ಎಸ್.ಸಿ ಮತ್ತು ಎಸ್.ಟಿ ಮೋರ್ಚಾ ಸಮಾವೇಶ

ಪಿರಿಯಾಪಟ್ಟಣ: ಮಾ.27:- ತಾಲ್ಲೂಕಿನಲ್ಲಿರುವ 10.900 ಅನಧಿಕೃತ ತಂಬಾಕು ಬೆಳೆಯುವ ರೈತರಿಗೆ ಪರವಾನಗಿ ಕೊಡಿಸಲು ಸಾಕಷ್ಟು ಶ್ರಮವಹಿಸಿದ್ದೇನೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನೀವು ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಟ್ಟಲ್ಲಿ ಆ ಶಾಸಕರಿಂದ ಲೈಸೆನ್ಸ್ ಕೊಡಿಸುವ ಕೆಲಸ ಮಾಡುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಬೆಟ್ಟದಪುರ ಗ್ರಾಮದ ಪಂಚಾಯಿತಿ ಆವರಣದಲ್ಲಿ ಭಾನುವಾರ ನಡೆದ ಎಸ್.ಸಿ ಮತ್ತು ಎಸ್.ಟಿ ಮೋರ್ಚಾ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು ತಂಬಾಕು ಬೆಳೆಗಾರರ ಪರವಾಗಿ ಹೋರಾಡಲು ಬಿಜೆಪಿ ಪಕ್ಷದಿಂದ ಮೂರು ಕಟ್ಟಾಳು ಇದ್ದಾರೆ, ಅದರಲ್ಲಿ ಎಚ್.ಸಿ ಬಸವರಾಜು ಹಾಗೂ ವಿಜಯಶಂಕರ್ ಮತ್ತು ನಾನು ರೈತರ ಕಷ್ಟಗಳಿಗೆ ಸ್ಪಂದಿಸಿ ಅದಕ್ಕೆ ಅನುಗುಣವಾಗಿ ನಿಮ್ಮ ಎಲ್ಲಾ ಸಮಸ್ಯೆಗಳನ್ನು ನಿವಾರಣೆ ಮಾಡಲು ಪ್ರಯತ್ನಿಸುತ್ತಿದ್ದೇವೆ,
ನರೇಗಾ ಯೋಜನೆ ಅಡಿಯಲ್ಲಿ ಪಿರಿಯಾಪಟ್ಟಣ ತಾಲ್ಲೂಕಿನ 34 ಗ್ರಾಮ ಪಂಚಾಯಿತಿಯ ಎಲ್ಲಾ ರಸ್ತೆಗಳು ಸಿಮೆಂಟ್ ರಸ್ತೆಯಾಗಿ ಮಾರ್ಪಟ್ಟಿವೆ, ಜಲಜೀವನ್ ಮಿಷನ್ ಯೋಜನೆ ಅಡಿ 303 ಹಳ್ಳಿಗಳಿಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ, ಅದರಲ್ಲಿ ಪ್ರತಿಯೊಬ್ಬರಿಗೂ 55 ಲೀಟರ್ ಉಚಿತವಾಗಿ ಬಳಸಬಹುದಾಗಿದೆ , ಪಿರಿಯಾಪಟ್ಟಣದ ಶಕ್ತಿ ದೇವತೆ ಮಸಣಿಕಮ್ಮ ದೇವಾಲಯದ ಅಭಿವೃದ್ಧಿಗೆ 50 ಲಕ್ಷ ರೂಗಳನ್ನು ಕೊಟ್ಟಿದ್ದೇವೆ, ಇದಲ್ಲದೆ ದೇವಾಲಯದ ನವೀಕರಣಕ್ಕಾಗಿ 9 ಕೋಟಿ ರೂಗಳ ವೆಚ್ಚವನ್ನು ಮಂಜೂರು ಮಾಡಿಸಿದ್ದೇನೆ. ಕಾಂಗ್ರೆಸ್ ಮತ್ತು ಜೆಡಿಎಸ್ ಎಂಬ ಜಪವನ್ನು ಬಿಟ್ಟು, ಈ ಬಾರಿ ಕಮಲ ಅರಳಿಸುವ ಕೆಲಸವನ್ನು ತಾಲ್ಲೂಕಿನ ಜನತೆ ಮಾಡಬೇಕೆಂದು ಮನವಿ ಮಾಡಿದರು.
ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಮಾತನಾಡಿ ಬಿಜೆಪಿ ಪಕ್ಷ ಸಂವಿಧಾನ ವಿರೋಧಿ, ದಲಿತ ವಿರೋಧಿ, ಅಂಬೇಡ್ಕರ್ ವಿರೋಧಿ ಎಂದು ಕಾಂಗ್ರೆಸ್ ನವರು ಇಲ್ಲಸಲ್ಲದ ಆರೋಪಗಳನ್ನು ಮಾಡಿ ಅಪಪ್ರಚಾರ ಮಾಡುತ್ತಿದ್ದಾರೆ, ಕಾಂಗ್ರೆಸ್ನವರು ದಲಿತರಿಗೆ ಮಾಡಿರುವಷ್ಟು ಮೋಸ ಯಾರು ಮಾಡಿಲ್ಲ ಏಕೆಂದರೆ 1956 ರಲ್ಲಿ ಡಾ ಬಿ.ಆರ್ ಅಂಬೇಡ್ಕರ್ ರವರು ಮರಣ ಹೊಂದಿದಾಗ ಶವಸಂಸ್ಕಾರ ಮಾಡುವುದಕ್ಕೆ ನವ ದೆಹಲಿಯಲ್ಲಿ ನೆಹರು ನೇತೃತ್ವದ ಸರ್ಕಾರ ಜಾಗ ಕೊಡಲಿಲ್ಲ, ಸಮುದ್ರ ದಂಡೆಯಲ್ಲಿ ಶವಸಂಸ್ಕಾರ ಮಾಡಬೇಕಾಯಿತು, ಇಂತಹ ದೊಡ್ಡ ದ್ರೋಹ ಮಾಡಿರುವ ಕಾಂಗ್ರೆಸ್ ಪಕ್ಷದವರಿಗೆ ಮತ ನೀಡಬೇಕಾ ಎಂದು ಪ್ರಶ್ನಿಸಿದರು.
ಪಿರಿಯಾಪಟ್ಟಣ ತಾಲ್ಲೂಕಿನಲ್ಲಿರುವ ಎಸ್.ಸಿ ಮತ್ತು ಎಸ್.ಟಿ ಎಲ್ಲಾ ಕೆಳ ವರ್ಗದ ಸಮುದಾಯದವರು 40 ಸಾವಿರ ಮತದಾರರಿದ್ದು, ಆ ಎಲ್ಲಾ ಮತಗಳು ಬಿಜೆಪಿ ಪಕ್ಷವನ್ನು ಬೆಂಬಲಿಸಬೇಕು, ಪ್ರಧಾನಿ ನರೇಂದ್ರ ಮೋದಿಯವರು ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಹುಟ್ಟಿದ ಸ್ಥಳ ಹಾಗೂ ಶುಭ ಸಂಸ್ಕಾರ ಮಾಡಿದ ಸ್ಥಳಗಳನ್ನು ? 200 ಕೋಟಿ ರೂಗಳ ಅನುದಾನ ನೀಡಿ ಸ್ಥಳಗಳನ್ನು ಅಭಿವೃದ್ಧಿ ಮಾಡಿದ್ದಾರೆ. ಅಲ್ಲದೆ 6 ಸಾವಿರ ಎಕರೆ ಜಮೀನನ್ನು ಎಸ್.ಸಿ ಮತ್ತು ಎಸ್.ಟಿ ಸಮುದಾಯದವರಿಗೆ ಜಾಗ ಕೊಡಿಸಿದ್ದಾರೆ ಎಂದರು.
ರೈತರಿಗಾಗಿ ಬಿಜೆಪಿ ಸರ್ಕಾರ ಸಾಕಷ್ಟು ಹಲವು ಯೋಜನೆಗಳನ್ನು ಜಾರಿಗೆ ತಂದು ಜಮೀನುದಾರರಿಗೆ ವರ್ಷಕ್ಕೆ ?10 ಸಾವಿರ ರೂಗಳು ಖಾತೆಗೆ ಜಮವಾಗುತ್ತಿದೆ, ಭೂ ರಹಿತ ಮಂದಿಗೆ ತಿಂಗಳಿಗೆ ಒಂದು ಸಾವಿರ ರೂಗಳನ್ನು ಕೊಡಬೇಕೆಂದು ಈಗಾಗಲೇ ತೀರ್ಮಾನಿಸಲಾಗಿದೆ, ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಇನ್ನು ಹಲವು ಕಾರ್ಯಕ್ರಮಗಳನ್ನು ರೈತರ ಪರವಾಗಿ ನಮ್ಮ ಸರ್ಕಾರ ಮಾಡಿದೆ, ಕರ್ನಾಟಕವನ್ನು ಪರಿವರ್ತನೆ ಹಾದಿಗೆ ತೆಗೆದುಕೊಂಡು ಹೋಗಲು ಬಿಜೆಪಿ ಸರ್ಕಾರ ಶ್ರಮವಹಿಸಿದೆ ಆದ್ದರಿಂದ ಎಲ್ಲರೂ ಬಿಜೆಪಿ ಪಕ್ಷವನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಮೈ ವಿ.ರವಿಶಂಕರ್ ಮಾತನಾಡಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಬಿಜೆಪಿ ಸರ್ಕಾರದ ಯೋಜನೆಗಳನ್ನು ತಲುಪಿಸಬೇಕು, ಡಬಲ್ ಇಂಜಿನ್ ಸರ್ಕಾರ ಹೊಂದಿರುವ ನಾವು ಮಾಡಿರುವ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡಬೇಕೆಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಇದೇ ಸಂದರ್ಭ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಸಮುದಾಯದ ನೂರಾರು ಮಂದಿ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷ ಸೇರ್ಪಡೆಗೊಂಡರು.
ಬಿಜೆಪಿ ಜಿಲ್ಲಾಧ್ಯಕ್ಷ ಮಂಜುಳಾ ಸೋಮಶೇಖರ್, ತಾಲ್ಲೂಕು ಅಧ್ಯಕ್ಷ ಎಂ.ರಾಜೇಗೌಡ, ಎಚ್.ಸಿ ಬಸವರಾಜು,ಯೋಗಾನಂದ,ಆರ್.ಟಿ ಸತೀಶ್, ಅಣ್ಣಯ್ಯ, ಮೈಲಾರಿ, ವಿಕ್ರಮರಾಜ್, ಬೆಕ್ಕರೆ ಮಹದೇವ್ ರಮೇಶ್ ,ಲೋಕೇಶ್, ರವಿ ,ಅರುಣ್ ರಾಜೇ ಅರಸ್,ಸುಂದರ್, ಪ್ರವೀಣ್, ಸುನೀಲ್ ಕುಮಾರ್, ರಾಜು,ಮಧು, ಯೋಗೇಶ್, ಕೆಂಡಗಣ್ಣಶೆಟ್ಟಿ ಇದ್ದರು.