ಎಸ್.ಬಿ.ಆರ್. ನಲ್ಲಿ ಇಂದು ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ

ಕಲಬುರಗಿ:ಸೆ.17:ಶರಣಬಸವೇಶ್ವರ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಇಂದು (17.09.2022) ರಂದು ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಮತ್ತು ದೇವಶಿಲ್ಪಿ ‘ವಿಶ್ವಕರ್ಮ’ ಜಯಂತಿಯನ್ನು ಸಡಗರದಿಂದ ಆಚರಿಸಲಾಯಿತು.

ಕಾಲೇಜಿನ ಮೇಲ್ವಿಚಾರಕರಾದ ಡಾ. ಶ್ರೀಶೈಲ್ ಹೊಗಾಡೆ ಅವರು ಸರದಾರ್ ವಲ್ಲಭಭಾಯಿ ಪಟೇಲ್ ಮತ್ತು ವಿಶ್ವಕರ್ಮ ರವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕುಮಾರಿ: ಶೃದ್ಧಾ ನಂದ್ಯಾಳ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮಾತನಾಡುತ್ತಾ “ಸಪ್ಟೆಂಬರ್ 17 ‘ಹೈದ್ರಾಬಾದ ಕರ್ನಾಟಕ’ ಜನತೆಯ ಪಾಲಿಗೆ ಮರೆಯಲಾಗದ ಮಹಾನ್ ದಿನ. ನಿಜಾಮನ ಕಪಿಮುಷ್ಠಿಯಿಂದ ವಿಮೋಚನೆಗೊಂಡ ಪುಣ್ಯ ದಿನ. ಭಾರತಕ್ಕೆ 1947 ಅಗಸ್ಟ್ 15 ರಂದು ಸ್ವಾತಂತ್ರ್ಯ ಸಿಕ್ಕರೆ, ಹೈದ್ರಾಬಾದ ಕರ್ನಾಟಕ ಭಾಗ ನಿಜಮಾನ ದಾಸ್ಯದಿಂದ ಬಿಡುಗಡೆಗೊಂಡದ್ದು ಬರೊಬ್ಬರಿ 1 ವರ್ಷ 32 ದಿನಗಳ ನಂತರ. ಈ ಭಾಗದ ಜನ ಮತ್ತೆ ಸ್ವಾತಂತ್ರ್ಯಕ್ಕಾಗಿ ಚಳುವಳಿ ಮಾಡಬೇಕಾಗಿ ಬಂತು ಈ ಚಳುವಳಿಯಲ್ಲಿ ಅದೆಷ್ಟೋ ದೇಶಪ್ರೇಮಿಗಳು ಹೊರಾಟ ಮಾಡಿ ತಮ್ಮ ಪ್ರಾಣವನ್ನು ಕಳೆದುಕೊಂಡು ಹೈದ್ರಾಬಾದ ಕರ್ನಾಟಕವನ್ನು ವಿಮೋಚನೆ ಗೊಳಿಸಿದ್ದಾರೆ. ಅವರನ್ನು ನೆನಪಿಸಿಕೊಳ್ಳುವಂತಹ ಪವಿತ್ರ ದಿನ ಇಂದು.

ಹಾಗೆಯೇ ವಿಶ್ವದ ವಾಸ್ತು ಶಿಲ್ಪಿ ವಿಶ್ವಕರ್ಮ ಅವರ ಜಯಂತಿಯೂ ಕೂಡ ಇಂದೇ ಆಗಿರುತ್ತದೆ. ಸೃಷ್ಟಿಕರ್ತ ಭ್ರಹ್ಮನಾದರೆ, ಅವನ ವಂಶಸ್ತನಾದ ವಿಶ್ವಕರ್ಮನು ಇಡೀ ವಿಶ್ವದ ಕರಡು ಪ್ರತಿಯ ಪಿತಾಮಹಃ, ಸೃಷ್ಠಿಯ ನೀಲ ನಕ್ಷೆ ತಯಾರಕ. ಇಂದು ನಾವೆಲ್ಲರೂ ಒಂದು ಅದ್ಭುತವಾದ ಸುಂದರ ಜಗತ್ತನ್ನು ನೋಡಲು ಸಾಧ್ಯವಾಗಿದೆ ಎಂದಾದರೆ ಅದು ವಿಶ್ವಕರ್ಮರ ಕಾರ್ಯತತ್ಪರತೆಯ ಫಲಿತಾಂಶದ ಪರಿಣಾಮವೇ ಹೊರತು ಬೆರೆ ಇನ್ನೇನಿಲ್ಲ. ವಿಶ್ವಕರ್ಮ ಎಂದರೆ ಸ್ವರ್ಗದ ಶಿಲ್ಪಿ, ಸಮುದ್ರ ಮಂಥನ ಕಾಲದಲ್ಲಿ ಹಟ್ಟಿದ ಹದಿನಾಲ್ಕು ಅಮೂಲ್ಯ ರತ್ನಗಳಲ್ಲಿ ವಿಶ್ವಕರ್ಮರು ಒಬ್ಬರು. ದೇವಾನು ದೇವತೆಗಳಿಗೆ ಹಲವು ಯುಗಗಳಲ್ಲಿ ಹಲವಾರು ಸುಂದರ ನಗರ ಮತ್ತು ಪಟ್ಟಣಗಳನ್ನು ನಿರ್ಮಿಸಿದ ಕೀರ್ತಿ ಇವರದ್ದಾಗಿದೆ. ಸತ್ಯ ಯುಗದಲ್ಲಿ ಸ್ವರ್ಗ ನಿರ್ಮಾಣ, ತ್ರೇತಾಯುಗದಲ್ಲಿ ಲಂಕಾ ಪಟ್ಟಣ ನಿರ್ಮಾಣ ದ್ವಾಪರ ಯುಗದಲ್ಲಿ ಕೃಷ್ಣನ ರಾಜಧಾನಿ ದ್ವಾರಕಾ ನಿರ್ಮಾಣ, ಕೌರವರಿಗೆ ಹಸ್ತಿನಾಪುರ ಪಾಂಡವರಿಗೆ ಇಂದ್ರಪ್ರಸ್ತ ಎಂಬ ಸುಂದರ ನಗರಗಳ ನಿರ್ಮಾಣ ಮಾಡಿದ ವಿಶ್ವಕರ್ಮರನ್ನು ನೆನಪಿಸುವ ಪುಣ್ಯ ದಿನವಾಗಿದೆ ಇಂದು” ಎಂದು ಹೇಳಿದಳು.

ಈ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಎಲ್ಲಾ ವಿಷಯದ ಮುಖ್ಯಸ್ಥರು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮವು ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡಿತು.