ಎ. 10 ರವರೆಗೆ ಕಾಲುವೆಗೆ ನೀರು ಹರಿಸಿ: ಮಹೇಶ ಹುಜರಾತಿ

ಶಹಾಪುರ :ಮಾ.16: ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಿದಂತೆ ಮಾರ್ಚ 30 ರ ವರೆಗೆ ಕಾಲುವೆ ನೀರು ಹರಿಸಲಾಗುತ್ತದೆ ಎಂದು ನಿರ್ಣಯ ಕೈಗೊಳ್ಳಲಾಗಿದೆ.ಈ ನಿರ್ಣಯವನ್ನು ಕೈ ಬಿಟ್ಟು ತಾಲೂಕಿನ ನಾರಾಯಣಪುರದ ಬಸವಸಾಗರ ಜಲಾಯಶದಿಂದ ನಾರಾಯಣಪುರ ಎಡದಂಡೆ ಕಾಲುವೆಗೆ ಏಪ್ರಿಲ್ 10 ರ ವರೆಗೆ ನೀರು ಹರಿಸಬೇಕು ಎಂದು ಕಾಂಗ್ರೆಸ್ ಮುಖಂಡರು ಮಾಜಿ ತಾಲೂಕ ಪಂಚಾಯತ ಸದಸ್ಯರಾದ ಶ್ರೀ ಮಹೇಶ ಹುಜರಾತಿ ಸರಕಾರಕ್ಕೆ ಒತ್ತಾಯಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನೀರಾವರಿ ಸಲಹಾ ಸಮಿತಿ ಸಭೆಯಲಿ ನಿರ್ಧರಿಸಿದಂತೆ ಮಾರ್ಚ 30 ರ ವರೆಗೆ ಕಾಲುವೆ ನೀರು ಹರಿಸಲಾಗುತ್ತದೆ ಎಂದು ನಿರ್ಣಯ ಕೈಗೊಳ್ಳಲಾಗಿದೆ. ಈಗಾಗಲೇ ವಾರಬಂದಿ ಮೂಲಕ ಕಾಲುವೆಗೆ ನೀರಿ ಹರಿಸಲಾಗುತ್ತಿದೆ. ಕೊನೆ ಭಾಗದ ರೈತರಿಗೆ ನೀರು ತಲುಪುವುದಿಲ್ಲ ಎಂಬುವದು ಒಂದು ಕಡೆಯಾದರೆ ಮಾರ್ಚ್ 30 ರವರೆಗೆ ಕಾಲುವೆಗೆ ಮಾತ್ರ ನೀರು ಹರಿಸಿ ನಂತರ ಸ್ಥಗಿತಗೊಳಿಸಲಾಗುತ್ತದೆ ಎಂಬ ಭಯ ರೈತರನ್ನು ಕಾಡತೊಡಗಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ರೈತರು ಬೆಳೆದ ಬೆಳೆ ರೈತರ ಕೈ ಸೇರಬೇಕಾದರೆ ಇನ್ನು ಕಾಲಾವಕಾಶ ಬೇಕಾಗುತ್ತದೆ ಅದಕ್ಕೆ ಎಪ್ರೀಲ್ 10 ರವರೆಗೆ ಕಾಲುವೆಗೆ ನೀರಿ ಹರಿಸಬೇಕು ಎಂದು ಅವರು ಸರಕಾರಕ್ಕೆ ಒತ್ತಾಸಿದ್ದಾರೆ.