
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.30: ಇಂದು ಬೆಳಿಗ್ಗೆ ಬಳ್ಳಾರಿಯ ದೊಡ್ಡ ಮಾರುಕಟ್ಟೆಯ ಬಳಿ ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ವತಿಯಿಂದ ಪ್ರಚಾರ ಸಭೆಯನ್ನು ನಡೆಸಿ, ನಂತರ ಆರ್.ಸೋಮಶೇಖರ್ ಗೌಡ ರವರಿಂದ ಮತಯಾಚನೆ ಮಾಡಲಾಯಿತು.
ಪ್ರಚಾರ ಸಭೆಯಲ್ಲಿ ಆರ್.ಸೋಮಶೇಖರ್ ಗೌಡ ರವರು ಮಾತನಾಡುತ್ತಾ “ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳು ಪ್ರತಿ ಬಾರಿ ಅನಗತ್ಯವಾದ ಕೆಲಸಗಳನ್ನು ಮಾಡುತ್ತಾ ಹಣ ವ್ಯಯ ಮಾಡುತ್ತಾ ಬಂದಿವೆ. ಬೀದಿ ಬದಿ ವ್ಯಾಪಾರಸ್ಥರಿಗೆ ಒಂದು ಸರಿಯಾದ ನೆಲೆಯನ್ನು ಕಲ್ಪಿಸಲು ಸಾಧ್ಯವಾಗಿಲ್ಲ. ಇಂದು ಅವರ ಜೀವನ ಅಭದ್ರತೆ ಗೆ ತಳ್ಳಲ್ಪಟ್ಟಿದೆ. ಬಳ್ಳಾರಿಯಲ್ಲಿ ಸಾವಿರಾರು ಗಾರ್ಮೆಂಟ್, ಜೀನ್ಸ್ ಕಾರ್ಮಿಕರು, ವಿವಿಧ ಖಾಸಗಿ ಕಾರ್ಖಾನೆಗಳಲ್ಲಿ ಗುತ್ತಿಗೆ-ಹೊರಗುತ್ತಿಗೆ ಕಾರ್ಮಿಕರು ದುಡಿಯುತ್ತಿದ್ದಾರೆ. ಇವರಿಗೆ ಕನಿಷ್ಟ ವೇತನ, ಫಿಎಫ್ – ಇಎಸ್ಐ ಸೌಲಭ್ಯಗಳು ಸರಿಯಾಗಿ ದೊರೆಯುತ್ತಿಲ್ಲ. ಇದರ ಬಗ್ಗೆ ಜಿಲ್ಲಾಡಳಿತವಾಗಲಿ, ಕಾರ್ಮಿಕ ಇಲಾಖೆ ಯಾಗಲಿ ಕಂಡೂ ಕಾಣದಂತೆ ಕಣ್ಮುಚ್ಚಿ ಕೂತಿವೆ. ಈ ಸಮಸ್ಯೆಗಳ ಮಾತನಾಡದ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ‘ಜೀನ್ಸ್ ಪಾರ್ಕ್’ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದವಾಗಿದೆ.
ಇಂತ ಸರ್ಕಾರಗಳಿಂದಾಗಲಿ, ಜನ ಪ್ರತಿನಿಧಿಗಳಿಂದಾಗಲಿ ಕಾರ್ಮಿಕರಿಗೆ ನ್ಯಾಯ ದೊರೆಯುವುದಿಲ್ಲ. ಕಾರ್ಪೋರೇಟ್ ಮಾಲೀಕರ ಪರವಾಗಿ ಕಾನೂನುಗಳನ್ನು ತರುತ್ತಾರೆ. ಇತ್ತೀಚೆಗೆ ರಾಜ್ಯ ಬಿಜೆಪಿ ಸರ್ಕಾರವು ಕಾರ್ಮಿಕರ ದುಡಿಮೆಯ ಅವಧಿಯನ್ನು 8 ಅಗಂಟೆಯಿಂದ 12 ಗಂಟೆಗೆ ಹೆಚ್ಚಿಸಿ ಕಾರ್ಪೋರೇಟ್ ಮಾಲೀಕರಿಗೆ ಮತ್ತಷ್ಟು ಲಾಭ ಮಾಡಿಕೊಡಲು ಮುಂದಾಗಿದೆ. ಇಂತಹ ನೀತಿಗಳನ್ನು ಹಿಮ್ಮೆಟ್ಟಿಸಲು ಕಾರ್ಮಿಕರ, ದುಡಿಯುವ ಜನತೆಯ ನೈಜ ಧ್ವನಿ ಅವಶ್ಯಕತೆ ಇದೆ. ಹಾಗಾಗಿ ಜನರು ಎಸ್.ಯು.ಸಿ.ಐ (ಸಿ,) ಪಕ್ಷಕ್ಕೆ ಮತನೀಡಬೇಕೆಂದು” ಆರ್.ಸೋಮಶೇಖರ್ ಗೌಡ ರವರು ಮನವಿ ಮಾಡಿದರು.
ಡಾ.ಪ್ರಮೋದ್ ಮಾತನಾಡುತ್ತಾ ” ಇಂದು ಬಳ್ಳಾರಿಯಲ್ಲಿ ಕಾರ್ಮಿಕರ, ದುಡಿಯುವ ಜನರ ಪರವಾದ, ಜನಸಾಮಾನ್ಯರ ಪರನಿಂತಿರುವ ಏಕೈಕ ಅಭ್ಯರ್ಥಿ ಎಂದರೆ ಅದು ಆರ್.ಸೋಮಶೇಖರ್ ಗೌಡ. ಜನರ ಜ್ವಲಂತ ಸಮಸ್ಯೆಗಳಿಗೆ ಧ್ವನಿ ಎತ್ತಿ ಹೋರಾಟಗಳನ್ನು ಕಟ್ಟಿರುವ ನೈಜ ಕಮ್ಯುನಿಸ್ಟ್ ಪಕ್ಷ ಎಂದರೆ ಅದು ಎಸ್.ಯು.ಸಿ.ಐ(ಸಿ) ಮಾತ್ರ, ಈ ಪಕ್ಷ ಮಾತ್ರವೇ ಜನರ ಭರವಸೆಯಾಗಿದೆ. ಇಂತಹ ಪಕ್ಷವನ್ನು ಬೆಂಬಲಿಸಿ, ಹೋರಾಟದ ಅಭ್ಯರ್ಥಿ ಆರ್.ಸೋಮಶೇಖರ್ ಗೌಡ ರವರ ‘ಆಟೋ ರಿಕ್ಷ’ ಗುರುತಿಗೆ ಮತನೀಡಿ, ಗೆಲ್ಲಿಸಬೇಕೆಂದು ಕೋರಿದರು”.
ಈ ಪ್ರಚಾರ ಸಭೆಯ ಅಧ್ಯಕ್ಷತೆಯನ್ನು ಕಾಮ್ರೇಡ್ ಈಶ್ವರಿ ಕೆ.ಎಮ್ ವಹಿಸಿದ್ದರು. ಪಕ್ಷದ ಕಾರ್ಯಕರ್ತೆಯರು, ಬೆಂಬಲಿಗರು ಪ್ರಚಾರ ಸಭೆಯಲ್ಲಿದ್ದರು.