ಏಕಕಾಲ ಸಾಲ ತೀರುವಳಿ’ಗೆ ರೈತರ ಆಗ್ರಹ


ಸಂಜೆವಾಣಿ ವಾರ್ತೆ
 ಬಳ್ಳಾರಿ, ಜ. 22: ಕೆನರಾಬ್ಯಾಂಕ್ ಪ್ರಾಯೋಜಿತ ಆಂಧ್ರ ಪ್ರಗತಿ ಗ್ರಾಮೀಣ ಬ್ಯಾಂಕ್‍ನ ಮಾದರಿಯಲ್ಲೇ ಓಟಿಎಸ್ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಪ್ರತಿಭಟನಾ ಸ್ಥಳಕ್ಕೆ ವಿಧಾನಪರಿಷತ್ತು ಸದಸ್ಯ ವೈ.ಎಂ. ಸತೀಶ್ ಅವರು ಭೇಟಿ ಮಾಡಿ, ರೈತರ ಬೇಡಿಕೆಗಳ ಕುರಿತು ಚರ್ಚೆ ನಡೆಸಿದ್ದಾರೆ.
ಪ್ರತಿಭಟನಾ ನಿರತರ ಸ್ಥಳಕ್ಕೆ ಭೇಟಿ ನೀಡಿದ ವೈ.ಎಂ. ಸತೀಶ್ ಅವರು, ಕೆನರಾ ಬ್ಯಾಂಕು ಪ್ರಾಯೋಜಿತ ಆಂಧ್ರ ಪ್ರಗತಿ ಗ್ರಾಮೀಣ ಬ್ಯಾಂಕು ಮತ್ತು ಕರ್ನಾಟಕ ಗ್ರಾಮೀಣ ಬ್ಯಾಂಕು ಅನ್ನು ಪ್ರಾಯೋಜಿಸಿದೆ. ಆದರೂ, ಕರ್ನಾಟಕದಲ್ಲಿ ಆಂಧ್ರ ಗ್ರಾಮೀಣ ಬ್ಯಾಂಕಿನ ರೀತಿ ಓಟಿಎಸ್ ಸೌಲಭ್ಯ ನೀಡುತ್ತಿಲ್ಲ. ಕೆನರಾಬ್ಯಾಂಕು ಕರ್ನಾಟಕ ಮತ್ತು ಆಂಧ್ರದ ರೈತರ ನಡುವೆ ಬೇರೆ ಬೇರೆಯ ರೀತಿಯ ಆಡಳಿತ ನಡೆಸುತ್ತಿರುವುದು ರೈತ ವಿರೋಧಿ ನೀತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ ಕೃಷಿ ಸಾಲ ಪಡೆದಿರುವ ರೈತರು ಓಟಿಎಸ್ (ಏಕಕಾಲ ಸಾಲ ತೀರುವಳಿ) ಮೂಲಕ ಸಾಲ ಮರುಪಾವತಿಗೆ ಸಿದ್ದವಿದ್ದು, ಅರ್ಹ ರೈತರ ಪಟ್ಟಿಯನ್ನು ಬ್ಯಾಂಕು ಅಧಿಕೃತವಾಗಿ – ಶಾಖಾವಾರು ಪ್ರಕಟ ಮಾಡಬೇಕು ಎಂದು ಆಗ್ರಹಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಾಯಧನ, ಪಿಂಚಣಿ ಹಣವನ್ನು ಬ್ಯಾಂಕಿನ ಅಧಿಕಾರಿಗಳು ಸಾಲಕ್ಕೆ ಜಮಾ ಮಾಡುತ್ತಿದ್ದು, ಬಂಗಾರದ ಒಡವೆಗಳ ಒತ್ತೆ ಸಾಲದ ಹಣವನ್ನು ಮರುಪಾವತಿಸಿದ ನಂತರ ಬ್ಯಾಂಕಿನವರು ಬಂಗಾರದ ಒಡವೆಗಳನ್ನು ರೈತರಿಗೆ ಹಿಂದಿರುಗಿಸುತ್ತಿಲ್ಲ ಎಂದರು.
ಶಾಸಕ ವೈ.ಎಂ. ಸತೀಶ್ ಅವರು, ಕರ್ನಾಟಕ ಗ್ರಾಮೀಣ ಬ್ಯಾಂಕಿನ ಅಧಿಕಾರಿಗಳನ್ನು ಭೇಟಿ ಮಾಡಿ, ಬ್ಯಾಂಕಿನ ನೀತಿಗಳು ಮತ್ತು ಷರತ್ತುಗಳಿಗೆ ಅನ್ವಯವಾಗಿ ಓಟಿಎಸ್ ಸೌಲಭ್ಯ ಪಡೆಯಲು ಅರ್ಹ ರೈತರ ಪಟ್ಟಿಯನ್ನು ಪ್ರಕಟಿಸಲು ತಿಳಿಸಿದಾಗ, ಓಟಿಎಸ್‍ಗೆ ಅರ್ಜಿ ಸಲ್ಲಿಸಿದ ಕೃಷಿ ಸಾಲ ಪಡೆದವರ ಅರ್ಜಿಯನ್ನು ಪರಿಗಣಿಸುವುದಾಗಿ ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಹಣವನ್ನು ಸಾಲದ ಖಾತೆಗೆ ಜಮಾ ಮಾಡಿಕೊಂಡಿದ್ದಲ್ಲಿ ಆ ಮೊತ್ತವನ್ನು ಸಾಲಗಾರರ ಖಾತೆಗಳಿಗೆ ಹಿಂದಿರುಗಿಸಲಾಗಿದೆ. ಅಂಥಹ ಪ್ರಕರಣಗಳು ಇದ್ದಲ್ಲಿ, ಬ್ಯಾಂಕಿನ ಗಮನಕ್ಕೆ ತಂದಲ್ಲಿ ಹಣವನ್ನು ಬ್ಯಾಂಕಿನ ಖಾತೆಗೆ ಹಿಂದಿರುಗಿಸಲಾಗುತ್ತದೆ ಎಂದು ಬ್ಯಾಂಕಿನ ಹಿರಿಯ ಅಧಿಕಾರಿಗಳಾದ ನಿಂಗೇಗೌಡ ಮತ್ತು ಶಿವಶಂಕರೇಗೌಡ ಅವರು ತಿಳಿಸಿದ್ದಾರೆ.