ಏಕಮುಖ ಸಂಚಾರ ವ್ಯವಸ್ಥೆ ಖಂಡಿಸಿ ನಾಗರಿಕರ ಪ್ರತಿಭಟನೆ  


ಮಂಗಳೂರು, ಜು.೧೮- ನಗರದ ಹ್ಯಾಮಿಲ್ಟನ್ ಸರ್ಕಲ್- ಸ್ಟೇಟ್‌ಬ್ಯಾಂಕ್‌ನಿಂದ ಬಂದರು ಪ್ರದೇಶಕ್ಕೆ ತೆರಳುವ ನೆಲ್ಲಿಕಾಯಿ ರಸ್ತೆಯಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಕಲ್ಪಿಸಿರುವುದನ್ನು ಖಂಡಿಸಿ ಸಾರ್ವಜನಿಕರು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದ್ದಾರೆ.
ಈ ವೇಳೆ ಕಾರ್ಪೊರೇಟರ್ ಅಬ್ದುಲ್ ಲತೀಫ್ ಕಂದಕ್ ಮಾತನಾಡಿ ಸ್ಟೇಟ್‌ಬ್ಯಾಂಕ್‌ನಿಂದ ಬಂದರು, ಕುದ್ರೋಳಿ ಮತ್ತಿತರ ಕಡೆಗಳಿಗೆ ಸಂಪರ್ಕ ಕಲ್ಪಿಸುವ ನೆಲ್ಲಿಕಾಯಿ ರಸ್ತೆಯನ್ನು ಏಕ ಮುಖ ರಸ್ತೆಯನ್ನಾಗಿ ಮಾಡಿರುವುದು ಸರಿಯಲ್ಲ. ಇದೊಂದು ಅವೈಜ್ಞಾನಿಕ ಕ್ರಮವಾಗಿದೆ. ಅಲ್ಲದೆ ಈ ಭಾಗದ ಜನಪ್ರತಿನಿಧಿಗಳನ್ನು ಕೂಡ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಾಎಕಿ ಏಕಮುಖ ಸಂಚಾರ ವ್ಯವಸ್ಥೆ ಮಾಡಿರುವುದರಿಂದ ಜನಸಾಮಾನ್ಯರಿಗೆ, ವಾಹನಿಗರಿಗೆ ತೊಂದರೆಯಾಗಲಿದೆ ಎಂದರು. ರಸ್ತೆ ಅಗಲೀಕರಣದಿಂದ ಜನರಿಗೆ ಅನುಕೂಲವಾಗಬೇಕೇ ವಿನಃ ತೊಂದರೆಯಾಗಬಾರದು. ರಸ್ತೆ ಅಗಲೀಕರಣ ಗೊಳಿಸಿ ಶ್ರೀಮಂತರ ಕಾರುಗಳನ್ನು ಪಾರ್ಕಿಂಗ್ ಮಾಡಲು ಮುಂದಾಗುವ ಪಾಲಿಕೆಯ ಆಡಳಿತವು ಜನ ಸಾಮಾನ್ಯರಿಗೆ ತೊಂದರೆ ಕೊಡುವುದು ಯಾವ ನ್ಯಾಯ ಎಂದು ಅಬ್ದುಲ್ ಲತೀಫ್ ಕಂದಕ್ ಪ್ರಶ್ನಿಸಿದರು. ಮಾಜಿ ಮೇಯರ್ ಶಶಿಧರ ಹೆಗ್ಡೆ, ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್, ಕಾರ್ಪೊರೇಟರ್ ನವೀನ್ ಡಿಸೋಜ, ಜೆಡಿಎಸ್ ಮುಖಂಡ ಮುನೀರ್ ಮುಕ್ಕಚೇರಿ ಮತ್ತಿತರರು ಬೆಂಬಲ ನೀಡಿದರು. ಸಂಚಾರ ವಿಭಾಗದ ಎಸಿಪಿ ಸ್ಥಳಕ್ಕೆ ಆಗಮಿಸಿ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಡುವ ಭರವಸೆ ನೀಡಿದ ಬಳಿಕ ಪ್ರತಿಭಟನಾ ನಿರತರು ಸ್ಥಳದಿಂದ ತೆರಳಿದರು.