳಿಸಲಾಗಿದ್ದ ಬೃಹತ್ ವೇದಿಕೆಯಲ್ಲಿ ನಡೆದ ಕ್ಷೀರಭಾಗ್ಯ ದಶಮಾನೋತ್ಸವ ಸಂಭ್ರಮಾಚರಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಕ್ಕಳಿಗೆ ಹಾಲು ಕುಡಿಸುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಕಳೆದ ೧೦ ವರ್ಷಗಳ ಹಿಂದೆ ಮೊದಲ ಬಾರಿಗೆ ನಾನು ಮುಖ್ಯಮಂತ್ರಿಯಾಗಿದ್ದಾಗ ೨೦೧೩ರ ಆಗಸ್ಟ್ ೧ ರಂದು ಶಾಲಾ ಮಕ್ಕಳ ಅಪೌಷ್ಠಿಕತೆ ನಿವಾರಣೆಯ ಉದ್ದೇಶದಿಂದ ಕ್ಷೀರಭಾಗ್ಯ ಯೋಜನೆಯನ್ನು ಜಾರಿಗೆ ತರಲಾಯಿತು. ಈಗ ಈ ಯೋಜನೆ ೧೦ ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವುದರಿಂದ ದಶಮಾನೋತ್ಸವವನ್ನು ಆಚರಿಸಲಾಗುತ್ತಿದೆ. ರಾಜ್ಯದ ೫೫,೬೮೩ ಶಾಲೆಗಳು, ೬೪,೦೦೦ ಅಂಗನವಾಡಿಗಳು ಈ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿವೆ. ೬೪ ಲಕ್ಷ ಶಾಲಾ ಮಕ್ಕಳು, ೪೦ ಲಕ್ಷ ಅಂಗನವಾಡಿ ಮಕ್ಕಳು ಈ ಯೋಜನೆಯ ಸದುಪಯೋಗ ಪಡೆಯುತ್ತಿದ್ದಾರೆ ಎಂದರು.
ಕ್ಷೀರಭಾಗ್ಯ ಯೋಜನೆಯಡಿ ೧ ರಿಂದ ೧೦ ನೇ ತರಗತಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಎಲ್ಲಾ ಮಕ್ಕಳಿಗೆ ೧೮ ಗ್ರಾಂ ಕೆನೆಭರಿತ ಹಾಲಿನ ಪುಡಿಯಿಂದ ತಯಾರಿಸಿದ ೧೫೦ ಮಿ.ಲೀ. ಹಾಲನ್ನು ವಾರದಲ್ಲಿ ೩ ದಿನ ನೀಡಲಾಗುತ್ತಿದೆ. ಇದರಿಂದ ಶಾಲಾ ಮಕ್ಕಳ ಅಪೌಷ್ಠಿಕತೆಯೂ ನಿವಾರಣೆಯಾಗುತ್ತಿದೆ. ಜತೆಗೆ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವೂ ದೊರೆಯುವಂತಾಗಿದೆ. ಇದು ಸಹ ನಮ್ಮ ಸರ್ಕಾರದ ಸಾಧನೆಯಾಗಿದೆ ಎಂದರು.
ಚುನಾವಣಾ ಪೂರ್ವದಲ್ಲಿ ರಾಜ್ಯದ ಜನತೆಗೆ ನೀಡಿದ್ದ ೫ ಗ್ಯಾರಂಟಿಗಳ ಭರವಸೆಯನ್ನು ಈಡೇರಿಸುವ ಮೂಲಕ ನಾವು ನುಡಿದಂತೆ ನಡೆದಿದ್ದೇವೆ. ಗೃಹಜ್ಯೋತಿ ಯೋಜನೆಯಡಿ ರಾಜ್ಯದ ೨ ಕೋಟಿ ೧೯ ಲಕ್ಷ ಗ್ರಾಹಕರಿಗೆ ವಿದ್ಯುತ್‌ನ್ನು ಉಚಿತವಾಗಿ ಕೊಡುತ್ತಿದ್ದೇವೆ. ಇದರಿಂದ ಸುಮಾರು ೧೩೯೧೦ ಕೋಟಿಯಷ್ಟು ವಿದ್ಯುತ್ ಗ್ರಾಹಕರಿಗೆ ಸೇರಿದೆ ಎಂದು ಅವರು ಹೇಳಿದರು.ಗೃಹಲಕ್ಷ್ಮಿ ಯೋಜನೆ ೧.೨೮ ಕೋಟಿ ಮಹಿಳೆಯರಿಗೆ ಸಹಕಾರವಾಗಿದೆ. ಈಗಾಗಲೇ ಕುಟುಂಬದ ಯಜಮಾನಿಯರ ಖಾತೆಗೆ ೨ ಸಾವಿರ ರೂ. ಜಮೆಯಾಗಿದೆ ಎಂದು ತಿಳಿಸಿದ ಅವರು, ಶಕ್ತಿ ಯೋಜನೆಯಡಿ ರಾಜ್ಯದಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುವ ಮೂಲಕ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಪುಷ್ಪನಮನ
ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಕ್ಷೀರಭಾಗ್ಯ ಯೋಜನೆಯ ದಶಮಾನೋತ್ಸವ ಸಮಾರಂಭದ ವೇದಿಕೆಯಲ್ಲಿ ಶ್ರೀಕೃಷ್ಣನ ಭಾವಚಿತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪುಷ್ಪನಮನ ಸಲ್ಲಿಸಿದರು.
ಭವ್ಯ ಸ್ವಾಗತ
ಇದಕ್ಕೂ ಮೊದಲು ಬೆಂಗಳೂರಿನಿಂದ ಏಕಶಿಲಾ ನಗರಿ ಮಧುಗಿರಿ ಕಾರಿನಲ್ಲಿ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜಿಲ್ಲಾಡಳಿತ ಹಾಗೂ ಕೆಎಂಎಫ್ ವತಿಯಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್, ಸಹಕಾರ ಸಚಿವ ಕೆ.ಎನ್. ರಾಜಣ್ಣ, ಕೆಎಂಎಫ್ ಅಧ್ಯಕ್ಷ ಭೀಮಾನಾಯಕ್, ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್, ಜಿ.ಪಂ. ಸಿಇಓ ಜೆ. ಪ್ರಭು ಅವರು ಮುಖ್ಯಮಂತ್ರಿಗಳಿಗೆ ಪುಷ್ಪಗುಚ್ಛ ನೀಡಿ ಆತ್ಮೀಯವಾಗಿ ಬರ ಮಾಡಿಕೊಂಡರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಶಮಾನೋತ್ಸವದ ವೇದಿಕೆಗೆ ಆಗಮಿಸುತ್ತಿದ್ದಂತೆ ನೆರೆದಿದ್ದ ಸಹಸ್ರಾರು ಮಂದಿ ಕೈ ಕಾರ್ಯಕರ್ತರು, ಹಾಲು ಉತ್ಪಾದಕರ ಜೈಕಾರ, ಜಯಘೋಷ, ಹರ್ಷೋದ್ಘಾರ ಮುಗಿಲು ಮುಟ್ಟಿತು.
ವಿವಿಧ ಅಭಿವೃದ್ಧಿ ಕಾಮಗಾರಿಗೆ ಸಿಎಂ ಚಾಲನೆ
ಮಧುಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೧೫೬ ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಲಾನ್ಯಾಸ ನೆರವೇರಿಸಿದರು.
ಇದೇ ವೇಳೆ ಮಧುಗಿರಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಕನ್ನಡ ಸಾಹಿತ್ಯ ಪರಿಷತ್ ಭವನವನ್ನು ಮುಖ್ಯಮಂತ್ರಿಗಳು ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಾಡೋಜ ಮಹೇಶ್ ಜೋಶಿ ಸೇರಿದಂತೆ ಸಚಿವರುಗಳು, ಶಾಸಕರುಗಳು ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸದಸ್ಯರುಗಳು ಉಪಸ್ಥಿತರಿದ್ದರು.