ಏಕತೆಯೇ ಎಲ್ಲರ ಮೂಲಮಂತ್ರವಾಗಲಿ : ಎಚ್.ಬಿ.ಪಾಟೀಲ

ಕಲಬುರಗಿ,ಡಿ.20: ದೇಶದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ಜಾತಿ, ಧರ್ಮ, ಭಾಷೆ, ಪ್ರದೇಶ ಸೇರಿದಂತೆ ಮುಂತಾದ ಅಂಶಗಳ ಮೇಲೆ ಬೇಧ-ಭಾವ ಮಾಡಿದರೆ ಸಮಾಜದ ಶಾಂತಿ ಹಾಳಾಗುತ್ತದೆ. ಎಲ್ಲರು ಒಂದೇ ಎಂಬ ಐಕ್ಯತೆಯ ಮನೋಭಾವ ಮೂಡಿದಾಗ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಿ, ದೇಶದ ಪ್ರಗತಿ ಸಾಧ್ಯವಿದ್ದು, ಇದಕ್ಕೆ ಏಕತೆಯೇ ಪ್ರತಿಯೊಬ್ಬರ ಮೂಲಮಂತ್ರವಾಗಬೇಕಾಗಿದೆ ಎಂದು ಉಪನ್ಯಾಸಕ, ಸಾಮಾಜಿಕ ಚಿಂತಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ಆಳಂದ ರಸ್ತೆಯ ಶಿವ ನಗರದ ‘ಜ್ಞಾನ ಚಿಗುರು ಟ್ಯುಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಜರುಗಿದ ‘ಅಂತಾರಾಷ್ಟ್ರೀಯ ಮಾನವ ಐಕ್ಯತಾ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಒಬ್ಬ ವ್ಯಕ್ತಿಯ ಉನ್ನತ ಬೆಳವಣಿಗೆಯಲ್ಲಿ ಸತ್ಯ, ಪ್ರಾಮಾಣಿಕತೆ, ನಿಸ್ವ್ವಾರ್ಥತೆಯಂತಹ ಮುಂತಾದ ಮೌಲ್ಯಗಳು ತುಂಬಾ ಸಹಕಾರಿಯಾಗುತ್ತವೆ. ಇದೇ ರೀತಿ ದೇಶದ ಬೆಳವಣಿಗೆಯಲ್ಲಿ ಆ ರಾಷ್ಟ್ರದಲ್ಲಿರುವ ಜನರ ಐಕ್ಯತೆ ತುಂಬಾ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಇಡೀ ಜಗತ್ತಿಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವ ಭಯೋತ್ಪಾದನೆಯು ಐಕ್ಯತೆಯ ಕೊರತೆಯಿಂದ ಉಂಟಾಗುತ್ತಿದೆ. ಪ್ರತಿಯೊಬ್ಬರು ಪರಸ್ಪರ ಪ್ರೀತಿ, ಭಾತ್ರತ್ವ, ಸೌಹಾರ್ಧತೆಯಿಂದ ಸಹ ಜೀವನ ಸಾಗಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಶಿವಯೋಗಪ್ಪ ಬಿರಾದಾರ, ದೇವೇಂದ್ರಪ್ಪ ಗಣಮುಖಿ, ಅಣ್ಣಾರಾಯ ಎಚ್.ಮಂಗಾಣೆ, ಶ್ರೀನಿವಾಸ, ಸಂತೋಷಕುಮಾರ, ಶಿವಾನಂದ, ಪ್ರವೀಣ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.