ಎಸ್.ಡಿ.ಪಿ.ಐ ಪಕ್ಷದ 16ನೇ ಸಂಸ್ಥಾಪನ ದಿನದ ಧ್ವಜಾ ರೋಹಣವನ್ನು ಅಫ್ಸರ್

ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಜೂ.22:-ಮುಸ್ಲಿಮರಿಗೆ, ದಲಿತರಿಗೆ ಹಾಗೂ ಹಿಂದುಳಿದ ವರ್ಗದವರಿಗೆ ಯಾರೂ ಸಹ ನ್ಯಾಯವನ್ನು ವಿತರಿಸುವುದಕ್ಕೆ ಬರುವುದಿಲ್ಲ, ಇದಕ್ಕಾಗಿ ಸ್ವತಃ ನಾವೇ ರಾಜಕೀಯ ಶಕ್ತಿಯನ್ನು ಪಡೆದು ಅದನ್ನು ಸಾಧಿಸಬೇಕಿದೆ ಎಂದು ರಾಜ್ಯ ಸಮಿತಿ ಸದಸ್ಯ ಅಪ್ಸರ್ ಕೆ ಆರ್ ನಗರ ಹೇಳಿದರು.
ಪಟ್ಟಣದ ಮುಸ್ಲಿಂ ಬಡಾವಣೆಯ ರೋಶನ್ ಮೊಹಲ್ಲಾ ಟಿಪ್ಪು ಪಾರ್ಕ್ ಮುಂದೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಪಕ್ಷದ 16ನೇ ಸಂಸ್ಥಾಪನ ದಿನದ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಅವರು ಪ್ರಸಕ್ತ ದೇಶದಲ್ಲಿ ಒಂದು ಕಡೆ ಕೋಮುವಾದ ಬಲಿಷ್ಟವಾಗಿದ್ದು ಇನ್ನೊಂದಡೆ ಜಾತ್ಯಾತೀತ ಪಕ್ಷಗಳು ತಮ್ಮ ತತ್ವ ಸಿದ್ದಾಂತಗಳನ್ನು ಗಾಳಿಗೆ ತೂರಿ ಸ್ವಜನಪಕ್ಷಪಾತ, ಭ್ರಷ್ಟಾಚಾರ, ದುರಾಡಳಿತ ನಡೆಸುತ್ತಿರುವುದು ಬಹಳ ದುರದೃಷ್ಟಕರವಾದ ಸಂಗತಿಯಾಗಿದೆ ಎಂದು ಕಿಡಿಕಾರಿದರು.
ನಮ್ಮ ಪಕ್ಷದ ಮುಖ್ಯ ಉದ್ದೇಶ ಇತರೆ ಪಕ್ಷಗಳಂತೆ ಕೇವಲ ರಾಜಕೀಯ ಪಕ್ಷವಾಗಿರದೆ ಜನರ ಧ್ವನಿಯಾಗುವಲ್ಲಿ ಯಶಸ್ವಿಯಾಗಿದೆ. ಎಲ್ಲೇ ಅನ್ಯಾಯ ನಡೆದರೂ ಅದರ ವಿರುದ್ಧದ ಮೊದಲ ಧ್ವನಿ ನಮ್ಮದೇ ಆಗಿರುತ್ತದೆ ಮತ್ತು ನಾವು ಕೈಗೆತ್ತಿಕೊಳ್ಳುವ ಪ್ರತಿಯೊಂದು ಹೋರಾಟದಲ್ಲೂ ಛಲಬಿಡದೆ ಮುಂದೆ ಸಾಗುತ್ತಿದ್ದು ನಮ್ಮ ಪಕ್ಷಕ್ಕೆ ಹೆಮ್ಮೆಯ ವಿಚಾರ. ಇದೇ ರೀತಿ ಮುಂದೆಯೂ ಜನರ ನಡುವಿನಿಂದಲೇ ಜನರ ಪರವಾಗಿ ಹೋರಾಡುಬೇಕು, ಪಕ್ಷವನ್ನು ಇನ್ನಷ್ಟು ಬಲಪಡಿಸಲು ಶ್ರಮಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಜನರ ನೈಜ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಮೌಲ್ಯಧಾರಿತ ರಾಜಕಾರಣದ ಅಗತ್ಯವಿದ್ದು, ಈ ಜವಾಬ್ದಾರಿಯನ್ನು ನಿಭಾಯಿಸಲು ಎಸ್.ಡಿ.ಪಿ.ಐ ನ ನಾಯಕರಿಗೆ, ಮುಖಂಡರಿಗೆ ಹಾಗೂ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರಿಗೆ ನಿಭಾಯಿಸುವ ಶಕ್ತಿ ಯಿಂದ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಹೋರಾಟ ರಾಜಕಾರಣದ ಮೂಲಕ ಪಕ್ಷವನ್ನು ದೇಶದ ಮೂಲೆ ಮೂಲೆಗೆ ತಲುಪಿಸಬೇಕಾಗಿದೆ ಎಂದು ತಿಳಿಹೇಳಿದರು.
ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷವು ಪ್ರಜಾಪ್ರಭುತ್ವದ ತತ್ವ, ಧ್ಯೇಯಗಳನ್ನು ಅಳವಡಿಸಿಕೊಂಡು ಹಸಿವು ಮುಕ್ತ ಸ್ವಾತಂತ್ರ ಹಾಗೂ ಭಯಮುಕ್ತ ಸ್ವಾತಂತ್ರ್ಯದ ಉದ್ದೇಶವನ್ನು ಇಟ್ಟುಕೊಂಡು ಸಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ತಾಲೂಕು ಅಧ್ಯಕ್ಷ ನದೀಂ ಖಾನ್, ಮುಖಂಡರಾದ ಮೊಹಮ್ಮದ್ ಇರ್ಫಾನ, ಮುಜಾಹಿದ್, ಸೈಯದ್ ಇರ್ಫಾನ್, ನವಾಜ್ ಖಾನ್, ಫರೀದ್ ಅಹ್ಮದ್, ಮುಹೀಬ್, ಮುಹಮ್ಮದ್ ಅವೇಜ್ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಮುಖಂಡರು ಹಾಗೂ ಕಾರ್ಯ ಕರ್ತರು ಭಾಗವಹಿಸಿದರು.