ಎ.ದೇವದಾಸ್ ಅವರಿಂದ ಕೋಳೂರು, ಮದಿರೆ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ


ಸಂಜೆವಾಣಿ ವಾರ್ತೆ
ಕುರುಗೋಡು:ಏ.18
ಕಂಪ್ಲಿ ವಿಧಾನಸಭಾ ಕ್ಷೇತ್ರದ ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿಯಾದ ಎ.ದೇವದಾಸ್ ಅವರು ಕೋಳೂರು ಮತ್ತು ಮದಿರೆ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ಈ ವೇಳೆ ಮಾತನಾಡಿದ ಅವರು, 75 ವರ್ಷಗಳಲ್ಲಿ ಎಲ್ಲಾ ಪಕ್ಷಗಳು ಅಧಿಕಾರಕ್ಕೆ ಬಂದಿವೆ. ಬಂಡವಾಳಶಾಹಿಗಳ ಆಶೀರ್ವಾದದಿಂದ ಅಧಿಕಾರಕ್ಕೆ ಬರುವ ಈ ರಾಜಕೀಯ ಪಕ್ಷಗಳು ಕೆಲಸ ಮಾಡುವುದು ಬಂಡವಾಳಶಾಹಿಗಳ ಪರವಾಗಿಯೇ ಹೊರತು ದುಡಿಯುವ ಜನಗಳ ಪರವಾಗಿ ಅಲ್ಲ. ಹಾಗಾಗಿಯೇ ದುಡಿಯುವ ಜನಗಳ ಜೀವನ ನರಕದ ಜೀವನ ಕಳೆಯುವಂತಾಗಿದೆ ಎಂದರು.
ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿವೆ, ಶಿಕ್ಷಣ ಆರೋಗ್ಯದ ಖಾಸಗೀಕರಣ, ನಿರುದ್ಯೋಗ ಸಮಸ್ಯೆ, ರೈತರ ಆತ್ಮಹತ್ಯೆಯಂತಹ ಸಮಸ್ಯೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಜನರ ಈ ಸಮಸ್ಯೆಗಳ ಬಗ್ಗೆ ಯಾವ ರಾಜಕೀಯ ಪಕ್ಷಗಳು ಮಾತನಾಡುವುದಿಲ್ಲ.
ಕೇವಲ ಹಣ ಹೆಂಡದ ಹೊಳೆ ಹರಿಸಿ ಚುನಾವಣೆಯಲ್ಲಿ ಗೆಲ್ಲುತ್ತಾರೆ. ಆದರೆ ನಮ್ಮ ಪಕ್ಷ ಇಂತಹ ಹಲವಾರು ಸಮಸ್ಯೆಗಳ ವಿರುದ್ಧ ನಿರಂತರವಾಗಿ ಹೋರಾಟಗಳನ್ನು ಮಾಡುತ್ತಾ ಬಂದಿದೆ. ಹೊರಗಡೆ ನಡೆಯುತ್ತಿರುವ ಈ ಹೋರಾಟದ ಧ್ವನಿ ಸದನದಲ್ಲಿ ಮೊಳಗಿಸಲು  ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷವನ್ನು ಗೆಲ್ಲಿಸಬೇಕು ಎಂದು ಜನರಲ್ಲಿ ಕೇಳಿಕೊಂಡರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಗೋವಿಂದ್, ಸದಸ್ಯರಾದ ಹನುಮಪ್ಪ, ಪಂಪಾಪತಿ ಕೋಳೂರು, ಜಗದೀಶ್, ರಾಜಾ, ವಿಜಯಲಕ್ಷ್ಮಿ , ಪಂಪಾಪತಿ ಹೊಸಪೇಟೆ , ವಿದ್ಯಾ , ಪಾಲಾಕ್ಷ, ನಿಂಗಪ್ಪ , ಗಾದಿಲಿಂಗಪ್ಪ  ಮತ್ತು ರಾಜಶೇಖರ್ ಇತರರು ಉಪಸ್ಥಿತರಿದ್ದರು.