ಎಸ್.ಯು.ಸಿ.ಐ. ಅಭ್ಯರ್ಥಿಯಾಗಿ ನಗರ ಕ್ಷೇತ್ರದಿಂದ ಎನ್.ಎಸ್.ವೀರೇಶ್ ಸ್ಪರ್ಧೆ

ರಾಯಚೂರು,ಏ.೭- ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ( ಕಮ್ಯುನಿಸ್ಟ್ ) ಪಕ್ಷದಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ೧೩ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ ಎಂದು ಎಸ್.ಯುಸಿಐ ರಾಜ್ಯ ಸಮಿತಿ ಸದಸ್ಯ ಹೆಚ್.ವಿ.ದಿವಾಕರ್ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ರಾಯಚೂರು ನಗರ ಕ್ಷೇತ್ರದಿಂದ ಎನ್.ಎಸ್.ವೀರೇಶ್,ಬೆಂಗಳೂರು ರಾಜಾಜಿನಗರ ರಮಾ ಟಿ.ಸಿ.ರಾಜರಾಜೇಶ್ವರಿ ನಗರ ಕೆ.ವೇಣುಗೋಪಾಲ್, ಬಳ್ಳಾರಿ ನಗರ ಕ್ಷೇತ್ರದಿಂದ ಸೋಮಶೇಖರ್ ಗೌಡ, ಕಂಪ್ಲಿ ದೇವದಾಸ್, ದಾವಣಗೆರೆ ದಕ್ಷಿಣದಿಂದ ಭಾರತಿ.ಕೆ.ಧಾರವಾಡ ಮಧೂಲತಾ ಗೌಡರ್, ಕಲಬುರ್ಗಿ ದಕ್ಷಿಣದಿಂದ ಮಹೇಶ್ ಎಸ್. ಬಿ.ಕಲಬುರ್ಗಿ ಗ್ರಾಮೀಣದಿಂದ ಗಣಪತ್ ಮಾನೆ,ಮೈಸೂರು ಕೃಷ್ಣರಾಜ ಕ್ಷೇತ್ರದಿಂದ ಪಿ.ಎನ್. ಸಂಧ್ಯಾ,ತುಮಕೂರು ನಗರದಿಂದ ಎಸ್.ನಾಗ ವಿರಭದ್ರಸ್ವಾಮಿ, ವಿಜಯಪುರ ನಗರ ಮಲ್ಲಿಕಾರ್ಜುನ ತಳವಾರ್,ಯಾದಗಿರಿ ನಗರದಿಂದ ಸೋಮಶೇಖರ್ ಕೆ ಇವರು ಸ್ಪರ್ಧಿಸಲಿದ್ದಾರೆ ಎಂದರು.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ.ಇದುವರೆಗೆ ರಾಜ್ಯವನ್ನಾಳಿದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಯಾತ್ರೆಯ ಮೇಲೆ ಯಾತ್ರೆಗಳ ಮೂಲಕ ತಮ್ಮ ಕಾರ್ಯಕರ್ತರಲ್ಲಿ ಗೆಲುವಿನ ವಿಶ್ವಾಸ ಮೂಡಿಸಲು ಹಗಲಿರುಳು ಬೆವರು ಸುರಿಸುತ್ತಿದ್ದಾರೆ.ಅಧಿಕಾರದಲ್ಲಿರುವಾಗ ಭ್ರಷ್ಟಾಚಾರ,ಸ್ವಜನ ಪಕ್ಷಪಾತ, ಒಳಜಗಳ, ಜನವಿರೋಧಿ ನೀತಿಗಳನ್ನು ಅನುಸರಿಸಿದ ಪ್ರಮುಖವಾಗಿ ಬಿಜೆಪಿ ಮಾತ್ರವಲ್ಲದೆ ಉಳಿದ ಎರಡು ಪಕ್ಷಗಳ ನಾಯಕರು ಸಹ ಈಗ ಜನರ ಮುಂದೆ ಅಧಿಕಾರಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ.ಸಧ್ಯಕ್ಕೆ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ದುರಾಡಳಿತ, ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಬಿಜೆಪಿಯ ಶಾಸಕರು, ಸಚಿವರು ಭ್ರಷ್ಟಾಚಾರದಲ್ಲಿ ಸಿಕ್ಕಿಹಾಕಿಕೊಂಡರೂ ಅವರೆಲ್ಲಾ ಕಾನೂನು ಮೀರಿದವರಾಗಿದ್ದಾರೆ.ಮೋದಿಯವರ ಭ್ರಷ್ಟಾಚಾರ ಮುಕ್ತ ಆಡಳಿತದ ಘೋಷಣೆ ಎಷ್ಟು ಪೊಳ್ಳು! ನಾ ಖಾವೂಂಗ ನಾ ಖಾನೆ ದೂಂಗ ಎಂಬ ಅವರ ಘೋಷಣೆ ಕಾಗದದಲ್ಲಿಯೇ ಉಳಿದಿದೆ ಎಂದರು.
ತಮ್ಮ ಮಷ್ಕೃತ್ಯಗಳನ್ನು ಮರೆಮಾಚಲು ಬಿಜೆಪಿಯು ಪದೇ ಪದೇ ಕೋಮುವಾದಿ ವಿಭಜಕ ವಿಚಾರಗಳನ್ನು ಮುನ್ನೆಲೆಗೆ ತರುತ್ತದೆ.ಇತಿಹಾಸವನ್ನು ಕೋಮುವಾದಿ ದುರುದ್ದೇಶದಿಂದ ತಮಗೆ ಬೇಕಾದಂತೆ ತಿರುಚುವ ಪಿತೂರಿಗೆ ಉರಿಗೌಡ, ನಂಜೇಗೌಡ, ಇತ್ತೀಚಿನ ಸೇರ್ಪಡೆ.ಆದರೆ ಕರ್ನಾಟಕದ ಜನತೆ ಈ ಕುತಂತ್ರಗಳಿಗೆ ಬಲಿ ಬೀಳದಿರುವುದು ಸಮಾಧಾನದ ವಿಷಯ.
ಕೋವಿಡ್ ಮಹಾಮಾರಿಯಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಜನತೆ ಬೆಲೆ ಏರಿಕೆ, ನಿರುದ್ಯೋಗ, ಹಣದುಬ್ಬರ,ಶಿಕ್ಷಣ ಆರೋಗ್ಯಗಳ ವ್ಯಾಪಾರೀಕರಣ, ಎಲ್ಲೆ ಮೀರಿದ ಭ್ರಷ್ಟಾಚಾರಗಳಿಂದ ನಲುಗಿ ಹೋಗಿದ್ದಾರೆ. ಕೇಂದ್ರ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ಜನರನ್ನು ಡಬಲ್ ಆಗಿ ದೋಚುತ್ತಿದೆ ಆದ್ದರಿಂದ ೨೦೨೩ ಚುನಾವಣೆಯಲ್ಲಿ ಎಸ್.ಯು.ಸಿ.ಐ ಅಭ್ಯರ್ಥಿ ಎನ್.ಎಸ್.ವೀರೇಶ್ ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಭ್ಯರ್ಥಿ ಎನ್.ಎಸ್.ವೀರೇಶ್,ಚಂದ್ರಗಿರೀಶ್,ಮಹೇಶ್ ಚಿಕಲಪರ್ವಿ,ಚನ್ನಬಸವ ಜಾನೇಕಲ್,ಸೇರಿದಂತೆ ಇತರರು ಉಪಸ್ಥಿತರಿದ್ದರು.