
ಸಂಜೆವಾಣಿ ವಾರ್ತೆ
ದಾವಣಗೆರೆ: ದೇಶದಲ್ಲಿ ಏಕರೂಪ ನಾಗರೀಕ ಸಂಹಿತೆ ಬಗ್ಗೆ ಕೇಂದ್ರ ಸರ್ಕಾರ ಪ್ರಸ್ತಾಪಿಸುತ್ತಿರುವುದನ್ನು ವಿರೋಧಿಸಿ ದಾವಣಗೆರೆ ಮುಸ್ಲಿಂ ಒಕ್ಕೂಟದಿಂದ ನಗರದಲ್ಲಿ ಭಾನುವಾರ ನಾನು ಏಕರೂಪ ನಾಗರೀಕ ಸಂಹಿತೆಯನ್ನು ತಿರಸ್ಕರಿಸುತ್ತೇನೆ ಎಂಬ ಪೋಸ್ಟರ್‌ಗಳನ್ನು ಬಿಡುಗಡೆ ಮಾಡುವ ಮೂಲಕ ವಿರೋಧ ವ್ಯಕ್ತಪಡಿಸಿತು.ಇಲ್ಲಿನ ಆಜಾದ್ ನಗರ ೧ನೇ ಮುಖ್ಯರಸ್ತೆಯಲ್ಲಿ ವಕೀಲ ನಜೀರ್ ಅಹಮ್ಮದ್ ಕಚೇರಿಯಲ್ಲಿ ಮುಸ್ಲಿಂ ಒಕ್ಕೂಟದಿಂದ ಏಕರೂಪ ನಾಗರೀಕ ಸಂಹಿತೆ ವಿರುದ್ಧ ಘೋಷಣೆ ಕೂಗಿ ಅಸಹನೆ ವ್ಯಕ್ತಪಡಿಸಿದರು.ಇದೇ ವೇಳೆ ಮಾತನಾಡಿದ ಒಕ್ಕೂಟದ ಸಂಚಾಲಕ, ವಕೀಲ ನಜೀರ್ ಅಹಮ್ಮದ್, ನಮ್ಮ ದೇಶದಲ್ಲಿ ಪರಿಹರಿಸಲಾಗದೆ ಉಳಿದ ಅನೇಕ ಸಮಸ್ಯೆಗಳಿಗೆ. ಕೇಂದ್ರ ಸರ್ಕಾರವು ಮೊದಲು ಅವುಗಳನ್ನು ಬಗೆಹರಿಸಲು ಮುಂದಾಗಲಿ. ಅದನ್ನು ಬಿಟ್ಟು ಏಕರೂಪ ನಾಗರೀಕ ಸಂಹಿತೆ ವಿಚಾರವಾಗಿ ವಿನಾಕಾರಣ ಅನಗತ್ಯವಾಗಿ ಹಸ್ತಕ್ಷೇಪ ಮಾಡುತ್ತಿರುವುದು ಸರಿಯಲ್ಲ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಮೂಗು ತೂರಿಸುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.ಜನ ಸಾಮಾನ್ಯರು ಉತ್ತಮವಾಗಿ, ನೆಮ್ಮದಿಯ ಜೀವನ ನಡೆಸಲು ಬೇಕಾದ ಮಾದರಿಯಲ್ಲಿ ಆಡಳಿತ ನಡೆಸುವ ಕೆಲಸವನ್ನು ಕೇಂದ್ರದ ಬಿಜೆಪಿ ಸರ್ಕಾರ ಮಾಡಲಿ. ಮುಸ್ಲಿಂ ಸಮುದಾಯದ ಜನರು ಯಾವುದೇ ಅಡ್ಡಿ, ಆತಂಕವಿಲ್ಲದೇ ಉತ್ತಮವಾಗಿ ಜೀವನ ನಡೆಸುತ್ತಿದ್ದಾರೆ. ಹೀಗಿರುವಾಗ ಕೇಂದ್ರ ಸರ್ಕಾರವು ಯಾವುದೇ ಕಾರಣಕ್ಕೂ ಮಧ್ಯ ಪ್ರವೇಶಿಸಿ, ಸಮಸ್ಯೆ ತಂದಿಡುವುದು ಸರಿಯಲ್ಲ. ಕೇಂದ್ರ ಸರ್ಕಾರವುಮುಸ್ಲಿಮರಿಗೆ ಸಂವಿಧಾನ ನೀಡಿರುವ ವಿಶೇಷ ವೈಯಕ್ತಿಕ ಕಾನೂನಿನ ಮೇಲೆ ಸವಾರಿ ಮಾಡಲು ಹೊರಟಂತಿದೆ ಎಂದು ಅವರು ಆರೋಪಿಸಿದರು.ಒಕ್ಕೂಟದ ಸಂಚಾಲಕ ಟಿ.ಅಸ್ಗರ್ ಮಾತನಾಡಿ, ದೇಶದಲ್ಲಿ ಮೊದಲು ಬಡವರು, ಶ್ರೀಮಂತರು ಎಂಬ ಬೇಧವಿಲ್ಲದೇ, ದೇಶದ ಎಲ್ಲಾ ಮಕ್ಕಳಿಗೆ ಒಂದೇ ರೀತಿಯ ಶಿಕ್ಷಣ ಸಿಗಲಿ. ಎಲ್ಲಾ ನಾಗರೀಕರಿಗೂ ಉತ್ತಮ ಆರೋಗ್ಯಕ್ಕಾಗಿ ಒಂದೇ ರೀತಿಯ ಆಸ್ಪತ್ರೆಗಳ ವ್ಯವಸ್ಥೆ ಕಲ್ಪಿಸಲಿ. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಆಯಾ ಜಾತಿ, ಧರ್ಮೀಯರಿಗೆ ತೊಂದರೆಯಾಗದಂತೆ ಸಂವಿಧಾನ ನೀಡಿದ್ದಾರೆ ಎಂದರು.ಮುಸ್ಲಿಂ ಒಕ್ಕೂಟದ ಮುಖಂಡರಾದ ಮಹಮ್ಮದ್ ಶೋಯಬ್, ನಿಜಾಮುದ್ದೀನ್, ನೂರ್ ಅಹಮ್ಮದ್, ಇಬ್ರಾಹಿಂ ಖಲೀಲುಲ್ಲಾ, ಅತ್ತರ್ ಮುನ್ನಾ, ಐ.ಕೆ.ಮುನ್ನಾ ಸಾಬ್, ಅಕ್ರಂ, ಖಲೀಂವುಲ್ಲಾ ಖಾನ್, ಮಸೂದ್ ಅಹಮ್ಮದ, ಹನೀಫ್ ಸಾಬ್, ಅಬ್ಧುಲ್ ನಬೀ ಸಾಬ್, ನೂರ್ ಅಹಮ್ಮದ್, ಅಬ್ದುಲ್ ರೆಹಮಾನ್ ಸಾಬ್, ಫಾರೂಕ್ ಇರ್ಫಾನ್, ಸಾದಿಕ್, ಏಜಾಜ್ ಇತರರು ಇದ್ದರು.