ಏಕವಚನ ಪ್ರಯೋಗ ಸದನ -ಕದನ

ವಿಧಾನ ಪರಿಷತ್ ಕಲಾಪ ಪ್ರಾರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಕೌನ್ಸಿಲ್‌ನಲ್ಲಿ ರಾಷ್ಟ್ರಧ್ವಜ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.

ಬೆಂಗಳೂರು,ಫೆ.೨೮-ವಿಧಾನಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯ ಅಬ್ದುಲ್ ಜಬ್ಬಾರ್ ಅವರು ಬಿಜೆಪಿಯ ಎನ್. ರವಿ ಕುಮಾರ್ ಅವರ ಮೇಲೆ ಏಕವಚನ ಪ್ರಯೋಗ ನಡೆಸಿದ ಘಟನೆ ಭಾರಿ ಕೋಲಾಹಲ ಸೃಷ್ಟಿಸಿ ಒಂದು ಹಂತದಲ್ಲಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಪ್ರಸಂಗ ನಡೆಯಿತು.
ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ವಿಚಾರದಲ್ಲಿ ನಡೆದ ಮಾತಿನ ಸಮರ ಆರಂಭಗೊಂಡು ಒಂದು ಹಂತದಲ್ಲಿ ಕೈ ಕೈ ಮಿಲಾಯಿಸುವ ಪರಿಸ್ಥಿತಿಯಲ್ಲೂ ನಿರ್ಮಾಣವಾಯಿತು. ಏಯ್ ಬಾರೋ.. ಧಮ್ಮಿದ್ರೆ ಬಾರೋ, ನೋಡೇ ಬಿಡೋಣ ಎಂಬೆಲ್ಲ ಪದ ಪ್ರಯೋಗಗಳು ನಡೆದವು.
ಒಂದು ಹಂತದ ಜಗಳ ನಡೆದು ಕಲಾಪವನ್ನು ಮುಂದೂಡಿ ಮರಳಿ ಸೇರಿದಾಗ ಬಿಜೆಪಿಯ ಎನ್. ರವಿ ಕುಮಾರ್ ಮಾತು ಆರಂಭಿಸಿದರು.
ನಿನ್ನೆ ವಿಧಾನ ಸೌಧದಲ್ಲಿ ನಡೆದ ಘಟನೆ ಬಗ್ಗೆ ಮನೆಯಲ್ಲಿ ಚರ್ಚೆ ಆಗುತ್ತಿದೆ. ನಮ್ಮ ಅಭ್ಯರ್ಥಿ ಗೆದ್ದ ವೇಳೆ ಇರಬಹುದು, ಕಾಂಗ್ರೆಸ್ ನ ಅಜಯ್ ಮಾಕೆನ್ ಗೆದ್ದ ವೇಳೆ ಈ ತರಹ ಘೋಷಣೆ ಕೂಗಿಲ್ಲ. ನಾಸಿರ್ ಹುಸೇನ್ ವಿಜಯೋತ್ಸವದ ವೇಳೆ ಈ ರೀತಿಯ ಘೋಷಣೆ ಕೂಗಿದ್ದಾರೆ. ವಿಧಾನ ಸೌಧದಲ್ಲಿ ನೂರಾರು ಅಧಿಕಾರಿಗಳಿದ್ದ ವೇಳೆ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆ. ಇದು ಸಂವಿಧಾನಕ್ಕೆ ಮಾಡಿದ ಅವಮಾನ. ವಿಭಜನೆ ಆಗಿರುವ ಪಾಕಿಸ್ತಾನ ಪರ ಘೋಷಣೆ ಕೂಗುವುದು ಎಷ್ಟು ಸರಿ? ದೇಶವೇ ತಲೆ ತಗ್ಗಿಸುವ ಕೆಲಸ ಎಂದು ರವಿ ಕುಮಾರ್ ಹೇಳಿದರು.
ರವಿಕುಮಾರ್ ಮಾತನಾಡುವ ವೇಳೆ ಕಾಂಗ್ರೆಸ್ ಯುಬಿ ವೆಂಕಟೇಶ್ ನೀವೇ ಕಳುಹಿಸಿ ಕೊಟ್ಟಿದ್ರಿ ಅನ್ಸುತ್ತೆ ಎಂದು ಕೆಣಕಿದರು. ಆಗ ರವಿ ಕುಮಾರ್ ಚರ್ಚೆಯ ನಡುವೆ, ಕಾಂಗ್ರೆಸ್ ಸರ್ಕಾರವನ್ನು ದೇಶ ದ್ರೋಹಿ ಎಂದರು.
ರವಿ ಕುಮಾರ್ ಅವರ ಮಾತಿಗೆ ಕಾಂಗ್ರೆಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ದೇಶ ದ್ರೋಹಿ ಸರ್ಕಾರ ಎಂದ ಬಿಜೆಪಿ ಸದಸ್ಯರಿಗೆ ನಿಮ್ಮ ಕೇಂದ್ರ ಸರ್ಕಾರಕ್ಕೆ ಹೇಳಿ ನಮ್ಮ ಸರ್ಕಾರದ ಮೇಲೆ ಕೇಸ್ ಬುಕ್ ಮಾಡಿ ರಾಷ್ಟ್ರಪತಿ ಆಡಳಿತ ತನ್ನಿ ಎಂದು ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್ ಸವಾಲು ಹಾಕಿದರು.
ಆಗ ಸದನದಲ್ಲಿ ಮತ್ತೆ ಗದ್ದಲ ಹೆಚ್ಚಾಯಿತು. ಈ ನಡುವೆ ರವಿಕುಮಾರ್ ಮಾತನಾಡುವ ವೇಳೆ ಕಾಂಗ್ರೆಸ್‌ನ ಅಬ್ದುಲ್ ಜಬ್ಬಾರ್ ಬಾಯಿ ಮುಚ್ಚು ಎಂದು ಹೇಳಿದರು.
ಅಬ್ದುಲ್ ಜಬ್ಬಾರ್ “ಅವನ ಬಾಯಿ ಬಂದ್ ಮಾಡಿ” ಎಂದು ರವಿಕುಮಾರ್? ಅವರ ಮೇಲೆ ಏಕವಚನ ಪ್ರಯೋಗ ಮಾಡಿದರು. ಇದರಿಂದ ಗದ್ದಲ ಜೋರಾಯಿತು. ಅಬ್ದುಲ್ ಜಬ್ಬಾರ್ ಮಾತಿಗೆ ರೊಚ್ಚಿಗೆದ್ದ ಬಿಜೆಪಿ ಸದಸ್ಯರು ಏಕವಚನದಲ್ಲಿ ಮಾತಾಡಿದರೆ ಸರಿ ಇರಲ್ಲವೆಂದರು. ಬಳಿಕ ರವಿಕುಮಾರ್ ಎದ್ದು ಅಬ್ದುಲ್? ಜಬ್ಬರ್? ಬಳಿ ಹೋದರು. ರವಿಕುಮಾರ್ ಜೊತೆ ತುಳಸಿ ಮುನಿರಾಜುಗೌಡ ಮುನ್ನುಗ್ಗಿ ಸದನದ ಬಾವಿ ಬಳಿ ಹೋದರು, ಬಿಜೆಪಿ ಸದಸ್ಯರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರು. ಅದಕ್ಕೆ ಭಾರತ್ ಮಾತಾಕಿ ಜೈ ಎಂದು ಕಾಂಗ್ರೆಸ್ ಸದಸ್ಯರು ಪ್ರತಿ ಘೋಷಣೆ ಕೂಗಿದರು.
.ಏಕ ವಚನ ಮಾತಾಡಿದರೆ ಸರಿ ಇರಲ್ಲ ಎಂದು ರವಿಕುಮಾರ್ ಎದ್ದು ಹೋದರು. ರವಿಕುಮಾರ್ ಜೊತೆಗೆ ತುಳಸಿ ಮುನಿರಾಜು ಗೌಡ ಮುನ್ನುಗ್ಗಿ ಹೋಗಿ ವಾರ್ನಿಂಗ್ ಕೊಟ್ಟರು. ಆಗ ಸ್ಪೀಕರ್ ಖುರ್ಚಿ ಎದುರು ಕೈಕೈ ಮಿಲಾಯಿಸುವ ಹಂತ ಸೃಷ್ಟಿಯಾದಾಗ ಮಾರ್ಷಲ್‌ಗಳು ಧಾವಿಸಿ ಪ್ರತಿಪಕ್ಷ ಆಡಳಿತ ಪಕ್ಷದ ಸದಸ್ಯರ ಮಧ್ಯ ನಿಂತು ಎಲ್ಲರನ್ನೂ ತಡೆದರು.
ಈ ವೇಳೆ ಸದನವನ್ನು ೧೦ ನಿಮಿಷಗಳ ಕಾಲ ಮುಂದೂಡಿದ ಸಭಾಪತಿ ಮರಳಿ ಸೇರಿದಾಗ ಕಠಿಣ ಎಚ್ಚರಿಕೆ ನೀಡಿದರು. ಇನ್ನೊಮ್ಮೆ ಸದನದಲ್ಲಿ ಯಾರಾದರೂ ಬೇಕಾಬಿಟ್ಟಿ ಮಾತನಾಡಿದರೆ ನಾನು ಸಹಿಸಲ್ಲ. ಸಭಾಪತಿ ಹೇಳಿದ್ರೂ ಕೇಳುವುದಿಲ್ಲ ಅಂದ್ರೆ ಏನರ್ಥ? ಎಂದರು. ಇನ್ನೊಮ್ಮೆ ಸದನದಲ್ಲಿ ಏಕ ವಚನದಲ್ಲಿ ಮಾತನಾಡದಂತೆ ಎಲ್ಲಾ ಸದಸ್ಯರಿಗೂ ಎಚ್ಚರಿಕೆ ಕೊಟ್ಟರು.
ಈ ಮೊದಲು
ಕಾಂಗ್ರೆಸ್ ಸರ್ಕಾರ ವಜಾ ಮಾಡುವಂತೆ ಬಿಜೆಪಿ ಸದಸ್ಯರು ಒತ್ತಾಯಿಸಿದ ಹಿನ್ನೆಲೆಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಸದನವನ್ನು ಐದು ನಿಮಿಷಗಳ ಕಾಲ ಮುಂದೂಡಿದರು.
ಮತ್ತೆ ಕಲಾಪ ಆರಂಭವಾಗುತ್ತಿದ್ದಂತೆಯೇ ಬಿಜೆಪಿಯ ಕೋಟ ಶ್ರೀನಿವಾಸ್ ಪೂಜಾರಿ ವಿಷಯ ಪ್ರಸ್ತಾಪಿಸಿದರು. ಆಗ ಕಾಂಗ್ರೆಸ್‌ನ ಸಲೀಂ ಅಹಮದ್ ನೋಟೀಸ್ ನೀಡದೇ ವಿಷಯ ಪ್ರಸ್ತಾಪ ಮಾಡಬಾರದು ಎಂದು ಆಕ್ಷೇಪ ಮಾಡಿದರು.
ಆಗ ಕೋಟ ಶ್ರೀನಿವಾಸ ಪೂಜಾರಿ ಅವರು, ವಿಧಾನಸೌಧದಲ್ಲೇ ರಾಷ್ಟ್ರ ವಿರೋಧಿ ಘೋಷಣೆ ಕೂಗಿದ್ದಾರೆ. ವಿಧಾನಸೌಧದಲ್ಲೇ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ. ಆಗ ಎಲ್ಲಿ ಹೋಗಿದ್ದೀರಿ ಎಂದು ಕೇಳಿದರು. ಅದಕ್ಕೆ ಸಲೀಂ ಅಹಮದ್ ಅವರು ಯಾರೂ ಅಂಥ ಘೋಷಣೆ ಕೂಗಿಲ್ಲ ಎಂದರು.
ಸಚಿವ ಎಚ್.ಕೆ. ಪಾಟೀಲ್ ಅವರು ಕೂಡಾ ಚುನಾವಣಾ ಸಂದರ್ಭದಲ್ಲಿ ಯಾವ ಅಭ್ಯರ್ಥಿ ಗೆದ್ದಿರುತ್ತಾನೋ ಆ ಅಭ್ಯರ್ಥಿ ಪರ ಘೋಷಣೆ ಕೂಗ್ತಾರೆ. ಪಾಕಿಸ್ತಾನ ಘೋಷಣೆ ಸುಳ್ಳಿ ಸೃಷ್ಟಿ ಎಂದರು. ಇದಕ್ಕೆ ಬಿಜೆಪಿ ಸದಸ್ಯರು ಕಿಡಿ ಕಾರಿದರು.
ಇದಕ್ಕೆ ಉತ್ತರ ನೀಡಿದ ಎಚ್ ಕೆ ಪಾಟೀಲ್, ನನಗೆ ಕೇಳಿದ್ದನ್ನು ಹೇಳಿದ್ದೇನೆ. ಇದರಾಚೆಗೆ ಘೋಷಣೆ ಕೇಳಿದ್ದರೆ ದೂರು ನೀಡಿದ್ದೀರಿ ಕಾನೂನಾತ್ಮಕ ಕ್ರಮ ಕೈಗೊಳ್ತೇವೆ ಎಂದರು.
ಆಗ ಕೋಟ ಶ್ರೀನಿವಾಸ ಪೂಜಾರಿ ಅವರು, ಸರ್ಕಾರಕ್ಕೆ ನಾಚಿಕೆ ಆಗೋದಿಲ್ವಾ? ಸರ್ಕಾರಕ್ಕೆ ನಾಚಿಕೆ ಅನ್ನೋದೇ ಇಲ್ವಾ? ಸಿಎಂ ಬಂದು ಇಲ್ಲಿ ಉತ್ತರ ಕೊಡಬೇಕು. ಇಡೀ ರಾಜ್ಯಕ್ಕೆ ಕೇಳಿದ ಘೋಷಣೆ ಸರ್ಕಾರಕ್ಕೆ ಕೇಳಿಲ್ವಾ? ಕಾಂಗ್ರೆಸ್ ಧೋರಣೆ ಪಾಕಿಸ್ತಾನ ಪರವೋ ಯಾರ ಪರ? ಎಂದು ಕೇಳಿದರು.
ಆಗ ಬಿ.ಕೆ ಹರಿಪ್ರಸಾದ್, ಪಾಕಿಸ್ತಾನಕ್ಕೆ ಹೋಗಿ ಬಿರಿಯಾನಿ ತಿಂದಿದ್ದು ಯಾರು? ಎಂದು ತಿವಿದರು. ಇದರಿಂದ ಮತ್ತಷ್ಟು ಕೆರಳಿದ ಕೋಟ ಶ್ರೀನಿವಾಸ ಪೂಜಾರಿ ಅವರು, ಈ ಸರ್ಕಾರದಂತ ಕೆಟ್ಟ ಸರ್ಕಾರ ಇಲ್ಲ. ಪಾಕಿಸ್ತಾನ ಘೋಷಣೆ ಕೂಗಿದವರ ಪರ ದಾಖಲೆ ಹುಡುಕ್ತಿದ್ದೀರ? ಇಂಥ ಸರ್ಕಾರ ಬೇರೆ ಕಡೆ ಇದ್ದಿದ್ದರೆ ವಜಾ ಆಗುತ್ತಿತ್ತು.
ಸಿಎಂ ರಾಜೀನಾಮೆ ನೀಡಬೇಕು ಎಂದರು.
ದೇಶದ್ರೋಹಿ ಸರ್ಕಾರ ಎಂದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಹರಿಪ್ರಸಾದ್ ಕ್ರಿಯಾಲೋಪ ಎತ್ತಿದರು. ಸದಸ್ಯ ರವಿಕುಮಾರ್ ನಮ್ಮ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ನಿಮ್ಮ ಪ್ರಧಾನಿ ನರೇಂದ್ರಮೋದಿಗೆ ತಾಕತ್ತಿದ್ದರೆ ನಮ್ಮ ಸರ್ಕಾರದ ವಿರುದ್ಧ ದೂರು ದಾಖಲಿಸಲು ಹೇಳಿ ಇಲ್ಲದಿದ್ದರೆ ಸದಸ್ಯರ ಮೇಲೆ ದೂರು ದಾಖಲಿಸಬೇಕಾಗುತ್ತದೆ ಎಂದು ಆಗ್ರಹಿಸಿದರು.
ಆಗ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಭಾರೀ ಗದ್ದಲ ಉಂಟಾಯಿತು. ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡ ಸಭಾಪತಿ ಹೊರಟ್ಟಿ ಅವರು ನೀವು ಇದೇ ರೀತಿ ವರ್ತಿಸಿದರೆ ಸದನವನ್ನು ನಾನು ಮುಂದೂಡುತ್ತೇನೆ ಎಂದು ಎಚ್ಚರಿಕೆ ಕೊಟ್ಟರು.