
ಬೆಂಗಳೂರು, ಮಾ.೯-ಅಕ್ರಮ ‘ಬಿ’ ಖಾತಾ ಸಂಬಂಧ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಸಲ್ಲಿಸಿದ್ದ ದೂರಿನ್ವಯ ಕಂದಾಯ ಕಚೇರಿಗಳಲ್ಲಿ ಎ ವಹಿ ಪುಸ್ತಕಗಳನ್ನು ಜಪ್ತಿ ಮಾಡಲು ಬಿಬಿಎಂಪಿ ೨೦ ಜನರ ತಂಡವನ್ನು ರಚನೆ ಮಾಡಿದೆ.
ನಗರದಲ್ಲಿಂದು ಈ ಕುರಿತು ಪ್ರತಿಕ್ರಿಯಿಸಿದ ಎನ್.ಆರ್.ರಮೇಶ್, ಪಾಲಿಕೆಯ ಹೊಸ ೫ ವಲಯಗಳು ಹಾಗೂ ೯ ವಿಧಾನಸಭಾ ಕ್ಷೇತ್ರಗಳ ೬೬ ವಾರ್ಡ್ ಗಳ ವ್ಯಾಪ್ತಿಯಲ್ಲಿ ಕಾನೂನಿನ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ ಆಯಾ ವಾರ್ಡ್ ಗಳ ಕಂದಾಯ ವಸೂಲಿಗಾರರು, ಕಂದಾಯ ಪರಿವೀಕ್ಷಕರು, ಸಹಾಯಕ ಕಂದಾಯ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಮತ್ತು ವಲಯಗಳ ಉಪ ಆಯುಕ್ತರು ಹಾಗೂ ಜಂಟಿ ಆಯುಕ್ತರು ಒಂದಾಗಿ ಕಳೆದ ೧೨ ವರ್ಷಗಳಿಂದ ’ಬಿ’ ಖಾತಾ ಮಾಡಿಕೊಡಬೇಕಿದ್ದ ಸ್ವತ್ತುಗಳಿಗೆ ಸುಧಾರಣಾ ಶುಲ್ಕ ವನ್ನು ಪಾವತಿಸಿಕೊಳ್ಳದೆಯೇ ಪ್ರತಿಯೊಂದು ಸ್ವತ್ತಿನ ವಿಷಯಕ್ಕೆ ಸಂಬಂಧಿಸಿದಂತೆ ಲಕ್ಷಾಂತರ ರೂಪಾಯಿ ಲಂಚವನ್ನು ಪಡೆದು ಸ್ಥಳೀಯ ಮಟ್ಟದಲ್ಲೇ ’ಎ’ ಖಾತಾಗಳನ್ನು ಮಾಡಿಕೊಡುತ್ತಿದ್ದರು.ಈ ಸಂಬಂಧ ಪಾಲಿಕೆಯ ಮುಖ್ಯ ಆಯುಕ್ತರು ಮತ್ತು ಪಾಲಿಕೆಯ ಆಡಳಿತಾಧಿಕಾರಿಗಳಿಗೆ ಲಿಖಿತ ರೂಪದಲ್ಲಿ ದೂರನ್ನು ನೀಡಲಾಗಿತ್ತು.ಅದರಂತೆ ಈಗ ಕಂದಾಯ ಅಧಿಕಾರಿಗಳ ಕಚೇರಿಯಲ್ಲಿರುವ ಎಲ್ಲಾ ’ಎ’ ವಹಿ ಪುಸ್ತಕಗಳನ್ನು ಕೂಡಲೇ ಪಾಲಿಕೆಯ ವಶಕ್ಕೆ ಪಡೆದು ನುರಿತ ತಜ್ಞರಿಂದ ಈ ಎಲ್ಲಾ ದಾಖಲೆಗಳ ಪರಿಶೀಲನೆ ಕಾರ್ಯ ನಡೆಸಬೇಕೆಂದು ಬಿಬಿಎಂಪಿ ೨೦ ಜನರ ತಂಡವನ್ನು ರಚಿಸಿದ್ದು, ಅವರು ಈಗಾಗಲೇ ಕಾರ್ಯೋನ್ಮುಖರಾಗಿದ್ದಾರೆ ಎಂದು ಹೇಳಿದರು.ಅದು ಅಲ್ಲದೆ, ೨೦೧೫ ರಲ್ಲಿ ನಾನು ಪಾಲಿಕೆಯ ಆಡಳಿತ ಪಕ್ಷದ ನಾಯಕನಾಗಿದ್ದ ಅವಧಿಯಲ್ಲಿ ನನ್ನ ದೂರನ್ನು ಆಧರಿಸಿ ಈ ೫ ವಲಯಗಳಲ್ಲಿನ ಸುಮಾರು ೧೩,೦೦೦ ಕ್ಕೂ ಹೆಚ್ಚು ’ಎ’ ವಹಿ ಪುಸ್ತಕಗಳನ್ನು ಪಾಲಿಕೆಯ ವಶಕ್ಕೆ ಪಡೆಯಲಾಗಿತ್ತು. ಪ್ರಸ್ತುತ ಆ ಎಲ್ಲಾ ೧೩,೦೦೦ ’ಎ’ ವಹಿ ಪುಸ್ತಕಗಳು ಮಲ್ಲೇಶ್ವರಂನಲ್ಲಿರುವ ಐಪಿಪಿ ಕೇಂದ್ರದ ದಾಖಲೆಗಳ ಕೊಠಡಿಯಲ್ಲಿದೆ ಎಂದು ವಿವರಿಸಿದರು.