ಏಕರೂಪದ ಜಾತಿ ಪ್ರಮಾಣ ಪತ್ರ ನೀಡಲು ಆಗ್ರಹ

ನ್ಯಾಮತಿ.ಜ.೭; ರಾಜ್ಯದಲ್ಲಿ ವಿವಿಧ ಹೆಸರಿನಲ್ಲಿರುವ ಕುಂಬಾರ ಸಮುದಾಯಕ್ಕೆ ಏಕ ರೂಪದ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ನ್ಯಾಮತಿ ತಾಲ್ಲೂಕು ಘಟಕದ ಕರ್ನಾಟಕ ಕುಂಬಾರರ ಯುವಸೈನ್ಯ, ಶಾಲಿವಾಹನ ಕುಂಬಾರ ಸಂಘ ಹಾಗೂ ಸಿದ್ದಿವಿನಾಯಕ ಕುಂಬಾರ ಮಹಿಳಾ ಸಂಘದ ಪದಾಧಿಕಾರಿಗಳು ಪಟ್ಟಣದ ಕಲ್ಲುಮಠ ದೇವಸ್ಥಾನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ  ಆಗ್ರಹಿಸಿದರು. ಅಧ್ಯಕ್ಷ ಹೊಸಮನೆ ಮಲ್ಲಿಕಾರ್ಜುನ ಮಾತನಾಡಿ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಹಾವೇರಿ ಜಿಲ್ಲೆಗಳನ್ನು  ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ನಮ್ಮ ಸಮುದಾಯಕ್ಕೆ 2ಎ ಜಾತಿ ಪ್ರಮಾಣ ಪತ್ರ ನೀಡುತ್ತಿದ್ದಾರೆ. 4 ಜಿಲ್ಲೆಗಳ ಆಡಳಿತ ನಿರ್ಧಾರದಿಂದ ಸಮುದಾಯದ ವಿದ್ಯಾರ್ಥಿಗಳಿಗೆ, ಉದ್ಯೋಗ, ಚುನಾವಣೆಯಲ್ಲಿ ಸ್ಪರ್ಧಿಸುವುದು  ಸೇರಿದಂತೆ ಸರ್ಕಾರದ ಸೌಲಭ್ಯ ಸಿಗುತ್ತಿಲ್ಲ, ಈ ಸಂಬಂಧ ಶಾಸಕರು, ಸಚಿವರು ಹಾಗೂ ಸಂಸದರ ಗಮನಕ್ಕೆ ತಂದರೂ ಉಪಯೋಗವಾಗಿಲ್ಲ ಎಂದರು. ಗೌರವಾಧ್ಯಕ್ಷ  ಕತ್ತಿಗೆ ಗಂಗಾಧರಪ್ಪ ಮಾತನಾಡಿ, ಕುಂಬಾರರ ಬೇಡಿಕೆಗಳನ್ನು ಈಡೇರಿಸುವಂತೆ ಬೆಂಗಳೂರಿನ ಪ್ರೀಡಂ ಪಾರ್ಕನಲ್ಲಿ ಕಳೆದ ಭಾನುವಾರ ಮತ್ತು  ಬೃಹತ್ ಚಲೋ ಬೆಂಗಳೂರು ಪ್ರತಿಭಟನೆ ನಡೆಸಲಾಯಿತು. ಮುಖ್ಯಮಂತ್ರಿಗಳಿಗೆ ಹಾಗೂ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಅವರಿಗೆ ಮನವಿ ಸಲ್ಲಿಸಿದ್ದು, ಸಕಾರತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಯುವಸೈನ್ಯ ತಾಲ್ಲೂಕು ಅಧ್ಯಕ್ಷ ಎಚ್.ಎಂ. ವಾಗೀಶ, ಜಿಲ್ಲಾ ಯುವಸೈನ್ಯ ಅಧ್ಯಕ್ಷೆ ಕೆ.ಆರ್. ಸುಧಾ, ಮಹಿಳಾ ಸಂಘದ ಅಧ್ಯಕ್ಷೆ ದೊಡ್ಮನೆ ಯಶೋದಮ್ಮ, ಪದಾಧಿಕಾರಿಗಳಾದ ಇಂದ್ರಮ್ಮ, ಎಚ್.ಎಂ. ಉಮೇಶ, ಹರೀಶ ದೊಡ್ಮನೆ, ಕೆ.ವಿ ಹಾಲೇಶ, ಜಿ. ಗಣೇಶ, ಕೆ.ಎಲ್. ವಿನಯ ಇದ್ದರು.