ಎಸ್.ಬಿ.ಆರ್. ನಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ

ಕಲಬುರಗಿ:ಸೆ.17:ಶರಣಬಸವೇಶ್ವರ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಮತ್ತು ದೇವಶಿಲ್ಪಿ ‘ವಿಶ್ವಕರ್ಮರ’ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾಲೇಜಿನ ಮೇಲ್ವಿಚಾರಕರಾದ ಡಾ. ಶ್ರೀಶೈಲ್ ಹೊಗಾಡೆ ಅವರ ಉಪಸ್ಥಿತಿಯಲ್ಲಿ ವಿದ್ಯಾರ್ಥಿಗಳು, ಕಲ್ಯಾಣ ಕರ್ನಾಟಕ ವಿಮೋಚನೆಯ ಹರಿಕಾರ ಸರದಾರ್ ವಲ್ಲಭಭಾಯಿ ಪಟೇಲ್ ಮತ್ತು ವಿಶ್ವಕರ್ಮ ರವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಪಿ.ಯು.ಸಿ. ಪ್ರಥಮ ವರ್ಷದ ವಿದ್ಯಾರ್ಥಿಗಳಾದ ಕುಮಾರಿ: ಪ್ರಿಯಾಂಕಾ ಪಾಟೀಲ್, ಕುಮಾರಿ: ಪ್ರಿಯಾ ಪಾಟೀಲ್ ಹಾಗೂ ಕುಮಾರಿ: ಹನ್ಸಿಕಾ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಕುಮಾರಿ: ಪ್ರಿಯಾಂಕಾ ಪಾಟೀಲ್ ಮಾತನಾಡುತ್ತಾ “ಸಪ್ಟೆಂಬರ್ 17 ‘ಹೈದ್ರಾಬಾದ ಕರ್ನಾಟಕ’ ಜನತೆಯ ಪಾಲಿಗೆ ಮರೆಯಲಾಗದ ದಿನ. ನಿಜಾಮನ ಕಪಿಮುಷ್ಠಿಯಿಂದ ವಿಮೋಚನೆಗೊಂಡ ದಿನ ಇಂದು. ಈ ಭಾಗದ ಜನ ಎರಡನೇ ಬಾರಿ ಸ್ವಾತಂತ್ರ್ಯಕ್ಕಾಗಿ ಚಳುವಳಿ ಮಾಡಬೇಕಾಗಿ ಬಂತು. ಈ ಚಳುವಳಿಯಲ್ಲಿ ಅದೆಷ್ಟೋ ದೇಶಪ್ರೇಮಿಗಳು ಹೋರಾಟ ಮಾಡಿ ತಮ್ಮ ಪ್ರಾಣವನ್ನು ಕಳೆದುಕೊಂಡು ಹೈದ್ರಾಬಾದ ಕರ್ನಾಟಕವನ್ನು ವಿಮೋಚನೆ ಗೊಳಿಸಿದ್ದಾರೆ. ಅವರನ್ನು ನೆನಪಿಸಿಕೊಳ್ಳುವಂತಹ ಪವಿತ್ರ ದಿನ ಇಂದು” ಎಂದು ಹೇಳಿದಳು.
ಕುಮಾರಿ: ಕುಮಾರಿ: ಹನ್ಸಿಕಾ ಮಾತನಾಡುತ್ತ “ನಿಜಾಮನ ದಾಸ್ಯತನದಲ್ಲಿ ಸಿಲುಕಿ ನಲುಗುತ್ತಿರುವ ಈ ನಮ್ಮ ಉತ್ತರ ಕರ್ನಾಟಕದ 6 ಜಿಲ್ಲೆಗಳಿಗೆ 15 ಅಗಸ್ಟ 1947ರಂದು ಸ್ವಾತಂತ್ರ್ಯ ಸಿಗಲಿಲ್ಲ. ಸ್ವಾಮಿ ರಮಾನಂದತೀರ್ಥರು ಹಾಗೂ ಮುಂತಾದ ಮಹನೀಯರ ಹೋರಾಟದ ಫಲದಿಂದ 1 ವರ್ಷ 1 ತಿಂಗಳು 2 ದಿನಗಳ ನಂತರ 1948 ಸೆಪ್ಟಂಬರ 17 ರಂದು ನಮ್ಮ ಈ ಭಾಗಕ್ಕೆ ಸ್ವಾತಂತ್ರ್ಯ ಲಭಿಸಿತು.” ಎಂದು ಹೇಳಿದಳು.
ಕುಮಾರಿ: ಪ್ರಿಯಾ ಪಾಟೀಲ್ ಮಾತನಾಡುತ್ತ “ ನಿಜಾಮನ ಆಡಳಿತದಲ್ಲಿ ಕೇವಲ ರಾಜಕೀಯವಾಗಿ ಮಾತ್ರ ದಬ್ಬಾಳಿಕೆ ನಡೆಯದೇ ನಮ್ಮ ಸಾಂಸ್ಕøತಿಕ, ಸಾಮಾಜಿಕ ವ್ಯವಸ್ಥೆಯ ಮೇಲೆ ದಬ್ಬಾಳಿಕೆ ನಡೆಯುತ್ತಿತ್ತು. ಹಲವಾರು ಮಹನೀಯರ ಪರಿಶ್ರಮದಿಂದ ಈ ದಾಸ್ಯತ್ವದಿಂದ ಮುಕ್ತಿ ಪಡೆಯಲಾಗಿದ್ದು, ಅದರ ಸದುಪಯೋಗವಾಗುವುದೂ ಕೂಡಾ ಅಷ್ಟೆ ಮುಖ್ಯ. ಸ್ವಾತಂತ್ರ್ಯ ನಮ್ಮ ವೈಯಕ್ತಿಕ ಎಳ್ಗೆಗಾಗಿ ಅಲ್ಲ ಸಮಾಜದ, ದೇಶದ ಎಳಿಗೆಗೆ ಬಳಕೆಯಾಗಬೇಕು” ಎಂದು ಹೇಳಿದಳು.

ವಿಶ್ವಕರ್ಮರ ಜಯಂತಿ
ಹಾಗೆಯೇ ವಿಶ್ವದ ವಾಸ್ತು ಶಿಲ್ಪಿ ವಿಶ್ವಕರ್ಮ ಅವರ ಜಯಂತಿಯೂ ಕೂಡ ಇಂದೇ ಆಗಿರುತ್ತದೆ.
ಕುಮಾರ: ಸಿದ್ದಲಿಂಗಯ್ಯ ಸ್ವಾಮಿ ಮಾತನಾಡುತ್ತಾ “ಸೃಷ್ಟಿಕರ್ತ ಭ್ರಹ್ಮನಾದರೆ, ಅವನ ವಂಶಸ್ತನಾದ ವಿಶ್ವಕರ್ಮನು ಇಡೀ ವಿಶ್ವದ ಕರಡು ಪ್ರತಿಯ ಪಿತಾಮಹಃ, ಸೃಷ್ಠಿಯ ನೀಲ ನಕ್ಷೆ ತಯಾರಕ. ಇಂದು ನಾವೆಲ್ಲರೂ ಒಂದು ಅದ್ಭುತವಾದ ಸುಂದರ ಜಗತ್ತನ್ನು ನೋಡಲು ಸಾಧ್ಯವಾಗಿದೆ ಎಂದಾದರೆ ಅದು ವಿಶ್ವಕರ್ಮರ ಕಾರ್ಯತತ್ಪರತೆಯ ಫಲಿತಾಂಶದ ಪರಿಣಾಮವೇ ಹೊರತು ಬೆರೆ ಇನ್ನೇನಿಲ್ಲ. ವಿಶ್ವಕರ್ಮ ಎಂದರೆ ಸ್ವರ್ಗದ ಶಿಲ್ಪಿ. ದೇವಾನು ದೇವತೆಗಳಿಗೆ ಹಲವು ಯುಗಗಳಲ್ಲಿ ಹಲವಾರು ಸುಂದರ ನಗರ ಮತ್ತು ಪಟ್ಟಣಗಳನ್ನು ನಿರ್ಮಿಸಿದ ಕೀರ್ತಿ ಇವರದ್ದಾಗಿದೆ. ಸತ್ಯ ಯುಗದಲ್ಲಿ ಸ್ವರ್ಗ ನಿರ್ಮಾಣ, ತ್ರೇತಾಯುಗದಲ್ಲಿ ಲಂಕಾ ಪಟ್ಟಣ ನಿರ್ಮಾಣ ದ್ವಾಪರ ಯುಗದಲ್ಲಿ ಕೃಷ್ಣನ ರಾಜಧಾನಿ ದ್ವಾರಕಾ ನಿರ್ಮಾಣ, ಕೌರವರಿಗೆ ಹಸ್ತಿನಾಪುರ ಪಾಂಡವರಿಗೆ ಇಂದ್ರಪ್ರಸ್ತ ಎಂಬ ಸುಂದರ ನಗರಗಳ ನಿರ್ಮಾಣ ಮಾಡಿದ ವಿಶ್ವಕರ್ಮರನ್ನು ನೆನಪಿಸುವ ಪುಣ್ಯ ದಿನವಾಗಿದೆ ಇಂದು” ಎಂದು ಹೇಳಿದನು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲ ವಿದ್ಯಾರ್ಥಿಗಳು ಎಲ್ಲಾ ವಿಷಯದ ಮುಖ್ಯಸ್ಥರು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.