ಎ.೨೨-೨೪ ಪಡುಮಲೆಯಲ್ಲಿ ನವೀಕೃತ ದೈವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

ಪುತ್ತೂರು, ಎ.೨೦- ತುಳುನಾಡಿನ ಜನರು ಭಕ್ತಿಯಿಂದ ಆರಾಧಿಸುವ ಕೋಟಿ-ಚೆನ್ನಯರ ಜನ್ಮ ಸ್ಥಾನ ಮತ್ತು ಮೂಲ ಸ್ಥಾನವಾದ ಪುತ್ತೂರು ತಾಲೂಕಿನ ಪಡುವನ್ನೂರಿನ ಪಡುಮಲೆಯಲ್ಲಿರುವ ನಾಗ ಬೆರ್ಮೆರ ಗುಡಿ, ನಾಗ ಸನ್ನಿಧಿ, ರಕ್ತೇಶ್ವರಿ, ತೀರ್ಥಬಾವಿ ಮತ್ತು ದೇಯಿ ಬೈದೆದಿ ಸಾನ್ನಿಧ್ಯ(ಸಮಾಧಿ)ದ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವವು ಎ.೨೨ ರಿಂದ ೨೪ ರವರೆಗೆ ನಡೆಯಲಿದೆ ಎಂದು ಪಡುಮಲೆ ಕೋಟಿ-ಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ ಅಧ್ಯಕ್ಷ ಕೆ. ಹರಿಕೃಷ್ಣ ಬಂಟ್ವಾಳ ಹೇಳಿದರು.

ಸೋಮವಾರ ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ,  ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡು ಬಂದಂತೆ ಪಡುಮಲೆಯ ಏರು ಕೋಟ್ಯ ಎಂಬಲ್ಲಿ ಕೋಟಿ-ಚೆನ್ನಯರ ತಾಯಿ ಸುವರ್ಣ ಕೇದಗೆ ಯಾನೆ ದೇಯಿ ಬೈದೆದಿಯನ್ನು ಅಗ್ನಿಗರ್ಪಿಸಿದ ಸಾನ್ನಿಧ್ಯ ಸ್ಥಳವನ್ನು ಮತ್ತು ಕೋಟಿ-ಚೆನ್ನಯರು ನಂಬಿಕೊಂಡು ಬಂದಿದ್ದ ಬೆರ್ಮೆರ ಗುಡಿ, ನಾಗ ಸನ್ನಿಧಿ, ರಕ್ತೇಶ್ವರಿ, ತೀರ್ಥಬಾವಿಯನ್ನು ಪ್ರಥಮ ಹಂತದಲ್ಲಿ ಸುಮಾರು ರೂ. ೧.೫ ಕೋಟಿ ವೆಚ್ಚದಲ್ಲಿ ನವೀಕರಣಗೊಳಿಸಲಾಗಿದ್ದು, ಅಂತಿಮ ಹಂತದಲ್ಲಿದೆ ಎಂದರು.

ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ, ಕುಂಟಾರು ವೇದಮೂರ್ತಿ ರವೀಶ ತಂತ್ರಿಗಳ ನೇತೃತ್ವದಲ್ಲಿ ಮೂರು ದಿನಗಳ ಕಾಲ ವಿವಿಧ ವೈದಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.  ಪಡುಮಲೆ ಕ್ಷೇತ್ರವನ್ನು ಯಾವುದೇ ಒಂದು ಜಾತಿಗಷ್ಟೇ ಸೀಮಿತಗೊಳಿಸದೆ ತುಳುನಾಡಿನ ಸಮಸ್ತ ಜನತೆಗೆ ಸಮರ್ಪಿಸಲಾಗುವುದು ಎಂದು ಅವರು ತಿಳಿಸಿದರು.

ಕಾರ್ಯಕ್ರಮಗಳ ವಿವರ

ಎ.೨೨ ರಂದು ಸಂಜೆ ೭ ಗಂಟೆಗೆ ದೇವತಾ ಪ್ರಾರ್ಥನೆ, ಆಚಾರ್ಯ ವರಣ, ಋಗ್ವೇದ, ಯಜುರ್ವೇದ ಪಾರಾಯಣ ಪ್ರಾರಂಭ, ಪುಣ್ಯಾಹ ವಾಚನ, ಪ್ರಾಸಾದ ಶುದ್ಧಿ, ರಾಕ್ಷೆಘ್ನ ಹವನ, ವಾಸ್ತು ಹವನ, ವಾಸ್ತು ಬಲಿ, ವಾಸ್ತು ಪುಣ್ಯಾಹಾಂತ, ಲಲಿತಾ ಸಹಸ್ರನಾಮ ಪಠಣ ಕಾರ್ಯಕ್ರಮಗಳು ನಡೆಯಲಿದೆ. ಎ.೨೩ ರಂದು ಬೆಳಗ್ಗೆ ೬ ಗಂಟೆಗೆ ಅಷ್ಟೋತ್ತರ ನಾರಿಕೇಳ ಗಣಯಾಗ, ತತ್ವಹವನ, ತತ್ವಕಲಶ, ಕುಂಭೇಶ ಕರ್ಕೇರಿ ಪೂಜೆ, ಶಯ್ಯ ಪೂಜೆ, ಚಂಡಿಕಾ ಯಾಗ, ಧನ್ವಂತರಿ ಯಾಗ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ೧ ಗಂಟೆಗೆ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ೫ ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿ, ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಆಶೀರ್ವಚನ ನೀಡಲಿದ್ದಾರೆ ಎಂದು ಅವರು ತಿಳಿಸಿದರು.

ಎ.೨೪ ರಂದು ಪ್ರಾತಃಕಾಲ ೩ ಗಂಟೆಗೆ ಅಲ್ಪ ಪ್ರಾಸಾದ ಶುದ್ಧಿ, ಪ್ರಾಸಾದ ಪ್ರತಿಷ್ಠೆ, ೩.೫೮ ರಿಂದ ೪.೨೧ರ ಮೀನ ಲಗ್ನದಲ್ಲಿ ಪ್ರತಿಷ್ಠೆ ಜೀವ ಕಲಶಾಭಿಷೇಕ, ಮಹಾಪೂಜೆ, ಗಣಪತಿ ಹವನ, ಬ್ರಹ್ಮಕಲಶಾಭಿಷೇಕ, ಮಂತ್ರಾಕ್ಷತೆ, ಪ್ರಸಾದ ವಿತರಣೆ ನಡೆಯಲಿದೆ. ಪೂರ್ವಾಹ್ನ ೧೧ ಗಂಟೆಗೆ  ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಕನ್ಯಾಡಿ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಶೃಂಗೇರಿ ಕೊಪ್ಪದ ಗೌರಿಗದ್ದೆಯ ವಿನಯ ಗುರೂಜಿ ಆಶೀರ್ವನ ನೀಡಲಿದ್ದಾರೆ ಎಂದು ಅವರು ತಿಳಿಸಿದರು.

ಸಂಜೆ ೭ ಗಂಟೆಗೆ ಬ್ರಹ್ಮ ಕಲಶ ಪೂಜೆ, ಧ್ಯಾನಾಧಿವಾಸ, ಕಲಶಾಧಿವಾಸ, ಪ್ರಾಸಾದಾಧಿವಾಸ ನಡೆಯಲಿದ್ದು, ೭.೩೦ ರಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆಯಲಿದೆ ಎಂದು ಹರಿಕೃಷ್ಣ ಬಂಟ್ವಾಳ ಹೇಳಿದರು. ಪಡುಮಲೆ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಸೀತಾರಾಮ ರೈ ಕೆದಂಬಾಡಿ ಗುತ್ತು, ಪಡುಮಲೆ ಕೋಟಿ-ಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್‌ನ ಉಪಾಧ್ಯಕ್ಷ ವಿಜಯ ಕುಮಾರ್ ಸೊರಕೆ, ಪ್ರಧಾನ ಕಾರ್ಯದರ್ಶಿ ಶ್ರೀಧರ್ ಪಟ್ಲ, ಟ್ರಸ್ಟ್‌ನ ಪುತ್ತೂರು ತಾಲೂಕು ಅಧ್ಯಕ್ಷ ವೇದನಾಥ ಸುವರ್ಣ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.