
ರಾಯಚೂರು,ಮಾ.೧೩ – ಮುಂಬರುವ ವಿಧಾನಸಭಾ ಚುನಾವಣೆಗೆ ರಾಯಚೂರು ನಗರ ಕ್ಷೇತ್ರದಿಂದ ಎಸ್.ಡಿ.ಪಿ.ಐ ಅಭ್ಯರ್ಥಿಯಾಗಿ ಸೈಯದ್ ಇಸಾಕ್ ಹುಸೇನ್ ಖಾಲಿದ್ ಅವರು ಸ್ಪರ್ಧಿಸಲಿದ್ದು,ನಗರ ಜನರು ಬೆಂಬಲಿಸಬೇಕು ಎಂದು ಎಸ್.ಡಿ.ಪಿ.ಐ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚರ್ ಮನವಿ ಮಾಡಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,೨೦೨೩ ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ೫೨ ಕ್ಷೇತ್ರಗಳಲ್ಲಿ ಎಸ್ ಡಿಪಿಸಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ.ಈಗಾಗಲೇ ೧೯ ಜನ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ.
ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸ್ವತಂತ್ರ ಭಾರತದಲ್ಲಿ ಹಲವು ಚುನಾವಣೆಗಳು ಬಂದು ಹೋಗಿವೆ, ನಾವು ಮತ ಕೊಟ್ಟು ಗೆಲ್ಲಿಸಿದ ವಿವಿಧ ಪಕ್ಷಗಳ ಶಾಸಕರು ಗೆದ್ದು ಬಂದಿದ್ದಾರೆ. ಕಾಂಗ್ರೆಸ್,ಬಿಜೆಪಿ,ಜೆ.ಡಿ.ಎಸ್ ಪಕ್ಷಗಳ ಸರ್ಕಾರಗಳು ಬಂದು ಹೋಗಿವೆ.ಅದರೆ, ಜನರ ಸಮಸ್ಯೆಗಳು ಮಾತ್ರ ಇನ್ನೂ ಹಾಗೆಯೇ ಜೀವಂತವಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಕೇವಲ ಕೋಮುವಾದದ ವಿಷದ ಮೇಲೆ ಚುನಾವಣೆ ಗೆದ್ದಿದೆ. ಅಭಿವೃದ್ಧಿ ಎಂಬುದು ಭೂತಗನ್ನಡಿ ಹಿಡಿದು ಹುಡುಕಿದರೂ ಕಾಣಲು ಸಿಗುವುದಿಲ್ಲ. ೪೦% ಭ್ರಷ್ಟಾಚಾರದಿಂದ ರಾಜ್ಯದ ಖಜಾನೆಯನ್ನು ಕೊಳ್ಳೆ ಹೊಡೆದಿದ್ದಾರೆ ಎಂದು ಆರೋಪಿಸಿದರು.
ಸರಕಾರದ ವೈಫಲ್ಯಗಳನ್ನು ಎತ್ತಿ ತೋರಿಸಿ ವಿರೋಧ ಪಕ್ಷದ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಎರಡು ರಾಷ್ಟ್ರೀಯ ಪಕ್ಷಗಳ ಈ ಸ್ಥಿತಿಯಿಂದ ಇಲ್ಲಿನ ಜನ ಬೇಸತ್ತಿದ್ದಾರೆ. ಆದ್ದರಿಂದ ಈ ಬಾರಿ ಜನರು ಬದಲಾವಣೆಗೆ ಕಾಯುತ್ತಿದ್ದಾರೆ ಎಂದರು.
ಎಸ್.ಡಿ.ಪಿ.ಐ ಪಕ್ಷ ಕಳೆದ ೧೩ ವರ್ಷಗಳಿಂದ ದೇಶದ ೨೦ ರಾಜ್ಯಗಳಲ್ಲಿ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಎಸ್.ಡಿ.ಪಿ.ಐ ನ ೩೦೦ಕ್ಕೂ ಹೆಚ್ಚು ಸ್ಥಳೀಯ ಜನಪ್ರತಿನಿಧಿಗಳು ಜನ ಸೇವೆಯಲ್ಲಿ ತೊಡಗಿದ್ದಾರೆ.ಯಾವುದೇ ಜಾತಿ ಧರ್ಮದ ಭೇದವಿಲ್ಲದೆ, ನಿಷ್ಪಕ್ಷಪಾತವಾಗಿ ಜನಸೇವೆಯಲ್ಲಿ ನಿರತರಾಗಿದ್ದಾರೆ ಎಂದ ಅವರು,ರಾಯಚೂರಿನಲ್ಲಿ ಪಕ್ಷದ ಅಭ್ಯರ್ಥಿಯನ್ನು ಈಗಾಗಲೇ ಘೋಷಣೆ ಮಾಡಲಾಗಿದೆ ಎಂದರು.
ಅಭ್ಯರ್ಥಿ ಸೈಯದ್ ಇಸಾಜ್ ಹುಸೇನ್ ಖಾಲಿದ್ ಮಾತನಾಡಿ, ನಗರದಲ್ಲಿ ಶುದ್ಧ ಕುಡಿಯುವ ನೀರು, ಧೂಳು ಮುಕ್ತ ರಸ್ತೆಗಳು, ನೈರ್ಮಲ್ಯ ಮತ್ತು ಚರಂಡಿ ಮತ್ತು ಬೀದಿ ದೀಪಗಳ ಸಮಸ್ಯೆಯಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸಲು ನಗರ ಸಭೆ ಮತ್ತು ಚುನಾಯಿತ ಪ್ರತಿನಿಧಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಅನಾರೋಗ್ಯಕರ ವಾತಾವರಣದಿಂದಾಗಿ ರಾಯಚೂರಿನಲ್ಲಿ ಜನರು ಜಿಕಾ ವೈರಸ್‌ಗೆ ತುತ್ತಾಗುವಂತಾಗಿದೆ.ರಾಯಚೂರು ನಗರದ ಜನರಿಗೆ ರಿಮ್ಸ್ ಮತ್ತು ಒಪೆಕ್ ಆಸ್ಪತ್ರೆಗಳಲ್ಲಿ ಉತ್ತಮ ವೈದ್ಯಕೀಯ ಚಿಕಿತ್ಸೆಗಳು ಸಿಗುತ್ತಿಲ್ಲ. ರಾಯಚೂರಿಗೆ ಬರಬೇಕಿದ್ದ ಐಐಟಿ ಸಂಸ್ಥೆಯನ್ನು ರಾಯಚೂರು ನಗರ ಕಳೆದುಕೊಂಡಿದೆ ಎಂದ ಅವರು, ಚುನಾಯಿತ ಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಇದು ಹುಬ್ಬಳ್ಳಿ ಧಾರವಾಡಕ್ಕೆ ವರ್ಗಾವಣೆಯಾಗಿದೆ ಇದೀಗ ಏಮ್ಸ್ ಆಸ್ಪತ್ರೆಯನ್ನೂ ಕೇಂದ್ರ ಸರಕಾರ ರಾಯಚೂರನ್ನು ನಿರ್ಲಕ್ಷಿಸಿ ಮತ್ತೆ ಹುಬ್ಬಳ್ಳಿ ಧಾರವಾಡಕ್ಕೆ ಸ್ಥಳಾಂತವಾಗುತ್ತಿರುವುದು ಖಂಡನೀಯ.ಮುಂಬರುವ ವಿಧಾನಸಭಾ ಚುನಾವಣೆಗೆ ನಗರ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದು,ನಗರ ಜನರು ಆಶೀರ್ವದಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಟೌಸೀಫ್ ಅಹಮದ್,ಮತೀನ್ ಅನ್ಸಾರಿ, ಜೀಲಾನಿ ಪಾಷ ,ಸೈಯದ್ ಇರ್ಫಾನ್ ಇದ್ದರು.