ಎಸ್.ಸಿ.ಪಿ-ಟಿ.ಎಸ್.ಪಿ. ಅನುದಾನ ಕಾಲಮಿತಿಯಲ್ಲಿ ಖರ್ಚಾಗಲಿ:ಜಿಲ್ಲಾ ಮೇಲ್ವಿಚಾರಣಾ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ತೆಗ್ಗಳ್ಳಿ ಸೂಚನೆ

ಕಲಬುರಗಿ,ಜು.29: ಪರಿಶಿಷ್ಟರÀ ಶ್ರೇಯೋಭಿವೃದ್ಧಿಗೆ ಪ್ರಸಕ್ತ 2022-23ನೇ ಸಾಲಿಗೆ ಆಯಾ ಇಲಾಖೆಗೆ ಕ್ರಿಯಾ ಯೋಜನೆಯನ್ವಯ ಹಂಚಿಕೆಯಾಗಿರುವ ಅನುದಾನವನ್ನು ಕಾಲಮಿತಿಯಲ್ಲಿಯೇ ಖರ್ಚು ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗಳ್ಳಿ ಅಧಿಕಾರಿಗಳಿಗೆ ಸೂಚಿಸಿದರು.
ಶುಕ್ರವಾರ ತಮ್ಮ ಕಚೇರಿಯಲ್ಲಿ ಕರ್ನಾಟಕ ಅನುಸೂಚಿತ ಜಾತಿಗಳ ಉಪ ಯೋಜನೆ ಮತ್ತು ಅನುಸೂಚಿತ ಬುಡಕಟ್ಟುಗಳ ಉಪ ಯೋಜನೆ ಅಧಿನಿಯಮ-2013ರನ್ವಯ ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲಾ ಉಸ್ತುವಾರಿ ಸಚಿವರು ವಿಜನ್-2050 ಡಾಕ್ಯೂಮೆಂಟ್ ತಯ್ಯಾರಿಕೆಗೆ ಸೂಚನೆ ನೀಡಿದ್ದು, ಇಲ್ಲಿ ಕೃಷಿ ಮತ್ತು ತೋಟಗಾರಿಕೆಗೆ ಹೆಚ್ಚಿನ ಒತ್ತು ನೀಡಬೇಕಾಗಿರುವುದರಿಂದ ಜಿಲ್ಲೆಯಲ್ಲಿ ತೋಟಗಾರಿಕೆ ವಿಸ್ತೀರ್ಣ, ಬೆಳೆಯಲಾಗುವ ಬೆಳೆಗಳು, ವಿಸ್ತೀರ್ಣಕ್ಕಿರುವ ಅವಕಾಶಗಳು, ನೀರಾವರಿ ಸೌಲಭ್ಯ ಹೀಗೆ ಸಮಗ್ರ ಮಾಹಿತಿಯನ್ನು ನೀಡುವಂತೆ ತೋಟಗಾರಿಕೆ ಅಧಿಕಾರಿಗಳಿಗೆ ತಿಳಿಸಿದರು.
ಗ್ರಾಮೀಣ ಭಾಗದ ವಸತಿ ಯೋಜನೆಯಲ್ಲಿ ನಿಗದಿತ ಗುರಿ 1707ರಲ್ಲಿ 225 ಮಾತ್ರ ಅನುಮೋದನೆ ನೀಡಿ ರಾಜೀವ ಗಾಂಧಿ ವಸತಿ ನಿಗಮಕ್ಕೆ ಕಳುಹಿಸಲಾಗಿದೆ. ಉಳಿದ ಅರ್ಜಿಗಳು ಕಥೆ ಏನು ಎಂದು ಪ್ರಶ್ನಿಸಿದ್ದಕ್ಕೆ ವಸತಿ ಯೋಜನೆಗೆ ನಿಯಮಾವಳಿಯಂತೆ ಫಲಾನುಭವಿಗಳ ಗ್ರಾಮದಲ್ಲಿಯೇ ಗ್ರಾಮ ಸಭೆ ನಡೆಸಿ ಅನುಮೋದನೆ ನೀಡಬೇಕಾಗಿರುತ್ತದೆ. ಆದರೆ ಇಲ್ಲಿ ಗ್ರಾಮ ಪಂಚಾಯತಿ ಕೇಂದ್ರಸ್ಥಾನದಲ್ಲಿ ಸಭೆ ನಡೆಸಿ ಅನುಮೋದನೆ ನೀಡಿದ್ದರಿಂದ ಅವುಗಳು ತಾಲೂಕು ಮತ್ತು ಜಿಲ್ಲಾ ಪಂಚಾಯತಿಯ ಪರಿಶೀಲನಾ ಹಂತದಲ್ಲಿವೆ (ಲಾಗಿನ್‍ನಲ್ಲಿ) ಎಂದು ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಕಿಶೋರ ಕುಮಾರ ದುಬೆ ಮಾಹಿತಿ ನೀಡಿದರು. ನಿಯಮ ಪಾಲನೆಯಾಗದಿದ್ದಲ್ಲಿ ಅದನ್ನು ತಿರಸ್ಕರಿಸಿ ಹೊಸದಾಗಿ ಸಭೆ ನಡೆಸಿ ಆಯ್ಕೆ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದರು.
ಅನುದಾನ ಬಿಡುಗಡೆಗೆ ಪತ್ರ ಬರೆಯಿರಿ: ಪ್ರಗತಿ ಪರಿಶೀಲನಾ ವೇಳೆ ಕೆಲವೊಂದು ಇಲಾಖೆಗೆ ಕೇಂದ್ರ ಕಚೇರಿಯಿಂದ ಇನ್ನೂ ಅನುದಾನ ಬಿಡುಗಡೆಯಾಗದಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಮೇಲಾಧಿಕಾರಿಗಳಿಗೆ ಪತ್ರ ಬರೆಯಬೇಕು ಎಂದು ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗಳ್ಳಿ ಅವರು ನಿರ್ದೇಶನ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಬಿ.ಶುಭ, ವ್ಯವಸ್ಥಾಪಕ ಎಸ್.ಎಂ.ಪಾಟೀಲ ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.