ಎ++ ಗ್ರೇಡ್ ಪಡೆದ ವಿ.ಜಿ.ವಿಮೆನ್ಸ್ ಕಾಲೇಜು:ಹೈ.ಶಿ.ಸಂ.ಅಧ್ಯಕ್ಷ ಡಾ.ಬಿಲಗುಂದಿ ಹರ್ಷ

ಕಲಬುರಗಿ:ಜು.17: ಇಲ್ಲಿನ ಪ್ರತಿಷ್ಠಿತ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ವಿ.ಜಿ.ಪದವಿ ಮಹಿಳಾ ಮಹಾವಿದ್ಯಾಲಯವು ಯುಜಿಸಿಯ ನ್ಯಾಕ್ ಎ++ ಗ್ರೇಡ್ ಪಡೆದಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ ತಿಳಿಸಿದರು.
ಕಾಲೇಜಿನ ಸಭಾಂಗಣದಲ್ಲಿ ಕರೆದಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ಪ್ರಸಕ್ತ ಸಾಲಿನ ಜೂನ್ 15 ಮತ್ತು 16ರಂದು ನ್ಯಾಕ್ ಸಮಿತಿಯು ಕೈಗೊಂಡ ಪರಿಶೀಲನೆ ಬಳಿಕ ನಾಲ್ಕರ ಪೈಕಿ 3.58 ಸಿಜಿಪಿಎ ಅಂಕಗಳನ್ನು ಪಡೆಯುವಲ್ಲಿ ಮಹಾವಿದ್ಯಾಲಯ ಯಶಸ್ವಿಯಾಗಿದೆ ಎಂದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಎ++ ಗ್ರೇಡ್ ಪಡೆದ ಏಕೈಕ ಮಹಿಳಾ ಕಾಲೇಜು ಎಂಬ ಕೀರ್ತಿ ವಿ.ಜಿ.ಮಹಿಳಾ ವಿದ್ಯಾಲಯಕ್ಕೆ ಲಭಿಸಿದಂತಾಗಿದೆ. ಇದರಿಂದ ಮುಂಬರುವ ದಿನಗಳಲ್ಲಿ ಯುಜಿಸಿಯಿಂದ ಹೊಸ ಹಾಗೂ ನಾವೀನ್ಯತೆಯ ಕೋರ್ಸ್ ಗಳು ನಮ್ಮ ಕಾಲೇಜಿಗೆ ಮತ್ತಷ್ಟು ಧಾರಾಳವಾಗಿ ಲಭಿಸಲಿವೆ ಎಂದು ಡಾ.ಬಿಲಗುಂದಿ ನುಡಿದರು.

ಈ ಹಿಂದೆ 2004ರಲ್ಲಿ ಬಿ+ ಮತ್ತು 2011ರಲ್ಲಿ ಎ ಗ್ರೇಡ್ ಲಭಿಸಿತ್ತು. ಈ ಬಾರಿ ಕಾಲೇಜಿನ ಶೈಕ್ಷಣಿಕ ಹಾಗೂ ಮೂಲಸೌಕರ್ಯದ ಗುಣಮಟ್ಟವನ್ನು ಪರಿಗಣಿಸಿ ಎ++ ಗ್ರೇಡ್ ದೊರಕಿದೆ ಎಂದು ಸಂತಸ ವ್ಯಕ್ತಪಡಿಸಿದರು.

1965ರಲ್ಲಿ 15 ವಿದ್ಯಾರ್ಥಿನಿಯರಿಂದ ಆರಂಭಗೊಂಡ ಮಹಾವಿದ್ಯಾಲಯದಲ್ಲಿ ಪ್ರಸ್ತುತ 1500ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಇದರ ಜೊತೆಗೆ ಸಂಸ್ಥೆಯ ಅಡಿಯಲ್ಲಿ 55 ಅಂಗ ಸಂಸ್ಥೆಗಳು ಕಾರ್ಯಾನಿರ್ವಹಿಸುತ್ತಿದ್ದು, ವೈದ್ಯಕೀಯ, ದಂತ ವೈದ್ಯಕೀಯ, ಐಟಿಐ, ಪದವಿ ಕಾಲೇಜು, ಕಾನೂನು ವಿದ್ಯಾಲಯ ಹಾಗೂ ಶಿಕ್ಷಣ ಮಹಾವಿದ್ಯಾಲಯಗಳು ಸಂಸ್ಥೆ ಅಡಿ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ವಿವರಿಸಿದರು.
ಸಂಸ್ಥೆಯ ಉಪಾಧ್ಯಕ್ಷ ಡಾ.ಶರಣಬಸಪ್ಪ ಹರವಾಳ, ಕಾರ್ಯದರ್ಶಿ ಡಾ.ಜಗನ್ನಾಥ ಬಿಜಾಪುರೆ,
ಜಂಟಿ ಕಾರ್ಯದರ್ಶಿ
ಡಾ.ಮಹಾದೇವಪ್ಪ ರಾಂಪುರೆ, ಕಾಲೇಜು ಅಭಿವೃದ್ಧಿ ಸಮಿತಿಯ ಸಂಯೋಜಕರು ಹಾಗೂ ಆಡಳಿತ ಮಂಡಳಿ ಸದಸ್ಯರಾದ ಸೋಮನಾಥ ನಿಗ್ಗುಡಗಿ,
ಬಸವರಾಜ ಜೆ.ಖಂಡೇರಾವ್, ಸಾಯಿನಾಥ್ ಪಾಟೀಲ್, ವಿನಯ ಪಾಟೀಲ್, ಎನ್.ಗಿರಿಜಾ ಶಂಕರ, ಡಾ.ವೀರೇಂದ್ರ ಪಾಟೀಲ್ ಸೇರಿದಂತೆ ಮಹಾವಿದ್ಯಾಲಯದ ಪ್ರಾಂಶುಪಾಲರು, ಬೋಧಕ ಸಿಬ್ಬಂದಿ ಉಪಸ್ಥಿತರಿದ್ದರು.


ಫ್ಯಾಷನ್ ಡಿಸೈನಿಂಗ್ ಕೋರ್ಸ್ ಆರಂಭ:

ವಿ.ಜಿ.ಮಹಿಳಾ ವಿದ್ಯಾಲಯದಲ್ಲಿ ಪ್ರಸ್ತುತ ಕಲಾ ವಿಭಾಗ, ವಿಜ್ಞಾನ, ವಾಣಿಜ್ಯ ಪದವಿ ಕೋರ್ಸ್ ಜೊತೆಗೆ ಸಿ.ಎನ್.ಡಿ, ಮೈಕ್ರೊಬಯಾಲಜಿ, ಬಯೊಟೆಕ್ನಾಲಜಿ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ ಬೋಧಿಸಲಾಗುತ್ತಿದ್ದು, ಇದರ ಜೊತೆಗೆ ಎಂ.ಎಸ್ಸಿ ಭೌತಶಾಸ್ತ್ರ ಹಾಗೂ ಸಂಶೋಧನಾ ಕೇಂದ್ರ ಸಹ ಕಾರ್ಯನಿರ್ವಹಿಸುತ್ತಿದೆ. ಇದರೊಟ್ಟಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಫ್ಯಾಷನ್ ಡಿಸೈನಿಂಗ್, ಡೇಟಾ ಸೈನ್ಸ್ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕೋರ್ಸ್ ಆರಂಭಿಸಲಾಗಿದೆ ಎಂದು ಡಾ.ಬಿಲಗುಂದಿ ತಿಳಿಸಿದರು.