ಏಕದಿನ ಕ್ರಿಕೆಟ್ ಗೆ ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಗುಡ್ ಬೈ

ಲಂಡನ್, ಜು.18- ಇಂಗ್ಲೆಂಡ್‌ ಕ್ರಿಕೆಟ್ ತಂಡದ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಏಕದಿನ ಕ್ರಿಕೆಟ್‌ಗೆ ಇಂದು ಗುಡ್ ಬೈ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಅಂತಾರಾಷ್ಟ್ರೀಯ ಪಂದ್ಯ ನಡೆಯಲಿದ್ದು, ಇದು ನನ್ನ ಕೊನೆಯ ಪಂದ್ಯ ಎಂದು ಅವರು ಟ್ವೀಟ್ ಮಾಡಿದ್ದಾರೆ .
ಸ್ಟೋಕ್ಸ್ 104 ಏಕದಿನ ಕ್ರಿಕೆಟ್‌ ಪಂದ್ಯಗಳನ್ನು ಆಡಿದ್ದಾರೆ. ತವರು ಮೈದಾನವಾದ ಸೀಟ್ ಯೂನಿಕ್ ರಿವರ್‌ಸೈಡ್‌ನಲ್ಲಿ ತಮ್ಮ ಅಂತಾರಾಷ್ಟ್ರೀಯ ವೃತ್ತಿ ಜೀವನವನ್ನು ಕೊನೆಗೊಳಿಸಲು ಸ್ಟೋಕ್ಸ್‌ ನಿರ್ಧರಿಸಿದ್ದಾರೆ.
ಡರ್ಹಾಮ್‌ನಲ್ಲಿ ನಾಳೆ ಏಕದಿನ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ಗಾಗಿ ನನ್ನ ಕೊನೆಯ ಪಂದ್ಯವನ್ನು ಆಡುತ್ತೇನೆ. ಆ ಮೂಲಕ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ಇದು ಕಠಿಣ ನಿರ್ಧಾರವಾಗಿದೆ. ನಾನು ಇಂಗ್ಲೆಂಡ್‌ಗಾಗಿ ನನ್ನ ಸಹ ಆಟಗಾರರೊಂದಿಗೆ ಆಡಿದ ಪ್ರತಿ ಕ್ಷಣವನ್ನು ಪ್ರೀತಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
ನಾನು ಇಲ್ಲಿಯವರೆಗೆ ಆಡಿದ ಎಲ್ಲಾ 104 ಪಂದ್ಯಗಳನ್ನು ಆನಂದಿಸಿದ್ದೇನೆ. ನನಗೆ ಇನ್ನೊಂದು ಪಂದ್ಯ ಸಿಕ್ಕಿದೆ. ಡೆರ್ಹಾಮ್‌ನಲ್ಲಿರುವ ನನ್ನ ತವರು ಮೈದಾನದಲ್ಲಿ ಕೊನೆಯ ಪಂದ್ಯವನ್ನು ಆಡುತ್ತಿರುವುದು ಸ್ಮರಣೀಯವಾಗಿದೆ ಎಂದಿದ್ದಾರೆ.