ಕಲಬುರಗಿ,ಜೂ.22:ಕಲಬುರಗಿಯ ಎಸ್‍ಬಿಆರ್ ಮೈದಾನದಲ್ಲಿ 9ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.
ಎಸ್‍ಬಿಆರ್ ಪಿ.ಯು ಕಾಲೇಜು, ಎಸ್‍ಬಿಆರ್ ಪಬ್ಲಿಕ್ ಶಾಲೆ ಹಾಗೂ ಅಪ್ಪಾ ಪಬ್ಲಿಕ್ ಶಾಲೆ ಕಲಬುರಗಿ, ಇವರ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 3000 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರು, ಯೋಗ ಸಾಧಕರು ಬಿಳಿ ವಸ್ತ್ರಗಳನ್ನು ಧರಿಸಿ, ವಿವಿಧ ಯೋಗಾಸನಗಳನ್ನು ಮತ್ತು ಪ್ರಾಣಾಯಾಮಗಳನ್ನು ಮಾಡುವ ಮೂಲಕ ಅರ್ಥಪೂರ್ಣವಾಗಿ ಯೋಗ ದಿನಾಚರಣೆ ಆಚರಿಸಲಾಯಿತು.
ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪ, 9ನೇ ಪೀಠಾಧಿಪತಿಗಳು ಶರಣಬಸವೇಶ್ವರ ಮಹಾದಾಸೋಹ ಸಂಸ್ಥಾನ ಕಲಬುರಗಿ, ಪೂಜ್ಯ ಮಾತೋಶ್ರೀ ಡಾ. ದಾಕ್ಷಾಯಿಣಿ ಎಸ್ ಅಪ್ಪ, ಚೇರ್‍ಪರ್ಸನ್ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಕಲಬುರಗಿ. ಇವರು ಉದ್ಘಾಟಕರಾಗಿ ಆಗಮಿಸಿ, ಸಸಿಗೆ ನೀರೆರೆಯುವ ಮೂಲಕ ಯೋಗಾಭ್ಯಾಸಕ್ಕೆ ಚಾಲನೆ ನೀಡಿದರು. ಶ್ರೀ ಬಸವರಾಜ್ ಎಸ್ ದೇಶಮುಖ, ಕಾರ್ಯದರ್ಶಿಗಳು ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಕಲಬುರಗಿ, ಇವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಪೂಜ್ಯ ಮಾತೋಶ್ರೀ ಡಾ. ದಾಕ್ಷಾಯಿಣಿ ಎಸ್ ಅಪ್ಪ, ಚೇರ್‍ಪರ್ಸನ್ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಕಲಬುರಗಿ. ಇವರು ಯೋಗದ ಮಹತ್ವ ಕುರಿತು ತಮ್ಮ ಅನುಭವದ ಮಾತುಗಳನ್ನು ವಿವರಿಸುತ್ತಾ, “ಆರೋಗ್ಯವೇ ಭಾಗ್ಯ. ಯೋಗದಿಂದ ಏಕಾಗ್ರತೆ ಹೆಚ್ಚುತ್ತದೆ. ಯೋಗ ಮತ್ತು ಧ್ಯಾನ ಮಾಡಿದರೆ ನೀವು ಕಂಡ ಕನಸು ನನಸಾಗುತ್ತದೆ. ಸಕಲ ಸೌಲಭ್ಯಗಳನ್ನು ಹಾಗೂ ಸುಖವನ್ನು ಅನುಭವಿಸಬೇಕು ಅಂದರೆ ದಿನಾಲೂ ಒಂದು ಗಂಟೆಯ ಕಾಲ ಯೋಗಕ್ಕೆ ಸಮಯ ಕೊಟ್ಟು, ಆನಂದಮಯ ಜೀವನ ಸಾಗಿಸುವ ನಿಟ್ಟಿನಲ್ಲಿ ಮುಂದೆ ಸಾಗಿ, ಅತಿ ಹೆಚ್ಚಿನ ಅಂಕಗಳನ್ನು ಗಳಿಸಿ ಸಂಸ್ಥೆಯ ಕೀರ್ತಿ ಹೆಚ್ಚಿಸಬೇಕು. ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಯೋಗದಿಂದ ಸ್ಪೂರ್ತಿ, ಆತ್ಮವಿಶ್ವಾಸ, ಸಕಾರಾತ್ಮಕ ವಿಚಾರಗಳು ಬರುತ್ತವೆ. ದೇಹ ಮತ್ತು ಮನಸ್ಸು ಸದೃಢವಾಗಬೇಕಾದರೆ ಯೋಗ ಅತೀ ಅವಶ್ಯಕ, ಯೋಗವು ಮನುಷ್ಯನನ್ನು ನಿರೋಗಿಯಾಗಿಸುತ್ತದೆ. ಜಂಕ್ ಫುಡ್‍ಗಳನ್ನು ತಿನ್ನದೆ ದೇಶಿ ಫುಡ್ ತಿನ್ನಬೇಕು. ನನಗೆ ಯೋಗದ ಮಹತ್ವ ಗೊತ್ತಾಗಿದ್ದೇ ನಾನೂ ಯೋಗ ಮಾಡುವುದನ್ನು ಕಲಿತಾಗ, ಇವಾಗ ನಾನು 12 ಗಂಟೆಗಳ ಕಾಲ ಕೆಲಸ ಮಾಡಿದರೂ ಆಯಾಸವಾಗುವುದಿಲ್ಲ ಇದಕ್ಕೆ ಯೋಗ ಕಾರಣ. ಯೋಗದಿಂದ, ಧ್ಯಾನದಿಂದ ನಾವೆಲ್ಲರೂ ಶುದ್ಧವಾಗಿ ರಾಷ್ಟ್ರದ ಅಭಿವೃದ್ಧಿಗಾಗಿ ಕಾಯಕದಲ್ಲಿ ನಿರತರಾಗಿ ಆನಂದಮಯವನ್ನು ಅನುಭವಿಸೋಣ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀ ರಾಜಯೋಗಿನಿ ಬಿ.ಕೆ ವಿಜಯ ಬೆಹನ್, ಮುಖ್ಯಸ್ಥರು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಕಲಬುರಗಿ. ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ, “ಇಂದಿನ ಒತ್ತಡದ ಯುಗದಲ್ಲಿ ದೇಹಕ್ಕೆ ಹಾಗೂ ಮನಸ್ಸಿಗೆ ನೆಮ್ಮದಿ, ವಿಶ್ರಾಂತಿ ನೀಡುವ ಕೆಲಸ ಆಗಬೇಕಾಗಿದೆ. ಇದಕ್ಕೆ ಯೋಗ ತುಂಬಾ ಉಪಯುಕ್ತವಾಗಿದೆ. ಮನಸ್ಸನ್ನು ಸ್ವಚ್ಛ ಮತ್ತು ಸುಂದರವಾಗಿಡಲು ಯೋಗದಿಂದ ಮಾತ್ರ ಸಾಧ್ಯ ಲೌಕಿಕ ಜೀವನದ ಅರಿಷಡ್ವರ್ಗದಿಂದ ಪಾರಾಗಲು ಧ್ಯಾನ ಅತ್ಯವಶ್ಯಕ ಅದರ ಜೊತೆಗೆ ಬೌದ್ಧಿಕ ಬೆಳವಣಿಗೆಗೆ ಯೋಗ ಬೇಕು. ಮನಸ್ಸಿನ ಸ್ಥಿರತೆಗೆ ನಾವೆಲ್ಲರೂ ಶಾಂತಿಯನ್ನು ನೀಡುವುದೇ ಪ್ರಮುಖವಾದ ನಮ್ಮ ಜೀವನದ ಅಸ್ತ್ರವಾಗಿಸಿಕೊಳ್ಳಬೇಕು. ಯೋಗದಿಂದ ಆತ್ಮದ ಸಂಬಂಧವನ್ನು ಪರಮಾತ್ಮನೊಂದಿಗೆ ಜೋಡಿಸುತ್ತದೆ. ನಮ್ಮ ಮನಸ್ಸಿನ ಕಲ್ಮಶವನ್ನು ದೂರವಾಗಿಸಲು ಯೋಗ ಮಾಡಬೇಕು. ವಿಶ್ವ ಬಂಧುತ್ವ ಭಾವನೆಯನ್ನು ಘಳಿಸುವಲ್ಲಿ ಯೋಗದ ಪಾತ್ರ ಮಹತ್ವದ್ದು” ಎಂದು ಹೇಳಿದರು.
ಪತಂಜಲಿ ಯೋಗ ಸಮಿತಿ, ಭಾರತ ಸ್ವಾಭಿಮಾನ ಟ್ರಸ್ಟ್ ಜಿಲ್ಲಾಧ್ಯಕ್ಷರಾದ ಶ್ರೀ ಶಿವಾನಂದ ಸಾಲಿಮಠ ಅವರು ಎಲ್ಲರಿಗೂ ವಿವಿಧ ಯೋಗಾಸನಗಳನ್ನು, ಪ್ರಾಣಾಯಾಮಗಳನ್ನು ಹೇಳಿಕೊಟ್ಟರು. ಎಸ್‍ಬಿಆರ್ ಕಾಲೇಜಿನ ಮೇಲ್ವಿಚಾರಕರಾದ ಡಾ.ಶ್ರೀಶೈಲ ಹೊಗಾಡೆ, ಅಪ್ಪಾ ಪಬ್ಲಿಕ್ ಶಾಲೆಯ ಪ್ರಾಚಾರ್ಯರಾದ ಶ್ರೀ ಶಂಕರಗೌಡ ಹೊಸಮನಿ, ಶ್ರೀ ಶಂಭುಲಿಂಗ ಡಿ, ದಾನಮ್ಮ ಬೆಹನ್, ಪತ್ರಕರ್ತರು, ಪಾಲಕರು, ಶಿಕ್ಷಕರು, ಉಪನ್ಯಾಸಕರು ಉಪಸ್ಥಿತರಿದ್ದರು. ಅಪ್ಪಾ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರೆ, ಎಸ್.ಬಿ.ಆರ್ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ. ಚಂದ್ರಕಾಂತ ಪಾಟೀಲ ನಿರೂಪಿಸಿದರು.