ಏಕಕಾಲದಲ್ಲಿ ಸೆಟ್ಟೇರಿದ 6 ಚಿತ್ರಗಳು

ಒಂದು ಸಿನಿಮಾ ಮಾಡಿ ಸೈ ಎನಿಸಿಕೊಳ್ಳಲು ಹರಸಾಹಸ ನಡೆಸುವ ಸಮಯದಲ್ಲಿ ಏಕಕಾಲಕ್ಕೆ 6 ಸಿನಿಮಾಗಳನ್ನು ನಿರ್ಮಾಣ ಮಾಡುವುದು ನಿಜಕ್ಕೂ  ಸಾಹಸ. ಅಂತ ಸಾಹಸಕ್ಕೆ  ಬಿಜು ಶಿವಾನಂದ್ ಕೈ ಹಾಕಿದ್ದಾರೆ. ಕನ್ನಡ ತಮಿಳು, ಮಲಯಾಳಂ, ತುಳು, ಕೊಂಕಣಿ ಭಾಷೆಗಳಲ್ಲಿ ಸಿನಿಮಾಗಳು ಮೂಡಿಬರಲಿವೆ.

 ‘ಸ್ಥಂಭಂ’, ‘ಸಮರ್ಥ್’, ‘ಮಂಗಳೂರು’ ಮತ್ತು ‘ಫೆಬ್ರವರಿ 29 ಸೂರ್ಯಗಿರಿ’ ಚಿತ್ರಗಳ ಶೀರ್ಷಿಕೆ ಅನಾವರಣ ಕಾರ್ಯಕ್ರಮ ನಡೆಯಿತು. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ತಂಡಕ್ಕೆ  ಶುಭಕೋರಿದರು. ಉಮೇಶ್ ಬಣಕಾರ್ ,ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ, ಕನ್ನಡ ಕಲಿಯಲು  ಚಿತ್ರತಂಡಕ್ಕೆ ಸಲಹೆ ನೀಡಿದರು‌.

 ‘ಸಮರ್ಥ್’ ಚಿತ್ರಕ್ಕೆ ತಮಿಳಿನಲ್ಲಿ ‘ವೇದಾದ್ರಿ’ ಎಂದು ಹೆಸರು ಇಡಲಾಗಿದೆ.  ರಾಜಾ ವೆಂಕಯ್ಯ ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡದಲ್ಲಿ ಪ್ರವೀರ್ ಶೆಟ್ಟಿ ಮತ್ತು ಸೋನಲ್ ಮೊಂತೆರೋ ಅಭಿನಯಿಸುತ್ತಿದ್ದಾರೆ. ತಮಿಳಿನಲ್ಲಿ ಕಿಶೋರ್ ಮತ್ತು ಏಸ್ತರ್ ನರೋನಾ ನಟಿಸುತ್ತಿದ್ದಾರೆ. ಪ್ರತಾಪ್ ಪೋತನ್, ಅವಿನಾಶ್, ಪವಿತ್ರಾ ಲೋಕೇಶ್, ಸಂದೀಪ್ ಮಲಾನಿ ಚಿತ್ರಗಳಲ್ಲಿ ನಟಿಸಲಿದ್ದಾರೆ. ಕಾರ್ತಿಕ್ ಸುಬ್ರಹ್ಮಣ್ಯಂ ಛಾಯಾಗ್ರಹಣ, ಭಾರದ್ವಾಜ್ ಸಂಗೀತ ನಿರ್ದೇಶನ ಮಾಡಲಿದ್ದಾರೆ.

 ‘ಸ್ತಂಭಂ’ನಲ್ಲಿ ‘ಕೆಜಿಎಫ್’ ಖ್ಯಾತಿಯ ನಟ ಗರುಡ ರಾಮ್ ಬಣ್ಣ ಹಚ್ಚಲಿದ್ದಾರೆ. ಸಂದೀಪ್ ಶೆರಾವತ್ ನಾಯಕನಾಗಿ ನಟಿಸಲಿದ್ದಾರೆ. ಆಲಿಯಾ ಮತ್ತು ರಕ್ಷಿತ್ ಸಿನಿಮಾದಲ್ಲಿ ಅವಕಾಶ ನೀಡಲಾಗಿದೆ.

ಸಂದೀಪ್ ಮಲಾನಿ ನಿರ್ದೇಶಿಸಲಿರುವ ‘ಮಂಗಳೂರು’ ಚಿತ್ರ ನಿರ್ದೇಶನ ಮಾಡಲಿದ್ದಾರೆ. ಕನ್ನಡದ ಜೊತೆಗೆ ಕೊಂಕಣಿ, ತುಳು ಮತ್ತು ಬ್ಯಾರಿ ಭಾಷೆಗಳಲ್ಲಿ ಮೂಡಿಬರಲಿದೆ. ಕರಾವಳಿ ಪ್ರತಿಭೆಗಳಿಗೆ ಅವಕಾಶ ನೀಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ‘ಫೆಬ್ರವರಿ 29 ಸೂರ್ಯಗಿರಿ’ ಕೂಡ ದ್ವಿಭಾಷಾ ಚಿತ್ರವಾಗಿದೆ.  ಪ್ರವೀರ್ ಶೆಟ್ಟಿ, ಏಸ್ತರ್ ನೊರಾನಾ, ಪ್ರಗತಿ, ಗೋಕುಲ್ ಶಿವಾನಂದ್ ಮತ್ತು ಸಂದೀಪ್ ಮಲಾನಿ ನಟಿಸುತ್ತಿದ್ದಾರೆ.