ಎಸ್.ಯು.ಸಿ.ಐ ಯಿಂದ ಜನರ ಬೇಡಿಕೆ ಪಟ್ಟಿ ಬಿಡುಗಡೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.12: ವಿಧಾನಸಭಾ ಚುನಾವಣೆಯಲ್ಲಿ ಎಸ್.ಯು.ಸಿ.ಐ(ಸಿ) ಪಕ್ಷದಿಂದ ಬಳ್ಳಾರಿ ಹಾಗೂ ಕಂಪ್ಲಿ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಹಿನ್ನಲೆಯಲ್ಲಿ, ನಮ್ಮ ಅಭ್ಯರ್ಥಿಗಳು ವಿಧಾನ ಸಭೆಯಲ್ಲಿ ಧ್ವನಿ ಎತ್ತಲಿರುವ ಜನರ ಬೇಡಿಕೆಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು. ಪಕ್ಷದ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಕಾರ್ಯದರ್ಶಿಗಳಾದ ರಾಧಾಕೃಷ್ಣ ಉಪಾಧ್ಯ ಅವರು ಕಾರ್ಯಕರ್ತರು ಹಾಗೂ ಬೆಂಬಲಿಗರ ಸಮ್ಮುಖದಲ್ಲಿ ಈ ಪಟ್ಟಿಯನ್ನು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಧಾಕೃಷ್ಣ ಉಪಾಧ್ಯ ಅವರು “ ಕೇವಲ ಬಿಜೆಪಿ, ಕಾಂಗ್ರೆಸ್ ಇನ್ನಿತರ ಬಂಡವಾಳಶಾಹಿ ಪಕ್ಷಗಳನ್ನು ಅದಲು ಬದಲು ಮಾಡುತ್ತಾ ಕುಳಿತರೆ ಯಾವುದೇ ಬದಲಾವಣೆಯನ್ನು ಕಾಣಲು ಸಾಧ್ಯವಿಲ್ಲ. ಚುನಾವಣೆಯ ಸಂದರ್ಭದಲ್ಲಿ, ‘ದೊಡ್ಡ’ ಪಕ್ಷಗಳ ಭರಾಟೆಯಲ್ಲಿ ಕೊಚ್ಚಿ ಹೋಗದೆ, ಹೊರಾಟಪರ, ಜನರ ಧ್ವನಿಯಾಗಬಲ್ಲ ಪಕ್ಷವನ್ನು, ಅಭ್ಯರ್ಥಿಯನ್ನು ಚುನಾಯಿಸಬೇಕು ಎಸ್.ಯು.ಸಿ.ಐ(ಸಿ) ಪಕ್ಷವು ಬೀದಿಯಲ್ಲಿ ಹೋರಾಟ ಮಾಡುವುದಲ್ಲದೆ, ವಿಧಾನ ಸಭೆಯಲ್ಲೂ ಜನರ ಸಮಸ್ಯೆಗಳ ಪರಿಹಾರಕ್ಕೆ ಧ್ವನಿ ಎತ್ತುತ್ತದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ನಿಯಂತ್ರಣ, ರೇಷನ್ ಪದ್ಧತಿಯನ್ನು ಬಲಪಡಿಸುವುದು, ಸರ್ಕಾರಿ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡುವುದು, ಇಲಾಖೆಗಳಲ್ಲಿನ ಭ್ರಷ್ಟಾಚಾರಕ್ಕೆ ಕಠಿಣ ಕ್ರಮಕೈಗೊಳ್ಳುವುದು, ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸುವುದು, ಕೋಮುವಾದವನ್ನು ತಡೆಗಟ್ಟುವುದು ಹಾಗೂ ಜನರ ನಡುವೆ ಸಾಮರಸ್ಯ ಬೆಳೆಸುವುದು, ಪ್ರತಿ ವಾರ್ಡ್‍ಗಳಲ್ಲಿ ಸುಸಜ್ಜಿತ ‘ಜನ ಚಿಕಿತ್ಸಾಲಯ’ ತೆರೆಯುವುದು, ನಗರದಲ್ಲಿ ರಿಂಗ್ ರೋಡ್ ನಿರ್ಮಿಸುವುದು, ಉದ್ಯೋಗ ಖಾತ್ರಿ ಯೋಜನೆಯನ್ನು ನಗರಕ್ಕೂ ವಿಸ್ತರಿಸುವುದು ಮುಂತಾದ ಬೇಡಿಕೆಗಳಲ್ಲದೆ, ರೈತರ, ಕಾರ್ಮಿಕರ, ಮಹಿಳೆಯರ, ವಿದ್ಯಾರ್ಥಿ-ಯುವಜನರ ಬೇಡಿಕೆಗಳನ್ನು ವಿಧಾನ ಸಭೆಯಲ್ಲಿ ಮೊಳಗಿಸಲಾಗುವುದು. ಹಾಗಾಗಿ ನೈಜ ಜನ ಪ್ರತಿನಿಧಿಗಳಾದ ಎಸ್.ಯು.ಸಿ.ಐ(ಸಿ) ಅಭ್ಯರ್ಥಿಗಳನ್ನು ಚುನಾಯಿಸಬೇಕಾಗಿ” ಮನವಿ ಮಾಡಿದರು.
ಈ ಸಭೆಯಲ್ಲಿ ಬಳ್ಳಾರಿ ನಗರ ಅಭ್ಯರ್ಥಿ ಆರ್.ಸೋಮಶೇಖರ ಗೌಡ, ಕಂಪ್ಲಿ ಕ್ಷೇತ್ರದ ಅಭ್ಯರ್ಥಿ ಎ.ದೇವದಾಸ್, ಜಿಲ್ಲಾ ಸಮಿತಿ ಸದಸ್ಯರಾದ ಮಂಜುಳಾ ಎಂ.ಎನ್, ನಾಗಲಕ್ಷ್ಮಿ.ಡಿ., ಡಾ.ಪ್ರಮೋದ್, ಗೋವಿಂದ್ ಮುಂತಾದವರು ಉಪಸ್ಥಿತರಿದ್ದರು.