ಎಸ್.ಬಿ.ಆರ್.ನಲ್ಲಿ ಇಂದು’ಮಕ್ಕಳ ದಿನಾಚರಣೆ’ ಹಾಗೂವಿದ್ಯಾ ಭಂಡಾರಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರ 88ನೇ ಜನ್ಮದಿನಾಚರಣೆ

ಕಲಬುರಗಿ:ನ.14:ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಪಂಡಿತ ಜವಾಹರಲಾಲ್ ನೇಹರೂ ರವರ ಜನ್ಮದಿನಾಚರಣೆಯನ್ನು ಮಕ್ಕಳ ದಿನಾಚರಣೆಯ ರೂಪದಲ್ಲಿ ಹಾಗೂ ವಿದ್ಯಾಭಂಡಾರಿ ಪರಮಪೂಜ್ಯ ಡಾ. ಶರಣಬಸವಪ್ಪ ಅಪ್ಪ (ಮಹಾದಾಸೋಹ ಪೀಠಾಧಿಪತಿಗಳು, ಶರಣಬಸವೇಶ್ವರ ಸಂಸ್ಥಾನ. ಅಧ್ಯಕ್ಷರು, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ. ಕುಲಾಧಿಪತಿಗಳು, ಶರಣಬಸವ ವಿಶ್ವವಿದ್ಯಾಲಯ, ಕಲಬುರಗಿ.) ಅವರ 88ನೇ ಜನ್ಮದಿನಾಚರಣೆಯ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಡಾ. ಶ್ರೀಶೈಲ ಹೊಗಾಡೆ ಮೇಲ್ವಿಚಾರಕರು, ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ಕಾಲೇಜು ಕಲಬುರಗಿ, ಇವರ ನೇತೃತ್ವದಲ್ಲಿ ಎಲ್ಲ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿಗಳು ಸೇರಿ, ಪಂಡಿತ ಜವಾಹರಲಾಲ್ ನೇಹರೂ ರವರ ಭಾವಚಿತ್ರಕ್ಕೆ ಪೂಜೆ ಹಾಗೂ ಮಾಲಾರ್ಪಣೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ನೆರವೇರಿಸಿದರು.

ಪಂಡಿತ ಜವಾಹರಲಾಲ್ ನೆಹರೂ ಜಿ ಅವರು ಮಕ್ಕಳ ಬಗ್ಗೆ ಅದ್ಭುತವಾದ ಪ್ರೀತಿಯನ್ನು ಹೊಂದಿದ್ದರು ಮತ್ತು ಮಕ್ಕಳು ರಾಷ್ಟ್ರದ ಭವಿಷ್ಯದ ಸೃಷ್ಟಿಕರ್ತರು ಎಂದು ಪರಿಗಣಿಸಿದ್ದರು. ನಮ್ಮ ಭವಿಷ್ಯವನ್ನು ನಾವು ಉಳಿಸಿಕೊಳ್ಳಬೇಕಾದರೆ, ಈ ಮಕ್ಕಳ ಭವಿಷ್ಯವನ್ನು ಉತ್ತಮ ದಿಕ್ಕಿನಲ್ಲಿ ನಿರ್ಮಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅವರ ಮಕ್ಕಳ ಮೇಲಿನ ಪ್ರೀತಿಯ ಒಂದು ನೋಟದಲ್ಲಿಯೇ, ನಮ್ಮ ಭೂಮಿ ಅವರ ಜನ್ಮದಿನವನ್ನು ಮಕ್ಕಳ ದಿನವೆಂದು ನೆನಪಿಸಿಕೊಳ್ಳಲು ಪ್ರಾರಂಭಿಸಿತು. ಈ ಆಚರಣೆಯ ಮುಖ್ಯ ಉದ್ದೇಶವು ಭಾರತದ ಎಲ್ಲಾ ನಾಗರಿಕರಿಗೆ ಶಿಕ್ಷಣವನ್ನು ಪಡೆಯಲು ಮಕ್ಕಳಿಗೆ ಹಕ್ಕುಗಳನ್ನು ನೀಡುವ ಬಗ್ಗೆ ಅರಿವು ಮೂಡಿಸುವುದು. ಸರಿಯಾದ ದಿಕ್ಕಿನಲ್ಲಿ ಬೆಳೆಯುವುದು ಅವರ ಹಕ್ಕು ಮತ್ತು ಆದ್ದರಿಂದ ಮಕ್ಕಳ ಭವಿಷ್ಯವನ್ನು ಅವಲಂಬಿಸಿ ಸುಸಂಘಟಿತ ಮತ್ತು ಶ್ರೀಮಂತ ರಾಷ್ಟ್ರವನ್ನು ಅಭಿವೃದ್ಧಿ ಪಡಿಸಬಹುದು. ಜವಾಹರಲಾಲ್ ನೆಹರು ಅವರು “ಯಾವುದೇ ರಾಷ್ಟ್ರದ ಆಸ್ತಿ ಅದರ ಭಂಡಾರದಲ್ಲಿಲ್ಲ, ಅವರ ಶಾಲೆಗಳಲ್ಲಿದೆ ” ಎಂದು ಹೇಳುತ್ತಿದ್ದರಿಂದ, ನಾವು ನಮ್ಮ ಮಕ್ಕಳನ್ನು ದೇಶದ ಸಂಪತ್ತು ಎಂದು ಗುರುತಿಸಿ ಅವರನ್ನು ರಕ್ಷಿಸಿ ಅವರ ಭವಿಷ್ಯವನ್ನು ಅಭಿವೃದ್ಧಿಪಡಿಸಬೇಕು.

ವಿದ್ಯಾಬಂಢಾರಿ ಪೂಜ್ಯ ಡಾ. ಶರಣಬಸಪ್ಪ ಅಪ್ಪ ಅವರೂ ಕೂಡಾ ನೇಹರೂ ರವರ ವಿಚಾರಧಾರೆಗಳಂತೆಯೇ “ರಾಷ್ಟ್ರ ಅಭಿವೃದ್ಧಿ ಆಗಬೇಕಾದರೆ ಶಿಕ್ಷಣದ ಅಭಿವೃದ್ಧಿಯಾಗಬೇಕು. ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕಾದರೆ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು. ಅದಕ್ಕಾಗಿಯೇ ಪೂಜ್ಯ ಅಪ್ಪಾಜಿಯವರು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಎಲ್ ಕೆ ಜಿ ಯಿಂದ ವಿಶ್ವ ವಿದ್ಯಾಲಯದ ವರೆಗೂ ಅನೇಕ ಶಾಲಾ ಕಾಲೇಜುಗಳನ್ನು ಪ್ರಾರಂಭಿಸಿದ್ದಾರೆ. ಪೂಜ್ಯ ಅಪ್ಪಾಜಿ ಅವರು ನೂರಾರು ವರ್ಷದಿಂದ ಮೃದು ಮನಸ್ಸಿನ ಭಾವನೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಗುಣಾತ್ಮಕ ಶಿಕ್ಷಣ ಕೊಡುವುದಕ್ಕಾಗಿ ತಮ್ಮ ಜೀವನವನ್ನು ಸಮರ್ಪಿಸಿಕೊಂಡಿದ್ದಾರೆ. ವೈಜ್ಞಾನಿಕ ದೃಷ್ಟಿ ಮತ್ತು ಆಧ್ಯಾತ್ಮಿಕ ತಳಹದಿಯ ಮೇಲೆ ಈ ಸಂಸ್ಥೆ ಬೆಳೆಯಲು ಅಪ್ಪಾಜೀಯವರೇ ಕಾರಣ. ಈ ಸಂಸ್ಥೆಯಲ್ಲಿ ವ್ಯಾಸಾಂಗ ಮಾಡಿದ ಅಸಂಖ್ಯಾತ ವಿದ್ಯಾರ್ಥಿಗಳು ಪ್ರಪಂಚದ ಮೂಲೆ ಮೂಲೆಯಲ್ಲಿ ಸೇವಾನಿರತಾಗಿದ್ದಾರೆ’ ಎಂದು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.

ಪೂಜ್ಯ ಅಪ್ಪಾಜಿ ಯವರ 88ನೇ ಹುಟ್ಟು ಹಬ್ಬದ ಈ ಶುಭ ಸಂದರ್ಭದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಬರುವ ವಿದ್ಯಾರ್ಥಿಗಳಿಂದ ದಿ. 13.11.2022 ರಂದು ಸಾಯಂಕಾಲ 5:00 ಗಂಟೆಗೆ ಎಸ್ ಬಿ ಕಾಲೇಜು ಆವರಣದಿಂದ ಶರಣಬಸವೇಶ್ವರ ದೇವಸ್ಥಾನದ ವರೆಗೆ ಪಥಸಂಚಲನ ನಡೆಸಲಾಯಿತು. ಅಪ್ಪಾಜಿಯವರ ದಾಸೋಹ ಜೀವನದ ಕುರಿತ ಕಟೌಟ್‍ಗಳು, ಬ್ಯಾನರ್ಸಗಳು, ಪ್ಲೆಕ್ಸಗಳು, ವಿದ್ಯಾರ್ಥಿಗಳ ಜೈಕಾರಗಳು ಮುಂತಾದವುಗಳಿಂದ ಈ ಪಥಸಂಚಲದ ಮೆರವಣಿಗೆಯು ನೆರವೇರಿತು. ಸುಮಾರು ಎಂಟು ಸಾವಿರ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಈ ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು.

ಈ ಕಾರ್ಯಕ್ರಮದಲ್ಲಿ ಎಲ್ಲಾ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕ ವರ್ಗದವರು, ಬೋಧಕೇತರ ಸಿಬ್ಬಂದಿ ವರ್ಗದವರು, ಪಿಯುಸಿ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು