ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬದ್ಧ: ಮೋದಿ

ಕೈ ವಿರುದ್ಧ ಕಿಡಿ

ನವದೆಹಲಿ, ಏ. ೨೯- ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಸಂಪತ್ತು ಹಂಚಿಕೆಯಾಗಲಿದೆ ಎಂಬ ಕಾಂಗ್ರೆಸ್ ನಾಯಕರ ವಿವಾದಾತ್ಮಕ ಹೇಳಿಕೆಯನ್ನು ಚುನಾವಣಾ ಅಸ್ತ್ರವನ್ನಾಗಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರು ಕಾಂಗ್ರೆಸ್‌ನ ಸಂಪತ್ತು ಹಂಚಿಕೆ ವಿಚಾರವನ್ನೇ ಪ್ರಧಾನವನ್ನಾಗಿಟ್ಟುಕೊಂಡು ಕಾಂಗ್ರೆಸ್ ವಿರುದ್ಧ ಚುನಾವಣಾ ಪ್ರಚಾರದಲ್ಲಿ ವಾಗ್ದಾಳಿ ನಡೆಸಿ, ಏಕರೂಪ ನಾಗರಿಕ ಸಂಹಿತೆಯ ಜಪ ಮಾಡುತ್ತಿದ್ದಾರೆ.
ಲೋಕಸಭೆ ಚುನಾವಣೆಯ ಪ್ರಚಾರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಆಂಗ್ಲ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅವರು ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ಬಿಜೆಪಿಯ ಬದ್ಧತೆ ಈಡೇರಿಸಲು ನಿರ್ಧರಿಸಲಾಗಿದೆ ಎಂದು ಅವರು ಘೋಷಿಸಿದ್ದಾರೆ.
”ಧರ್ಮದ ಆಧಾರದ ಮೇಲೆ ಮೀಸಲಾತಿ ಕಲ್ಪಿಸುವ ಕಾನೂನನ್ನು ಜಾರಿಗೊಳಿಸುವ ಮೂಲಕ ಕಾಂಗ್ರೆಸ್ ಸಂವಿಧಾನವನ್ನು ಉಲ್ಲಂಘಿಸು ಪ್ರಯತ್ನ ನಡೆಸಿದೆ ಎನ್ನುವುದನ್ನು ತೋರಿಸುವುದು ಧ್ರುವೀಕರಣವಲ್ಲ,” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಹಿಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ರಾಷ್ಟ್ರದ ಸಂಪನ್ಮೂಲಗಳ ಮೇಲೆ ಮುಸ್ಲಿಮರಿಗೆ ನೀಡುವಲ್ಲಿ ಮೊದಲ ಹಕ್ಕು ಇದೆ ಎಂದು ಹೇಳಿದ್ದರು, ಇದು ಬಹುಸಂಖ್ಯಾತರ ಹಕ್ಕು ಕಸಿಯುವ ಹುನ್ನಾರ ಹೊಂದಲಾಗಿತ್ತು ಎಂದು ದೂರಿದ್ದಾರೆ.
ದೇಶದಲ್ಲಿ ವಿವಿಧ “ಸಮುದಾಯಗಳಿಗೆ ಪ್ರತ್ಯೇಕ ಕಾನೂನುಗಳು ಸಮಾಜದ ಸ್ವಾಸ್ಥ್ಯ ಹಾಳುಮಾಡುತ್ತವೆ ಎಂಬುದು ಸ್ಪಷ್ಟವಾಗಿದೆ. ಒಂದು ಸಮುದಾಯ ಸಂವಿಧಾನದ ಬೆಂಬಲದೊಂದಿಗೆ ಪ್ರಗತಿ ಹೊಂದುತ್ತಿರುವಾಗ ಇನ್ನೊಂದು ಸಮುದಾಯ ತುಷ್ಟೀಕರಣದಿಂದ ಕಾಲಾನಂತರದಲ್ಲಿ ಮುಂದುವರಿದ ರಾಷ್ಟ್ರವಾಗಲು ಸಾಧ್ಯವಿಲ್ಲ. ಅಂತಹುದಕ್ಕೆ ನಾವು ಅವಕಾಶ ಮಾಡಿಕೊಡುವುದಿಲ್ಲ ಎಂದಿದ್ದಾg.
‘ಒಂದು ರಾಷ್ಟ್ರ-ಒಂದು ಚುನಾವಣೆ’ ಯೋಜನೆಯಲ್ಲಿ ಮುಂದುವರಿಯುವ ಪ್ರತಿಜ್ಞೆಯನ್ನು ಮತ್ತೊಮ್ಮೆ ಪುನರುಚ್ಚರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ‘ಧರ್ಮಾಧಾರಿತ ಕೋಟಾವನ್ನು ಕಾಂಗ್ರೆಸ್ ತಂದಿದೆ ಎಂದು ತೋರಿಸಲು ಧ್ರುವೀಕರಣ ಮಾಡುತ್ತಿಲ್ಲ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಅಲ್ಪಸಂಖ್ಯಾತರ, ವಕ್ಫ್ ಬೋರ್ಡ್‌ನ ಆಸ್ತಿ ಹಂಚಿಕೆ ಮಾಡಬೇಕು ಎಂಬುದು ಕಾಣುತ್ತಿಲ್ಲ. ಅವರದೇನಿದ್ದರೂ ಅಲ್ಪಸಂಖ್ಯಾತರನ್ನು ಹೊರತುಪಡಿಸಿದವರ ಸಂಪತ್ತು ಹಂಚಿಕೆಯದ್ದೇ ಯೋಚನೆ ಎಂದು ಕಟು ಶಬ್ದಗಳಲ್ಲಿ ಟೀಕಿಸುತ್ತಿದ್ದಾರೆ.
ದೇಶದಲ್ಲಿ ಎರಡು ಹಂತಗಳ ಚುನಾವಣೆ ಮುಗಿದು ೩ನೇ ಹಂತದ ಚುನಾವಣಾ ಪ್ರಚಾರ ಬಿರುಸು ಪಡೆದಿರುವಾಗಲೇ ಪ್ರಧಾನಿಯವರು ಕಾಂಗ್ರೆಸ್‌ನ ಸಂಪತ್ತು ಹಂಚಿಕೆ ಹೇಳಿಕೆಯ ಬೆಂಕಿಗೆ ತುಪ್ಪ ಸುರಿಯುವಂತೆ ಕಾಂಗ್ರೆಸ್ ವಿರುದ್ಧ ಹೋದೆಡೆಯಲ್ಲೆಲ್ಲಾ ಹರಿಹಾಯ್ದು ಕಾಂಗ್ರೆಸ್ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿದೆ. ಅಲ್ಪಸಂಖ್ಯಾತರ ಆಸ್ತಿ, ವಕ್ಫ್ ಬೋರ್ಡ್ ಆಸ್ತಿಯನ್ನು ಬಿಟ್ಟು ಬೇರೆ ಸಮುದಾಯದ ಆಸ್ತಿ ಹಂಚಲು ಹೊರಟಿದೆ ಎಂದು ಹೇಳುವ ಮೂಲಕ ಹಿಂದುತ್ವದ ಅಸ್ತ್ರವನ್ನು ಝಳಪಿಸಿದ್ದಾರೆ.
ಕಾಂಗ್ರೆಸ್‌ಗೆ ಅಲ್ಪಸಂಖ್ಯಾತರ, ವಕ್ಫ್ ಬೋರ್ಡ್‌ನ ಆಸ್ತಿ ಹಂಚಿಕೆ ಮಾಡುವ ಇಚ್ಛೆ ಇಲ್ಲ. ಅದಕ್ಕೆ ಕಾಂಗ್ರೆಸ್‌ಗೆ ಈ ಸಮುದಾಯದ ಸಂಪತ್ತನ್ನು ಹಂಚಿಕೆ ಮಾಡುವಷ್ಟು ಧ್ಯೇಯವೂ ಇಲ್ಲ. ಆದರೆ ಕಾಂಗ್ರೆಸ್ ಬೇರೆ ಸಮುದಾಯದ ಸಂಪತ್ತು ಹಂಚಿಕೆಯ ಮಾತನಾಡುತ್ತಿದೆ. ಇದು ಸರಿಯಲ್ಲ. ಈ ರೀತಿಯ ಸಂಪತ್ತು ಹಂಚಿಕೆಗೆ ನಾನು ಅವಕಾಶ ಕೊಡಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್‌ನ ಈ ತುಷ್ಟೀಕರಣ ನೀತಿಗೆ ಪಾಠ ಕಲಿಸಿ, ವೋಟ್ ಬ್ಯಾಂಕ್‌ನ್ನು ಓಲೈಸಲು ಬೇರೆಯವರ ಸಂಪತ್ತನ್ನು ಕಾಂಗ್ರೆಸ್‌ನ ವೋಟ್ ಬ್ಯಾಂಕ್ ಆಗಿರುವ ಸಮುದಾಯಕ್ಕೆ ಹಂಚುವ ಕಾಂಗ್ರೆಸ್ ಪಕ್ಷದ ಹುನ್ನಾರಕ್ಕೆ ಪಾಠ ಕಲಿಸಿ ಎಂದು ಪ್ರಧಾನಿ ಮೋದಿ ಹೇಳುವ ಮೂಲಕ ಅಲ್ಪಸಂಖ್ಯಾತರನ್ನು ಹೊರತುಪಡಿಸಿ ಇತರೆ ಸಮುದಾಯದ ಮತಗಳ ಕ್ರೂಢೀಕರಣಕ್ಕೂ ಮುಂದಾಗಿದ್ದಾರೆ.
ಕಾಂಗ್ರೆಸ್‌ನ ಸಂಪತ್ತು ಹಂಚಿಕೆ ನೀತಿ ಯೋಚನೆ ಸಮಾಜದಲ್ಲಿ ಸ್ವಾಸ್ಥ್ಯ ಕೆಡಿಸಲಿದೆ. ಕೋಮು ಸೌಹಾರ್ದಕ್ಕೂ ಧಕ್ಕೆ ತರಲಿದೆ ಎಂಬ ಮಾತುಗಳನ್ನು ಹೇಳುತ್ತಿರುವ ಪ್ರಧಾನಿ ಮೋದಿಯವರು, ಯಾವುದೇ ಕಾರಣಕ್ಕೂ ಸಂಪತ್ತು ಹಂಚಿಕೆಯ ಕಾಂಗ್ರೆಸ್‌ನ ಕನಸಿಗೆ ನಾನು ಅವಕಾಶ ಕೊಡುವುದಿಲ್ಲ. ಮೋದಿ ಇರುವವರೆಗೂ ಸಂಪತ್ತು ಹಂಚಿಕೆಯ ಕಾಂಗ್ರೆಸ್‌ನ ಕನಸು ನನಸಾಗುವುದಿಲ್ಲ ಎಂದು ಗುಡುಗಿದ್ದಾರೆ.
ಕಾಂಗ್ರೆಸ್ ಪಕ್ಷ ಹಿಂದೂಗಳ ಮಂಗಳ ಸೂತ್ರವನ್ನೆ ಕಸಿಯಲು ಹೊರಟಿದೆ. ಇದಕ್ಕೆಲ್ಲಾ ಅವಕಾಶ ಕೊಡಲ್ಲ. ಹಿಂದೂಗಳ ಸಂಪತ್ತನ್ನು ಪಡೆದು ಅದನ್ನು ಕಾಂಗ್ರೆಸ್‌ನ ಮತ ಬ್ಯಾಂಕ್‌ಗೆ ಹಂಚುವ ಕಾಂಗ್ರೆಸ್ ನಾಯಕರ ನೀತಿ ಖಂಡನೀಯ. ಇದಕ್ಕೆಲ್ಲ ಬಿಜೆಪಿ ಅವಕಾಶ ಕೊಡಲ್ಲ ಎಂದಿದ್ದಾರೆ.
ತುಷ್ಟೀಕರಣದ ವಿರುದ್ಧ ಬಿಜೆಪಿ ಸಮರ ಸಾರಿದೆ. ಮುಂದಿನ ದಿನಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿ ಮಾಡುತ್ತೇವೆ. ಈ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವ ಬದ್ಧತೆ ತಮ್ಮದಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.