ಎಸ್.ಬಿ.ಆರ್. ಕಾಲೇಜಿನಲ್ಲಿ ಸಂತ ಕವಿ ಸರ್ವಜ್ಞನವರ ಜಯಂತಿ

ಕಲಬುರಗಿ:ಫೆ.21:ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ಕಂಡ ಶ್ರೇಷ್ಠ ವಚನಕಾರ, ದಾರ್ಶನಿಕ ಕವಿ, ತ್ರಿಪದಿ ಚಕ್ರವರ್ತಿ ಸರ್ವಜ್ಞನವರ 504ನೇ ಜಯಂತಿಯನ್ನು ಅರ್ಥಪೂರ್ಣ ರೂಪದಲ್ಲಿ ಆಚರಿಸಲಾಯಿತು
ಪ್ರಾಚಾರ್ಯರಾದ ಶ್ರೀ ಎನ್ ಎಸ್ ದೇವರಕಲ್ ಸರ್ ಅವರ ಮಾರ್ಗದರ್ಶನದಲ್ಲಿ, ಮೇಲ್ವಿಚಾರಕರಾದ ಡಾ. ಶ್ರೀಶೈಲ್ ಹೊಗಾಡೆಯವರು ಹಾಗೂ ಎಲ್ಲ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿಗಳು ಸೇರಿ ಸರ್ವಜ್ಞನವರ ಭಾವಚಿತ್ರಕ್ಕೆ ಪೂಜೆ ಹಾಗೂ ಮಾಲಾರ್ಪಣೆಯನ್ನು ಮಾಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸರ್ವಜ್ಞನವರ ಕುರಿತು ಮಾತನಾಡಿದರು.
ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿ ವಿಕಾಸ ನಾವಿ ಮಾತನಾಡುತ್ತಾ “ಜಾತಿ, ಮತ, ಧರ್ಮ ಸಂಘರ್ಷದ ವಿರುದ್ಧ ಕಿಡಿಕಾರಿದ; ಮೂಢನಂಬಿಕೆ, ಶೋಷಣೆಗಳನ್ನು ಕಟುವಾಗಿ ಟೀಕಿಸಿದ; ವಿಶ್ವ ಮಾನವತೆ, ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದ ಸರ್ವಜ್ಞನ ತ್ರಿಪದಿಗಳು ಸಮಾಜದಲ್ಲಿ ಸಾರ್ವಕಾಲಕ್ಕೂ ಸಲ್ಲುವ ಸೂಳ್ನುಡಿಗಳು. ಕನ್ನಡ ನಾಡು ಕಂಡ ಶ್ರೇಷ್ಠ ದಾರ್ಶನಿಕ ಸರ್ವಜ್ಞ. ವೈಚಾರಿಕ ತ್ರಿಪದಿಗಳ ಚಕ್ರವರ್ತಿ. ಜನರ ನಡುವೆ ಬದುಕಿದ ಜನಪದ ವರಕವಿ. ಸರ್ವಜ್ಞನಿಗಾಗಿ ಒಂದು ಗಾದೆ ಹುಟ್ಟಿಕೊಂಡಿರುವುದು ಒಂದು ವಿಶೇಷ. ಏನೆಂದರೆ- ಆಡು ಮುಟ್ಟದ ಸೊಪ್ಪಿಲ್ಲ ಸರ್ವಜ್ಞನು ಹೇಳದ ಮಾತಿಲ್ಲ. ಅಂದರೆ ಸರ್ವಜ್ಞ ಎಲ್ಲ ವಿಷಯಗಳನ್ನು ಬಲ್ಲವ ಎಂದರ್ಥ. ಸರ್ವಜ್ಞ ಕವಿಯು ಮೂರು ಸಾಲಿನಲ್ಲಿ ಮಹಾಕಾವ್ಯಗಳ, ಮಹಾ ಗ್ರಂಥಗಳ ಸಾರವನ್ನು ಹಿಡಿದಿಟ್ಟಿದ್ದಾನೆ. ತುಳಸಿದಾಸರು ಹೇಳುವಂತೆ ‘ಗಾಗರ್ಮೆ ಸಾಗರ’ ಅಂದರೆ ಕೊಡದಲ್ಲಿ ಸಾಗರವನ್ನು ತುಂಬಿಸುವಂತೆ ಮೂರು ಸಾಲಿನ ಪದ್ಯದಲ್ಲಿ ಸರ್ವಜ್ಞ ಮಹಾಕವಿಯು ಜಗತ್ತಿನ ಜ್ಞಾನ, ವೈಚಾರಿಕತೆ, ಮಾನವೀಯ ಮೌಲ್ಯಗಳನ್ನು ತುಂಬಿಟ್ಟಿದ್ದಾನೆ. ಸರ್ವಜ್ಞನು ಚಿತ್ರ ತ್ರಿಪದಿ, ವಿಚಿತ್ರ ತ್ರಿಪದಿ, ಚಿತ್ರಲತೆ ತ್ರಿಪದಿ ಎಂಬ ಮೂರು ಪ್ರಕಾರದಲ್ಲಿ ತತ್ವ ಬೋಧಿಸಿರುವುದನ್ನು ಆತನ ವಚನಗಳಲ್ಲಿ ಕಾಣುತ್ತೇವೆ” ಎಂದು ಹೇಳಿದನು.
ಪಿಯುಸಿ ಪ್ರಥಮ ವರ್ಷದ ಕುಮಾರಿ ನವಮಿ ಪಲ್ಲೆದ ಮಾತನಾಡುತ್ತಾ “ಸರ್ವಜ್ಞನು ನಾಲ್ಕು ಗೋಡೆ ಮಧ್ಯೆ ಪಾರಂಪರಿಕ ಮತ್ತು ಸಾಂಪ್ರದಾಯಿಕ ಶಿಷ್ಟ ಶಿಕ್ಷಣವನ್ನು ಪಡೆಯದೆ, ಜನಸಾಮಾನ್ಯರು, ಕಾರ್ಮಿಕರು, ರೈತರ ಮಧ್ಯೆ ಇದ್ದು, ಎಲ್ಲರೊಂದಿಗೆ ಬಾಳಿ ಬದುಕಿ ಮಹಾಜ್ಞಾನಪರ್ವತವೇ ಆಗಿದ್ದು ಒಂದು ವಿಶೇಷ. ನಮ್ಮ ಕನ್ನಡ ಸಾಹಿತ್ಯದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಕವಿಗಳು ರಾಜಾಶ್ರಯ, ಆಡಳಿತ, ಜನಪ್ರತಿನಿಧಿಗಳ ಓಲೈಕೆ ಮಾಡುವ ಸಾಹಿತ್ಯವನ್ನು ರಚಿಸಿರುವುದು ಅಲ್ಲಲ್ಲಿ ಕಂಡು ಬರುತ್ತದೆ. ಇದಕ್ಕೆ ಅಪವಾದವೆಂಬಂತೆ ಅನೇಕ ಕವಿಗಳೂ ಕನ್ನಡದಲ್ಲಿದ್ದಾರೆ. ಆದರೆ, ರಾಜಾಶ್ರಯವನ್ನು ಧಿಕ್ಕರಿಸಿ ಜನಸಾಮಾನ್ಯರ ಮಧ್ಯೆ ಬದುಕಿ, ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕೀರ್ತಿ ಆ ಸರ್ವಜ್ಞ ಮಹಾಶಯನಿಗೆ ಸಲ್ಲುತ್ತದೆ. ಸರ್ವಜ್ಞ ಸರಳವಾದ ಪದಗಳನ್ನು ಬಳಸಿ ತ್ರಿಪದಿಗಳನ್ನು ರಚಿಸಿ ಅವುಗಳ ಮೂಲಕ ಸಮಾಜದಲ್ಲಿರುವ ಅನೇಕ ಅಂಕು-ಡೊಂಕುಗಳನ್ನು ತಿದ್ದಲು ಪ್ರಯತ್ನ ಮಾಡಿದ್ದಾನೆ. ಸರ್ವಜ್ಞನ ವಚನಗಳು ಡಂಭಾಚಾರ, ಮೂಢನಂಬಿಕೆ, ಶೋಷಣೆ ಮುಂತಾದವುಗಳನ್ನು ಕಟುವಾಗಿ ಟೀಕಿಸಿ ಅವುಗಳಿಂದ ಮುಕ್ತವಾದ ಸಮ ಸಮಾಜವನ್ನು ನಿರ್ಮಾಣ ಮಾಡುವ ಉದ್ದೇಶವನ್ನು ಪ್ರತಿಪಾದಿಸುತ್ತವೆ. ಸಮಾಜದ ಶ್ರೇಷ್ಠ ಮನೋವಿಜ್ಞಾನಿಯಾಗಿ, ಸಮಾಜ ವಿಜ್ಞಾನಿಯಾಗಿ, ಒಬ್ಬ ಮಹಾ ವೈದ್ಯನಾಗಿ, ಕೃಷಿಕನಾಗಿ, ಪಂಡಿತನಾಗಿ, ಒಬ್ಬ ಮಹಾ ತಂತ್ರಜ್ಞಾನಿಯಾಗಿ, ಯೋಗಿಯಾಗಿ, ಜನಪದ ಕವಿಯಾಗಿ… ಹೀಗೆ ಅನೇಕ ಭೂಮಿಕೆಗಳಲ್ಲಿ ಸರ್ವಜ್ಞನನ್ನು ಕಾಣಬಹುದು. ಇತ್ತೀಚಿನ ಜಾಗತಿಕ ಪಿಡುಗುಗಳಾದ ಜಾತಿ, ಮತ, ಧರ್ಮ ಸಂಘರ್ಷದ ನಾಶಕ್ಕೆ ಸರ್ವಜ್ಞನ ವಚನಗಳು ದಿವ್ಯ ಔಷಧಗಳಾಗಿ ಕಂಡುಬರುತ್ತವೆ. ವಿಶ್ವ ಮಾನವತೆ, ವಿಶ್ವ ಕುಟುಂಬ, ಮಾನವೀಯ ಮೌಲ್ಯಗಳ ನೆಲೆಗಟ್ಟನ್ನು ಆತನ ತ್ರಿಪದಿಗಳಲ್ಲಿ ಕಾಣಬಹುದು” ಎಂದು ಹೇಳಿದಳು.