ಎಸ್.ಬಿ.ಆರ್.ನಲ್ಲಿ ‘ಭಕ್ತ ಕನಕದಾಸರ ಜಯಂತಿ’

ಕಲಬುರಗಿ:ನ.12:ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ದಾಸಶ್ರೇಷ್ಠ, ದಾರ್ಶನಿಕ, ತತ್ವಜ್ಞಾನಿ, ಮಹಾನ್‍ಭಕ್ತ ‘ಭಕ್ತ ಕನಕದಾಸ’ ರವರ 535ನೇ ಜಯಂತ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಡಾ. ಶ್ರೀಶೈಲ ಹೊಗಾಡೆ ಮೇಲ್ವಿಚಾರಕರು, ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ಕಾಲೇಜು ಕಲಬುರಗಿ, ಇವರ ನೇತೃತ್ವದಲ್ಲಿ ಎಲ್ಲ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿಗಳು ಸೇರಿ, ‘ಭಕ್ತ ಕನಕದಾಸರ’ರವರ ಭಾವಚಿತ್ರಕ್ಕೆ ಪೂಜೆ ಹಾಗೂ ಮಾಲಾರ್ಪಣೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.

ಈ ಕಾರ್ಯಕ್ರಮದಲ್ಲಿ ಪಿಯುಸಿ ವಿದ್ಯಾರ್ಥಿಗಳಿಂದ ಭಾಷಣ, ಕನಕದಾಸರ ಕೀರ್ತನೆಗಳ ಗಾಯನ, ಕವನ ವಾಚನ ಮುಂತಾದ ಚಟುವಟಿಕೆಗಳು ನಡೆದವು.

ಕುಮಾರಿ: ನಿವೇದಿತಾ ದೇಶಪಾಂಡೆ ಎಂಬ ವಿದ್ಯಾರ್ಥಿನಿಯು ಕನಕದಾಸರ ಜೀವನದ ಕುರಿತು ಮಾತನಾಡುತ್ತಾ ‘ಕನಕದಾಸರ ಜೀವನ ನಮ್ಮೆಲ್ಲರಿಗೂ ಅನುಕರಣೀಯವಾದುದು, ಧೃಢಭಕ್ತಿ, ಅಚಲವಾದ ನಂಬಿಕೆಯಿದ್ದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದೆಂದು ತೋರಿಸಿಕೊಟ್ಟು, ಸಾಕ್ಷಾತ್ ಭಗವಂತನನ್ನೇ ಒಲಿಸಿಕೊಂಡ ಮಹಾನ್ ಭಕ್ತ ಕನಕದಾಸರು. ಜಾತಿ, ಕುಲ, ಧರ್ಮಗಳನ್ನು ಮೀರಿ ನಾವು ಬದುಕಬೇಕು ಅಂದಾಗ ಮಾತ್ರ ಈ ಜೀವನಕ್ಕೆ ಒಂದು ಅರ್ಥ ಬರುತ್ತದೆ’ ಎಂದು ಹೇಳಿದಳು.

ಕುಮಾರ: ಆದಿತ್ಯಾ ಎಂಬ ವಿದ್ಯಾರ್ಥಿಯು ಕನಕದಾಸರ ತತ್ವ ಸಂದೇಶಗಳ ಕುರಿತು ಮಾತನಾಡುತ್ತಾ “ಮನುಷ್ಯ ತನ್ನ ಅಹಂಕಾರವನ್ನು ಬಿಟ್ಟು ಸಂಸ್ಕಾರವನ್ನು ಪಡೆದರೆ ಮಾತ್ರ ಜೀವನದಲ್ಲಿ ಆನಂದಮಯವಾಗಿ ಬಾಳಲು ಸಾಧ್ಯ. ಅಜ್ಞಾನದ ಕಾರಣ ಮನುಷ್ಯ ‘ನಾನು’ ಎಂಬ ಅಹಂಕಾರದಲ್ಲಿ ಮುಳುಗಿ ದು:ಖವನ್ನು ಭೋಗಿಸುತ್ತಿದ್ದಾನೆ. ಹಾಗಾಗಿ ‘ನಾನು ಪರಮಾತ್ಮನ ದಾಸ’ಎಂಬುದು ಅರಿತು ಸೇವೆಗೈದಾಗ ಮಾತ್ರ ನೆಮ್ಮದಿಯಿಂದ ಬಾಳಲು ಸಾಧ್ಯವೆಂದು ಕನಕದಾಸರು ಹೇಳಿದ್ದಾರೆ” ಎಂದು ತಮ್ಮ ಅನುಭವದÀ ಮಾತುಗಳನ್ನು ವ್ಯಕ್ತಪಡಿಸಿದನು.

ಹಾಗೆಯೇ ಕುಮಾರ: ಸಿದ್ದಪ್ಪ ಎಂಬ ವಿದ್ಯಾರ್ಥಿಯು ಕನಕದಾಸರ ಕೃತಗಳನ್ನು ಕುರಿತು ಮಾತನಾಡಿದರೆ, ಕುಮಾರಿ: ಪವಿತ್ರಾ ಎಂಬ ವಿದ್ಯಾರ್ಥಿನಿಯು ಕನಕದಾಸರ ಸಾಹಿತ್ಯದಲ್ಲಿನ ಸಾಮಾಜಿಕ ಚಿಂತನೆಗಳನ್ನು ಕುರಿತು ಮಾತನಾಡಿದಳು.

ಇದೇ ಸಂದರ್ಭದಲ್ಲಿ ಕುಮಾರಿ: ಅನುಶ್ರೀ, ಅಂಕಿತಾ, ನಿಕಿತಾ, ಅಕ್ಷತಾ ಮುಂತಾದ ವಿದ್ಯಾರ್ಥಿಗಳಿಂದ ದಾಸರ ಪದಗಳನ್ನು ಹಾಡಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಎಲ್ಲಾ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕ ವರ್ಗದವರು, ಬೋಧಕೇತರ ಸಿಬ್ಬಂದಿ ವರ್ಗದವರು, ಎಲ್ಲ ಪಿಯುಸಿ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಅತ್ಯಂತ ಸರಳವಾಗಿ ಆಚರಿಸಲಾಯಿತು