ಬೆಂಗಳೂರು, ಮೇ ೧- ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಲು ಸರ್ವ ಪ್ರಯತ್ನ ನಡೆಸಿರುವ ಬಿಜೆಪಿ ಮತದಾರರನ್ನು ಸೆಳೆಯಲು ಉಚಿತ ಯೋಜನೆಗಳ ಜಾರಿ ಜತೆಗೆ ಹಿಂದುತ್ವದ ಅಸ್ತ್ರವನ್ನು ಪ್ರಯೋಗಿಸಿದ್ದು, ಏಕರೂಪ ನಾಗರಿಕ ಸಂಹಿತೆ ಜಾರಿ ಸೇರಿದಂತೆ ರೈತರು, ಯುವಕರು, ಮಹಿಳೆಯರನ್ನು ಓಲೈಸಲು ಹತ್ತು ಹಲವು ಯೋಜನೆಗಳ ಜಾರಿ ಭರವಸೆಯ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.ಬೆಂಗಳೂರಿನಲ್ಲಿಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಬಿಜೆಪಿಯ ಪ್ರಜಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ, ಅನ್ನ, ಅಭಯ, ಅಕ್ಷರ, ಆರೋಗ್ಯ, ಅಭಿವೃದ್ಧಿ, ಆದಾಯ ಈ ೬ ಸೂತ್ರಗಳ ಮೇಲೆ ಪ್ರಣಾಳಿಕೆಯನ್ನು ಸಿದ್ದಪಡಿಸಲಾಗಿದೆ ಎಂದರು.ಬಿಜೆಪಿಯ ಅಂತ್ಯೋದಯ ಧ್ಯೇಯ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಬ್‌ಕಾ ಸಾತ್, ಸಬ್‌ಕಾ ವಿಕಾಸ್, ಸಬ್‌ಕಾ ವಿಶ್ವಾಸ್ ಮತ್ತು ಸಬ್‌ಕಾ ಪ್ರಯಾಸ್ ಆಶಯದಂತೆ ಈ ಪ್ರಣಾಳಿಕೆ ಸಿದ್ಧಗೊಂಡಿದೆ. ಈ ಪ್ರಣಾಳಿಕೆಯಲ್ಲಿ ಸಮಾಜದ ಪ್ರತಿಯೊಂದು ವರ್ಗದ ಅಗತ್ಯಗಳು ಮತ್ತು ಆಕಾಂಕ್ಷೆಗಳನ್ನು ಪರಿಗಣಿಸಿ ೧೬ ಭರವಸೆಗಳನ್ನು ಒಳಗೊಂಡ ೧೦೩ ಭರವಸೆಗಳು ಈ ಪ್ರಣಾಳಿಕೆಯಲ್ಲಿ ಇವೆ ಎಂದರು.ಬಿಪಿಎಲ್ ಕುಟುಂಬಗಳಿಗೆ ಉಚಿತ ಹಾಲು-ಸಿರಿಧಾನ್ಯ, ಸಿಲಿಂಡರ್ಬಿ ಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಬಿಪಿಎಲ್ ಕುಟುಂಬಗಳಿಗೆ ಪ್ರತಿ ವರ್ಷ ಯುಗಾದಿ, ಗಣೇಶ ಚತುರ್ಥಿ ಮತ್ತು ದೀಪಾವಳಿಗೆ ತಲಾ ೧ ರಂತೆ ೩ ಅಡುಗೆ ಅನಿಲದ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡುವ ಭರವಸೆ ನೀಡಿದೆ. ಇದರ ಜತೆಗೆ ಪೋಷಣೆ ಯೋಜನೆಯ ಮೂಲಕ ಪ್ರತಿ ಬಿಪಿಎಲ್ ಕುಟುಂಬಗಳಿಗೆ ಪ್ರತಿದಿನ ಅರ್ಧ ಲೀಟರ್ ನಂದಿನಿ ಹಾಲು ಮತ್ತು ಪ್ರತಿ ತಿಂಗಳು ೫ ಕೆ.ಜಿ. ಅಕ್ಕಿ ಹಾಗೂ ಸಿರಿಧಾನ್ಯಗಳನ್ನು ಒಳಗೊಂಡ ಪಡಿತರ ಕಿಟ್ ನೀಡುವ ಭರವಸೆಯನ್ನು ನೀಡಿದೆ.
ಅಟಲ್ ಆಹಾರ ಕೇಂದ್ರ
ಕಾಂಗ್ರೆಸ್ ಜಾರಿ ಮಾಡಿದ್ದ ಇಂದಿರಾ ಕ್ಯಾಂಟೀನ್‌ಗಳನ್ನು ಸ್ಥಗಿತಗೊಳಿಸಿದ್ದ ಬಿಜೆಪಿ ಈಗ ತನ್ನ ಪ್ರಣಾಳಿಕೆಯಲ್ಲಿ ಪ್ರತಿ ಮಹಾನಗರ ಪಾಲಿಕೆಯ ವಾರ್ಡ್‌ಗಳಲ್ಲಿ ಕೈಗೆಟಕುವ ದರದಲ್ಲಿ ಗುಣಮಟ್ಟದ ಮತ್ತು ಆರೋಗ್ಯಕರ ಆಹಾರವನ್ನು ಒದಗಿಸಲು ಅಟಲ್ ಆಹಾರ ಕೇಂದ್ರ ಸ್ಥಾಪಿಸುವ ಭರವಸೆಯನ್ನು ನೀಡಿದೆ.
ಏಕರೂಪ ನಾಗರಿಕ ಸಂಹಿತೆ
ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡುವ ಬಿಜೆಪಿ ಕಾರ್ಯಸೂಚಿಯಂತೆ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯ ಭರವಸೆ ನೀಡಿ ಹಿಂದುತ್ವದ ಅಜೆಂಡಾವನ್ನು ಈ ಚುನಾವಣೆಯಲ್ಲೂ ಮುನ್ನೆಲೆಗೆ ತಂದಿರುವ ಬಿಜೆಪಿ ಕರ್ನಾಟಕದಲ್ಲೂ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ ಉನ್ನತ ಮಟ್ಟದ ಸಮಿತಿಯ ಶಿಫಾರಸ್ಸಿನ ಆಧಾರದ ಮೇಲೆ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ಭರವಸೆಯನ್ನು ನೀಡಿದೆ.
ಸರ್ವರಿಗೂ ಸೂರು ಯೋಜನೆ
ರಾಜ್ಯಾದ್ಯಂತ ನಿವೇಶನ ರಹಿತ ಮತ್ತು ವಸತಿ ರಹಿತರಿಗೆ ಸರ್ವರಿಗೂ ಸೂರು ಯೋಜನೆಯಡಿ ೧೦ ಲಕ್ಷ ವಸತಿ ನಿವೇಶನಗಳನ್ನು ಹಂಚಿಕೆ ಮಾಡುವ ಭರವಸೆಯನ್ನು ನೀಡಿದೆ.
ಒನಕೆ ಒಬವ್ವ ಸಾಮಾಜಿಕ ನ್ಯಾಯ ನಿಧಿ ಯೋಜನೆಯಡಿ ಎಸ್ಸಿ, ಎಸ್ಟಿ ಸಮುದಾಯದ ಮಹಿಳೆಯರು ೫ ವರ್ಷಗಳ ಅವಧಿಗೆ ಮಾಡುವ ಸ್ಥಿರ ಠೇವಣಿಗಳ ಮೇಲೆ ೧೦ ಸಾವಿರದ ವರೆಗೂ ತಾಳೆಯಾಗುವ ಠೇವಣಿ ನೀಡುವ ಭರವಸೆಯನ್ನು ಪ್ರಣಾಳಿಕೆಯಲ್ಲಿ ನೀಡಿದೆ.
ಸರ್ಕಾರಿ ಶಾಲೆಗಳು ಮೇಲ್ದರ್ಜೆಗೆ
ಬೆಂಗಳೂರಿನ ಅಪಾರ್ಟ್‌ಮೆಂಟ್‌ಗಳಲ್ಲಿ ಸುಲಲಿತ ಜೀವನಕ್ಕಾಗಿ ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಕಾಯ್ದೆಗೆ ತಿದ್ದುಪಡಿ ತರುವ ಭರವಸೆಯ ಜತೆಗೆ ವಿಶ್ವೇಶ್ವರಯ್ಯ ವಿದ್ಯಾ ಯೋಜನೆಯಡಿ ಸರ್ಕಾರಿ ಶಾಲೆಗಳನ್ನು ಅತ್ಯುನ್ನತ ಶ್ರೇಣಿಗೆ ಮೇಲ್ದರ್ಜೆಗೇರಿಸುವ ಭರವಸೆಯನ್ನು ನೀಡಿದೆ.
ಆರ್ಥಿಕ ಪ್ರೋತ್ಸಾಹ ಯೋಜನೆ
ಐಎಎಸ್, ಕೆಎಎಸ್, ಬ್ಯಾಂಕಿಂಗ್ ಮತ್ತು ಸರ್ಕಾರಿ ಉದ್ಯೋಗಗಳಿಗೆ ತರಬೇತಿ ಪಡೆಯಲು ಆರ್ಥಿಕ ಪ್ರೋತ್ಸಾಹ ನೀಡುವ ಯೋಜನೆ ಜಾರಿ ಭರವಸೆಯನ್ನು ನೀಡಿದೆ.
ಸಮನ್ವಯ ಯೋಜನೆಯಡಿ ತ್ವರಿತ ಗತಿಯಲ್ಲಿ ಎಸ್‌ಎಂಇ ಮತ್ತು ಐಟಿಐ ನಡುವೆ ಸಮನ್ವಯ ಸಾಧಿಸಿ ಪ್ರತಿಭಾವಂತ ಯುವ ವೃತ್ತಿಪರರಿಗೆ ಉದ್ಯೋಗ ಸಿಗುವಂತೆ ನೋಡಿಕೊಳ್ಳುವ ಯೋಜನೆ ಜಾರಿ ಮಾಡುವುದಾಗಿಯೂ ಪ್ರಣಾಳಿಕೆಯಲ್ಲಿ ಹೇಳಿದೆ.
ಹಿರಿಯ ನಾಗರಿಕರೆ ಉಚಿತ ಆರೋಗ್ಯ ತಪಾಸಣೆ
ಮಿಷನ್ ಸ್ವಾಸ್ಥ್ಯ ಕರ್ನಾಟಕ ಯೋಜನೆಯಡಿ ಆಸ್ಪತ್ರೆ ಮತ್ತು ಆರೋಗ್ಯ ಕೇಂದ್ರಗಳ ಮೂಲಭೂತ ಸೌಕರ್ಯಗಳ ಸುಧಾರಣೆ, ಪ್ರತಿ ಮಹಾನಗರ ಪಾಲಿಕೆಯ ಪ್ರತಿ ವಾರ್ಡ್‌ನಲ್ಲಿ ಲ್ಯಾಬೊರೋಟರಿ ಸೌಲಭ್ಯ ಹೊಂದಿರುವ ನಮ್ಮ ಕ್ಲಿನಿಕ್ ಸ್ಥಾಪನೆಯ ಜತೆಗೆ ಹಿರಿಯ ನಾಗರಿಕರಿಗೆ ಪ್ರತಿ ವರ್ಷ ಉಚಿತ ಆರೋಗ್ಯ ತಪಾಸಣೆ ಸೌಲಭ್ಯದ ಭರವಸೆಯನ್ನು ನೀಡಿದೆ.
ನಮ್ಮ ಮುಂದಿನ ಪೀಳಿಗೆಗೆ ಬೆಂಗಳೂರನ್ನು ಅಭಿವೃದ್ಧಿ ಪಡಿಸಲು ರಾಜ್ಯ ರಾಜಧಾನಿ ಪ್ರದೇಶವನ್ನು ಗುರುತಿಸಿ ತಂತ್ರಜ್ಞಾನ ಆಧಾರಿತ ನಗರ ಅಭಿವೃದ್ಧಿಯ ಕಾರ್ಯಕ್ರಮವನ್ನು ಜಾರಿ ಮಾಡುವ ಭರವಸೆಯನ್ನು ನೀಡಿರುವ ಬಿಜೆಪಿ ಬೆಂಗಳೂರನ್ನು ಡಿಜಿಟಲ್ ಇನೋವೇಷನ್ ಜಾಗತಿಕ ಕೇಂದ್ರವಾಗಿ ರೂಪಿಸಲು ಪೂರಕ ಪರಿಸರ ವ್ಯವಸ್ಥೆ ಕಲ್ಪಿಸುವ ಭರವಸೆಯನ್ನು ನೀಡಿದೆ.
ಇವಿಸಿಟಿ ಅಭಿವೃದ್ಧಿ
ಕರ್ನಾಟಕವನ್ನು ಎಲೆಕ್ಟ್ರಿಕ್ ವಾಹನಗಳ ಪ್ರಮುಖ ಕೇಂದ್ರವನ್ನಾಗಿ ರೂಪಿಸಲು ಚಾರ್ಜಿಂಗ್ ಸ್ಟೇಷನ್‌ಗಳ ಸ್ಥಾಪನೆ, ೧ ಸಾವಿರ ಸಾರ್ಟ್ ಆಪ್‌ಗಳಿಗೆ ಪ್ರೋತ್ಸಾಹ, ಹಾಲಿ ಇರುವ ಬಿಬಿಎಂಪಿ ಬಸ್‌ಗಳನ್ನು ಎಲೆಕ್ಟ್ರಿಕ್ ಬಸ್‌ಗಳನ್ನಾಗಿ ಪರಿವರ್ತಿಸುವ, ಜತೆಗೆ ಬೆಂಗಳೂರಿನ ಹೊರವಲಯದಲ್ಲಿ ಇವಿಸಿಟಿ ಅಭಿವೃದ್ಧಿಪಡಿಸುವ ಭರವಸೆಯನ್ನು ನೀಡಿದೆ.
ಕೃಷಿಗೆ ಆದ್ಯತೆ
ಈ ಪ್ರಣಾಳಿಕೆಯಲ್ಲಿ ಬಿಜೆಪಿ ಕೃಷಿಗೂ ಆದ್ಯತೆ ನೀಡಿದ್ದು, ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ಕಿರು ಶಿತಲೀಕರಣ ಸೌಲಭ್ಯಗಳು ಮತ್ತು ಕೃಷಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ೩೦ ಸಾವಿರ ಕೋಟಿ ರೂ. ಮೊತ್ತ ಕೆ-ಅಗ್ರಿ ಫಂಡ್ ಸ್ಥಾಪಿಸುವ ಭರವಸೆಯನ್ನು ನೀಡಿದೆ.
ಎಪಿಎಂಸಿಗಳ ಆಧುನೀಕರಣ ಮತ್ತು ಡಿಜಿಟಲೀಕರಣದ ಭರವಸೆಯ ಜತೆಗೆ ಕೃಷಿ ಯಾಂತ್ರೀಕರಣಕ್ಕೂ ಒತ್ತು ನೀಡುವ ಭರವಸೆ ನೀಡಿದೆ. ಇದರೆ ಜತೆಗೆ ೫ ಹೊಸ ಕೃಷಿ ಆಧಾರಿತ ಕೈಗಾರಿಕಾ ಕ್ಲಸ್ಟರ್‌ಗಳು ಮತ್ತು ೩ ಹೊಸ ಆಹಾರ ಸಂಸ್ಕರಣಾ ಭಾಗಗಳನ್ನು ಸ್ಥಾಪಿಸುವುದಾಗಿಯೂ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ.
೧೦ ಲಕ್ಷ ಉದ್ಯೋಗ ಸೃಷ್ಠಿ
ಜನರ ಆದಾಯ ಹೆಚ್ಚಳಕ್ಕೆ ಪ್ರಣಾಳಿಕೆಯಲ್ಲಿ ಭರವಸೆಗಳನ್ನು ನೀಡಿದ್ದು, ಅದರಂತೆ ಉತ್ಪಾದನಾ ವಲಯದಲ್ಲಿ ಬೆಂಗಳೂರನ್ನು ಬಿಟ್ಟು ರಾಜ್ಯದ ವಿವಿಧೆಡೆ ೧೦ ಲಕ್ಷ ಉದ್ಯೋಗಗಳನ್ನು ಸೃಷ್ಠಿಸುವ ಭರವಸೆಯನ್ನು ನೀಡಿದೆ. ಹಾಗೆಯೇ ಬೆಂಗಳೂರಿನಿಂದ ಆಚೆ ಲಾಜಿಸ್ಟಿಕ್ಸ್ ಕೈಗಾರಿಕಾ ಕ್ಲಸ್ಟರ್‌ಗಳು, ಸಂಪರ್ಕ ಮತ್ತು ರಫ್ತು ಸೌಲಭ್ಯಗಳನ್ನು ಒಳಗೊಂಡ ಸಮಗ್ರ ಯೋಜನೆಯನ್ನು ರೂಪಿಸುವ ಉತ್ಪಾದನಾ ಆಧಾರಿತ ಪ್ರೋತ್ಸಾಹ ಯೋಜನೆಯನ್ನು ಜಾರಿ ಮಾಡುವ ಭರವಸೆಯನ್ನು ಪ್ರಣಾಳಿಕೆಯಲ್ಲಿ ಬಿಜೆಪಿ ನೀಡಿದೆ.
ಪ್ರವಾಸೋದ್ಯಮ ಅಭಿವೃದ್ಧಿ
ಆಧುನಿಕ ಮತ್ತು ಮೂಲ ಸೌಕರ್ಯಗಳನ್ನು ಒದಗಿಸಿ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸಿ ಜನರ ಆದಾಯ ಹೆಚ್ಚಿಸಲು ಕಲ್ಯಾಣ ಸರ್ಕ್ಯೂಟ್, ಬನವಾಸಿ ಸರ್ಕ್ಯೂಟ್, ಪರಶುರಾಮ ಸರ್ಕ್ಯೂಟ್ ಮತ್ತು ಕಾವೇರಿ ಸರ್ಕ್ಯೂಟ್, ಗಾಣಗಾಪುರ ಕಾರಿಡಾರ್‌ನ್ನು ಅಭಿವೃದ್ಧಿಪಡಿಸಲು ೧೫೦೦ ಕೋಟಿ ರೂ. ವಿನಿಯೋಗಿಸುವ ಭರವಸೆಯನ್ನು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ನೀಡಿದೆ.
ಈ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದಗೌಡ, ಕೇಂದ್ರ ಸಚಿವರುಗಳಾದ ಶೋಭಾ ಕರಂದ್ಲಾಜೆ, ಪ್ರಹ್ಲಾದ್ ಜೋಷಿ, ಭಗವಂತ ಖೂಬಾ, ರಾಜ್ಯದ ಸಚಿವರುಗಳಾದ ಆರ್. ಅಶೋಕ್, ಡಾ. ಕೆ. ಸುಧಾಕರ್ ಮತ್ತಿತರರು ಉಪಸ್ಥಿತರಿದ್ದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಬೆಂಗಳೂರಿನಲ್ಲಿಂದು ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದರು. ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದಗೌಡ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಚಿವರಿಂದ ಸುಧಾಕರ್, ಆರ್. ಅಶೋಕ್, ಶೋಭಾಕರಂದ್ಲಾಜೆ ಮತ್ತಿತರರು ಇದ್ದಾರೆ.
ಜನರ ಪ್ರಣಾಳಿಕೆ
ಜನರ ಹಿತದೃಷ್ಟಿಯನ್ನಿಟ್ಟುಕೊಂಡು ಬಿಜೆಪಿಯ ಪ್ರಣಾಳಿಕೆಯನ್ನು ತಯಾರಿಸಿದ್ದೇವೆ. ಪ್ರಣಾಳಿಕೆ ರಾಜ್ಯ ಸರ್ಕಾರ ನಡೆಯುವ ದಿಕ್ಕನ್ನು ತೋರಿಸುತ್ತದೆ ಎಂದು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಹೇಳಿದರು.
ಬೆಂಗಳೂರಿನಲ್ಲಿಂದು ಬಿಜೆಪಿಯ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲ ಮಾತನಾಡಿದ ಅವರು, ಇದು ಜನಪರ ಪ್ರಜಾ ಪ್ರಣಾಳಿಕೆಯಾಗಿದೆ. ಜನರಿಗೆ ಏನನ್ನು ಒಳ್ಳೆಯದು ಮಾಡಲು ಸಾಧ್ಯವಿದೆಯೋ ಅದನ್ನು ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದ್ದೇವೆ ಎಂದರು.
ಬಿಜೆಪಿಯ ಪ್ರಣಾಳಿಕೆಯಲ್ಲಿ ಕೃಷಿಗೆ ಹೆಚ್ಚು ಆದ್ಯತೆ ನೀಡಿದ್ದೇವೆ. ಈಗಾಗಲೇ ಬಜೆಟ್‌ನಲ್ಲೂ ಕೃಷಿಗೆ ಹೆಚ್ಚು ಆದ್ಯತೆ ನೀಡಲಾಗಿದ್ದು, ಅದನ್ನು ಪ್ರಣಾಳಿಕೆಯಲ್ಲೂ ಪ್ರಸಾಪಿಸಿದ್ದೇವೆ ಎಂದರು.ಈ ಪ್ರಣಾಳಿಕೆಯಲ್ಲಿ ಸಿರಿಧಾನ್ಯಗಳು ಉತ್ಪಾದನೆಗೆ ಪ್ರೋತ್ಸಾಹದ ಭರವಸೆ ಜತೆಗೆ ಮೀನುಗಾರರಿಗೂ ನೆರವಾಗುವ ಯೋಜನೆಗಳಿವೆ. ಪ್ರಣಾಳಿಕೆ ಯುವಕರು, ಕೃಷಿಕರು, ಮಹಿಳೆಯರು ಎಲ್ಲ ವರ್ಗದ ಸಬಲೀಕರಣದ ಯೋಜನೆಗಳನ್ನು ಒಳಗೊಂಡಿದೆ ಎಂದು ಅವರು ಹೇಳಿದರು.
ಬಿಎಸ್‌ಐ ಬೇಸರ
ಪ್ರಣಾಳಿಕೆಯನ್ನು ಸಂಪೂರ್ಣವಾಗಿ ಓದದೆ ಭಾಷಣ ಮಾಡಿ ಎಂದರೆ ಹೇಗೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಚುನಾವಣಾ ಪ್ರಣಾಳಿಕೆ ಬಿಡುಗಡೆಯಾದ ನಂತರ ಯಡಿಯೂರಪ್ಪ ರವರನ್ನು ಮಾತನಾಡಲು ಕರೆದಾಗ, ಯಡಿಯೂರಪ್ಪ ಅವರು ಪ್ರಣಾಳಿಕೆ ಪ್ರತಿಯನ್ನು ಪೂರ್ಣವಾಗಿ ಓದಿಲ್ಲ. ಭಾಷಣ ಮಾಡು ಅಂದರೆ ಹೇಗೆ ಪ್ರತಿಯನ್ನು ಮೊದಲೇ ಕೊಡಬೇಕಿತ್ತು ಎಂದು ಅಸಮಾಧಾನ ಹೊರ ಹಾಕಿದರು.
ನಂತರ ಯಡಿಯೂರಪ್ಪನವರು ಪ್ರಣಾಳಿಕೆಯ ಪ್ರತಿ ಹಿಡಿದು ಪ್ರಣಾಳಿಕೆಯಲ್ಲಿರುವ ಅಂಶಗಳನ್ನು ಪ್ರಸ್ತಾಪಿಸುವ ಗೋಚಿಗೆ ಹೋಗದೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಸೂರ್ಯ-ಚಂದ್ರರಿರುವಷ್ಟೇ ಸತ್ಯ. ನಾವು ಬಹುಮತ ಪಡೆಯುತ್ತೇವೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಪ್ರಣಾಳಿಕೆಯಲ್ಲಿರುವ ಎಲ್ಲ ಅಂಶಗಳನ್ನು ಜಾರಿಗೊಳಿಸುತ್ತವೆ ಎಂದಷ್ಟೇ ಹೇಳಿ ಭಾಷಣ ಮುಗಿಸಿದರು.