ಕಲಬುರಗಿ,ಅ.31:ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಭಾರತದ ಏಕೀಕರಣದ ಪಿತಾಮಹ ಸರ್ದಾರ್ ವಲ್ಲಭಭಾಯಿ ಪಟೇಲ್‍ರವರ ಜಯಂತಿ ಹಾಗೂ ಭಾರತದ ಉಕ್ಕಿನ ಮಹಿಳೆಯಾದ ಇಂದಿರಾ ಗಾಂಧಿಯವರ ಪುಣ್ಯಸ್ಮರಣೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾಲೇಜಿನ ಮೇಲ್ವಿಚಾರಕರಾದ ಡಾ. ಶ್ರೀಶೈಲ ಹೊಗಾಡೆ ಇವರ ನೇತೃತ್ವದಲ್ಲಿ ಎಲ್ಲ ವಿಭಾಗಗಳ ಮುಖ್ಯಸ್ಥರು ಹಾಗೂ ವಿದ್ಯಾರ್ಥಿಗಳು ಸೇರಿ, ಸರ್ದಾರ್ ವಲ್ಲಭಭಾಯಿ ಪಟೇಲ್‍ರವರ ಹಾಗೂ ಇಂದಿರಾ ಗಾಂಧಿಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮೂಲಕ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು.
‘ಸರ್ದಾರ್ ಪಟೇಲ್ ಅವರ ಜೀವನವು ನಮಗೆ ದಾರಿದೀಪವಿದ್ದಂತೆ, ಅವರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಉತ್ತಮ ಮನುಷ್ಯ ಮತ್ತು ಉತ್ತಮ ನಾಯಕತ್ವದ ಗುಣಗಳೇನು ಎಂಬುದನ್ನು ಸರ್ದಾರ್ ಪಟೇಲ್‍ರವರು ಸಮಾಜಕ್ಕೆ ತಿಳಿಸಿದ್ದಾರೆ. ಉತ್ತಮ ನಾಯಕನಾಗಬೇಕಾದರೆ ಸಂಬಂಧಗಳನ್ನು ಬೆಳೆಸುವಾಗ ನಿಸ್ವಾರ್ಥಿಯಾಗಬೇಕು, ಸಕಾರಾತ್ಮಕ ವಿಚಾರ ಮಾಡಬೇಕು, ನಿಷ್ಕಪಟಿಯಾಗಬೇಕು, ಸತ್ಯವನ್ನೇ ನುಡಿಯಬೇಕು, ಎಲ್ಲರನ್ನೂ ಒಂದೆಡೆ ಸೇರಿಸುವ ಮೂಲಕ ಶ್ರದ್ಧೆ-ಭಕ್ತಿಯಿಂದ ಕರ್ತವ್ಯ ನಿಭಾಯಿಸಬೇಕು ಮತ್ತು ಸಮಯವನ್ನು ಪಾಲಿಸಬೇಕು ಎಂಬುದನ್ನು ನಾವು ಸರ್ದಾರ್ ಪಟೇಲ್ ಅವರಿಂದ ಕಲಿಯಬೇಕು” ಅವರು ದೇಶದ ಬಡ ಜನರ ಮತ್ತು ರೈತರ ನಾಯಕರು. ಮಹಾತ್ಮಾ ಗಾಂಧಿಯವರ ಅಹಿಂಸೆ ಮತ್ತು ಭಾರತೀಯ ಸ್ವಾತಂತ್ರ್ಯ ಹೋರಾಟದ ಕಲ್ಪನೆಯನ್ನು ಹೇಗೆ ಸ್ವೀಕರಿಸಿದರು’ ಎಂದು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.
ಕಾಲೇಜಿನ ಪ್ರಾಚಾರ್ಯರಾದ ಶ್ರೀ ಎನ್.ಎಸ್. ದೇವರಕಲ್ ಸರ್ ಅವರ ಮಾರ್ಗದರ್ಶನದಲ್ಲಿ, ಎಲ್ಲಾ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕ ವರ್ಗದವರು, ಬೋಧಕೇತರ ಸಿಬ್ಬಂದಿ ವರ್ಗದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಅತ್ಯಂತ ಸರಳವಾಗಿ ಆಚರಿಸಲಾಯಿತು.