ಎ.ಬಿ.ವಿ.ಪಿ.ಯಿಂದ ರಾಷ್ಟ್ರೀಯತೆಗೆ ಒತ್ತು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.21: ರಾಷ್ಟ್ರೀಯ ವಿಚಾರಗಳನ್ನು ಇಟ್ಟುಕೊಂಡು ಭಾಗಗಳಾಗದೇ ಕಾರ್ಯನಿರ್ವಹಿಸುತ್ತಿರುವ ದೊಡ್ಡ ಸಂಘಟನೆ ಎಂದರೆ ಅದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಮಾತ್ರ ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್‍ನ ಜಿಲ್ಲಾ ಕಾರ್ಯಧರ್ಶಿಗಳಾದ ಸುರೇಶ್ ತಿಳಿಸಿದರು.
ನಗರದ  ಶ್ರೀ ಗುರು ತಿಪ್ಪೇರುದ್ರ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಎ.ಬಿ.ವಿ.ಪಿ ಅಮೃತಮಹೋತ್ಸವ -2022 ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡುತ್ತಾ, ಈ ಸಂಸ್ಥೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಉಚಿತವಾಗಿ ಸಿಇಟಿ ಮತ್ತು ನೀಟ್ ಪರೀಕ್ಷೆಗಳಿಗೆ ತರಬೇತಿಗಳನ್ನು ಏರ್ಪಡಿಸಿರುತ್ತದೆ. ಹೀಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ವಿದ್ಯಾರ್ಥಿಗಳ ಸಮಸ್ಯಗಳನ್ನು ಪರಿಹರಿಸಲು ಕಾರ್ಯನಿರ್ವಹಿಸುತ್ತಿದೆ.
ಬಿ.ಐ.ಟಿ.ಎಂ ಪ್ರಾಧ್ಯಾಪಕ ಹೇಮಂತ್ ಕುಮಾರ್ ಮಾತನಾಡಿ, ಈ ಸಂಸ್ಥಯು ಜ್ಞಾನ, ಶೀಲ, ಏಕತೆ ಎಂಬ ಮೂರು ಮುಖ್ಯ ಗುರುಗಳನ್ನು ಇಟ್ಟುಕೊಂಡು ವಿದ್ಯಾರ್ಥಿಗಳಿಗೆ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ. ವಿದ್ಯಾರ್ಥಿಗಳ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಈ 75 ವರ್ಷಗಳು ಕಾರ್ಯನಿರ್ವಹಿಸಿ ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ.  ಈ ಸಂಸ್ಥೆಯು ಸ್ಥಾವರವಾಗಿದ್ದು ವಿದ್ಯಾರ್ಥಿಗಳು ಮತ್ತು ಕಾರ್ಯಕರ್ತರುಗಳು ಬದಲಾವಣೆ ಆಗುತ್ತಲೇ ಇರುತ್ತಾರೆ. ಇಂದಿನ ವಿದ್ಯಾರ್ಥಿಗಳು ಮುಂದಿನ ಪ್ರಜೆಗಳಲ್ಲ ಇಂದಿನ ಪ್ರಜೆಗಳು ಆಗಿರುತ್ತಾರೆ ಎಂದು ತಿಳಿಸಿದರು.
ಶ್ರೀ ಗುರು ತಿಪ್ಪೇರುದ್ರ ಮಹಾವಿದ್ಯಾಲಯದ ಪ್ರಾಚಾರ್ಯರಾದ  ಜಿ ನಾಗರಾಜ್‍ರವರು ಮಾತನಾಡಿ   ಈ ಸಂಘಟನೆಯಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಂಡು ತಮ್ಮ ವಿದ್ಯಾರ್ಜನೆ, ನಾಯಕತ್ವ ಗುಣಗಳನ್ನು ಮತ್ತು ಕೌಶಲ್ಯಗಳನ್ನು  ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಸಮಾರಂಭದಲ್ಲಿ ಎಸ್.ಜಿ.ಟಿ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಇರ್ಷಾದ್ ಅಲಿ, ಉಪನ್ಯಾಸಕರಾದ ಜಯಂತಿ, ಎ.ಬಿ.ವಿ.ಪಿಯ ಹರ್ಷ, ನಂದೀಶ್, ಮುಂತಾದವರು ಉಪಸ್ಥಿತರಿದ್ದರು. ಪ್ರಾರ್ಥನೆಯನ್ನು ರಮ್ಯ ಮತ್ತು ವಂದನಾರ್ಪಣೆಯನ್ನು ವಿನೋದ್ ನಡೆಸಿಕೊಟ್ಟರು.