ಎ.4 ರೊಳಗೆ ಸಕ್ಕರೆ ಕಾರ್ಖಾನೆ ಮಾಲೀಕರುಃ ರೈತರ ಕಬ್ಬಿನ ಬಿಲ್ ಪಾವತಿಸಲು ಸೂಚನೆ

ವಿಜಯಪುರ, ಮಾ.25-2020-21 ನೇ ಸಾಲಿಗೆ ವಿಜಯಪುರ ಜಿಲ್ಲೆಯಲ್ಲಿರುವ ಸಕ್ಕರೆ ಕಾರ್ಖಾನೆಗಳಿಗೆ ಪೂರೈಸಿದ ಕಬ್ಬಿಗೆ ಸಂಬಂಧಿಸಿದಂತೆ ರೈತರ ಖಾತೆಗೆ ಬಾಕಿ ಉಳಿದ ಹಣ ಪಾವತಿಸುವಂತೆ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಅವರು ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ದಿ.23-3-2021 ರಂದು ಜಿಲ್ಲೆಯಲ್ಲಿರುವ ಎಂಟು ಜನ ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಶೇ.80 ರಷ್ಟು ಕ್ಕಿಂತ ಕಡಿಮೆ ಹಣವನ್ನು ರೈತರಿಗೆ ಪಾವತಿಸಿರುವ ಸಕ್ಕರೆ ಕಾರ್ಖಾನೆಯವರು ಬರುವ ದಿ: 7-4-2021 ರೊಳಗೆ ಬಾಕಿ ಉಳಿಸಿಕೊಂಡಿರುವ ರೈತರ ಕಬ್ಬಿನ ಬಿಲ್‍ನ್ನು ತಪ್ಪದೇ ಪಾವತಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ದಿ.7-4-2021 ರ ಒಳಗಾಗಿ ನೂರಕ್ಕೆ ನೂರರಷ್ಟು ಹಣವನ್ನು ಸಂಬಂಧಿಸಿದ ಸಕ್ಕರೆ ಕಾರ್ಖಾನೆಯವರು ಕಬ್ಬು ಕಳಿಸಿದ ರೈತರಿಗೆ ಹಣ ಪಾವತಿ ಮಾಡಬೇಕು. ಇದಕ್ಕೆ ತಪ್ಪಿದಲ್ಲಿ ಕರ್ನಾಟಕ ಭೂಕಂದಾಯ ಕಾಯ್ದೆ 1964 ರ ಅವಕಾಶಗಳ ರೀತ್ಯಾ ಭೂಕಂದಾಯ ಬಾಕಿ ಎಂದು ಪರಿಗಣಿಸಿ ವಸೂಲಿ ಮಾಡಲು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಅದರಂತೆ ಮನಾಲಿ ಶುಗರ್ಸ್ ಲಿ.ಮಲಗಾಣ ಅವರು ಶೇ.100 ರಷ್ಟು ಪಾವತಿಸಿದ್ದಾರೆ. ಶ್ರೀ ಬಸವೇಶ್ವರ ಶುಗರ್ಸ್ ಲಿ. ಕಾರಜೋಳ ಅವರು 62.40 ರಷ್ಟು ಪಾವತಿಸಿದ್ದು, 6560.00 ಲಕ್ಷ ರೂ. ಬಾಕಿ ಇದೆ. ಶ್ರೀ ಬಾಲಾಜಿ ಶುಗರ್ಸ್ ಆ್ಯಂಡ್ ಕೆಮಿಕಲ್ ಪ್ರೈ.ಲಿ. ಯರಗಲ್, ಅವರು 81.87 ರಷ್ಟು ಪಾವತಿಸಿದ್ದು, 3700.21 ಲಕ್ಷ ರೂ. ಬಾಕಿ ಇದೆ. ಶ್ರೀ ಭೀಮಾಶಂಕರ ಕೋ.ಆಪ್ ಶುಗರ್ಸ್ ಫ್ಯಾಕ್ಟರಿ, ಮರಗೂರ ಅವರು 30.94 ರಷ್ಟು ಪಾವತಿಸಿದ್ದು, 80.92 ಲಕ್ಷ ರೂ. ಬಾಕಿ ಇದೆ.
ಜಮಖಂಡಿ ಶುಗರ್ಸ್ ಲಿ. ಯುನಿಟ್-2, ನಾದಕೆಡಿ ಅವರು 80.74 ರಷ್ಟು ಪಾವತಿಸಿದ್ದು, 2476.85 ಲಕ್ಷ ರೂ. ಬಾಕಿ ಇದೆ. ಕೆಪಿಆರ್ ಶುಗರ್ಸ್ ಮಿಲ್ಸ್ ಪ್ರೈ.ಲಿ ಆಲಮೇಲ್ ಅವರು 96.75 ರಷ್ಟು ಪಾವತಿಸಿದ್ದು, 1003.59 ಲಕ್ಷ ರೂ. ಬಾಕಿ ಇದೆ. ಇಂಡಿಯನ್ ಶುಗರ್ ಮ್ಯಾನುಫೆಕ್ಚರ್ ಕೋ.ಲಿ ಹಾವಿನಾಳ ಅವರು 60.10 ರಷ್ಟು ಪಾವತಿಸಿದ್ದು, 3346.88 ಲಕ್ಷ ರೂ. ಬಾಕಿ ಇದೆ. ನಂದಿ ಎಸ್‍ಎಸ್‍ಕೆ ಲಿ. ಗಲಗಲಿ ಅವರು 85.03 ರಷ್ಟು ಪಾವತಿಸಿದ್ದು, 3259.38 ಲಕ್ಷ ರೂ. ಬಾಕಿ ಇದೆ.
ಸಕ್ಕರೆ ಕಾರ್ಖಾನೆಯವರು ಬರುವ ದಿ: 7-4-2021 ರೊಳಗೆ ಬಾಕಿ ಉಳಿಸಿಕೊಂಡಿರುವ ರೈತರ ಕಬ್ಬಿನ ಬಿಲ್‍ನ್ನು ತಪ್ಪದೇ ಪಾವತಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.