ಎ. 24 ರಂದು ಮತದಾರರ ಜಾಗೃತಿ ಸಮಾವೇಶ

ಬೀದರ:ಎ.22:ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಮತ್ತು ಬೀದರ ಸಮಗ್ರ ಅಭಿವೃದ್ಧಿ ಜಂಟಿ ಕ್ರೀಯಾ ಸಮಿತಿ ವತಿಯಿಂದ ಬರುವ ದಿನಾಂಕ:24.04.2013 ರಂದು ಸೋಮವಾರ ಬೆಳಿಗ್ಗೆ 11.30 ಗಂಟೆಗೆ ಬೀದರ ನಗರದ ಕನ್ನಡ ಸಾಹಿತ್ಯ ಸಂಘದ ಸಭಾಂಗಣದಲ್ಲಿ ಮತದಾರರ ಜಾಗೃತಿ ಅಭಿಯಾನ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.

ನಮ್ಮ ದೇಶದ ಸಂವಿಧಾನದ ಪ್ರಕಾರ ಪ್ರಜಾಪಭುತ್ವ ವ್ಯವಸ್ಥೆಯಲ್ಲಿ ಮತದಾರರ

ಒಂದೊಂದು ಮತ ಶಕ್ತಿಯ ಪ್ರತೀಕವಾಗಿರುತ್ತದೆ. ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಮತ್ತು ನಮ್ಮ ದೇಶ ರಾಜ್ಯ ಹಾಗೂ ನಮ್ಮ ಪ್ರದೇಶಗಳು, ಸ್ಥಳಿಯ ಜ್ವಲಂತ ಸಮಸ್ಯೆಗಳು ನಿವಾರಣೆಯಾಗಬೇಕಾದರೆ, ಮತದಾರರು ತಮ್ಮ ಅಮೂಲ್ಯವಾದ ಮತವನ್ನು ಯೋಗ್ಯ ಅಭ್ಯರ್ಥಿಗಳಿಗೆ ಹಾಕಿ ಪ್ರಜಾಪ್ರಭುತ್ವ ವ್ಯವಸ್ಥೆಯ ಶಕ್ತಿ ಹೆಚ್ಚಿಸಲು ಹಾಗೂ ಅಭಿವೃದ್ಧಿಗೆ ಪೂರಕವಾಗಲು ಓಟಿನ ಶಕ್ತಿ ಅರಿತುಕೊಳ್ಳುವುದು ಅತಿ ಅವಶ್ಯವಾಗಿದೆ. ಪ್ರಸ್ತುತ ಚುನಾವಣಾ ಸಂದರ್ಭದಲ್ಲಿ ಮತದಾರರ ಜಾಗೃತಿ ಅಭಿಯಾನಗಳು ವ್ಯಾಪಕ ಸ್ವರೂಪದಲ್ಲಿ ನಡೆಯುವದು ಅತಿ ಅವಶ್ಯವಾಗಿದೆ.

ಬೀದರ ಜಿಲ್ಲೆಯ ನಾಲ್ಕು ವಿಧಾನ ಸಭಾ ಕ್ಷೇತ್ರಗಳನ್ನು ಒಳಗೊಂಡ ಕಾರಂಜಾ ಸಂತ್ರಸ್ತರ ಮತದಾರರ ಪ್ರದೇಶ ಸಂತ್ರಸ್ತರ ಸಮಸ್ಯೆಗಳನ್ನೊಳಗೊಂಡಂತೆ, ಬೀದರ ಜಿಲ್ಲೆಯ ರಚನಾತ್ಮಕ ಅಭಿವೃದ್ಧಿಯಂತಹ ವಿಷಯಗಳನ್ನು ಮುಂದಿಟ್ಟುಕೊಂಡು ಮತ ಹಾಕಿ ತಮ್ಮ ಮತದಾನದ ಶಕ್ತಿ ಪ್ರದರ್ಶಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸಮಿತಿಯು ಅಯೋಜಿಸಿರುವ ಮತದಾರರ ಜಾಗೃತಿ ಅಭಿಯಾನಕ್ಕೆ ಆಯಾ ಕ್ಷೇತ್ರದ ನಾಗರಿಕರು ಸೇರಿದಂತೆ ಮಹಿಳೆಯರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮತದಾರರ ಜಾಗೃತಿ ಸಮಾವೇಶ ಯಶಸ್ವಿಗೊಳಿಸಲು ವಿನಂತಿಸಲಾಗುತ್ತದೆ ಎಂದು ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಮತ್ತು ಕ್ರೀಯಾ ಸದಸ್ಯರು, ಬೀದರ ಸಮಗ್ರ ಅಭಿವೃದ್ಧಿ ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ ಪಾಟೀಲ್ ಹುಚಕನಳ್ಳಿ ಅವರು ಪತ್ರಿಕಾ ಪ್ರಕಣೆ ಮೂಲಕ ತಿಳಿಸಿದ್ದಾರೆ.