ಎಸ್.ಡಿ.ಪಿ.ಐನಿಂದ ಚುನಾವಣಾ ಪೂರ್ವಭಾವಿ ಸಭೆ: ರಾಜ್ಯ ನಾಯಕರ ಭೇಟಿ

ದಾವಣಗೆರೆ.ಸೆ.೨೩; ಎಸ್.ಡಿ.ಪಿ.ಐ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣಾ ಪೂರ್ವಭಾವಿ ಸಭೆಯು ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಚುನಾವಣಾ ಉಸ್ತುವಾರಿ ಅಫ್ಸರ್ ಕೊಡ್ಲಿಪೇಟೆಯವರ ಸಮ್ಮುಖದಲ್ಲಿ ಪಕ್ಷದ ಜಿಲ್ಲಾ ಕಛೇರಿಯಲ್ಲಿ ಜರುಗಿತು. ಮುಂಬರಲಿರುವ  ಕರ್ನಾಟಕ ವಿಧಾನಸಭಾ ಚುನಾವಣೆಯ ಬಗ್ಗೆ ಸವಿಸ್ತಾರವಾದ ಚರ್ಚೆ ನಡೆದು ರಾಜ್ಯ ಬಿಜೆಪಿ ಸರಕಾರವು ನಿರಂಕುಶವಾದದ  ಧೋರಣೆಗಳನ್ನು ಎಸಗುತ್ತಿರುವುದನ್ನು ಕಂಡೂ ಕಾಣದಂತೆ ವರ್ತಿಸುತ್ತಿರುವ ವಿರೋಧ ಪಕ್ಷಗಳ ಮೌನವು ಖಂಡನಾರ್ಹ. ಮುಸ್ಲಿಮರ, ದಲಿತರ ,ಕ್ರೈಸ್ತರ ಮತಗಳನ್ನು ಪಡೆದು ಅಧಿಕಾರಕ್ಕೇರಿ ಆ ಬಳಿಕ ಬಿಜೆಪಿಗೆ ಸಾರಾಸಗಟು ಮಾರಾಟವಾಗುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರುಗಳ ಕರ್ಮಕಾಂಡವನ್ನು ಜನತೆಗೆ ತಿಳಿಪಡಿಸಬೇಕಾಗಿದೆ. ಹಾಗಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಕನಿಷ್ಠ ನೂರು ಪಕ್ಷದ ಅಭ್ಯರ್ಥಿಗಳು ಕಣಕ್ಕೆ ಇಳಿಸಲು ತೀರ್ಮಾನಿಸಿದ್ದು, ಅದರಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರ ಒಂದಾಗಿದೆ. ಪರ್ಯಾಯ ರಾಜಕೀಯ ವ್ಯವಸ್ಥೆ ಎಸ್ ಡಿ ಪಿ ಐ ಅನಿವಾರ್ಯತೆ ಕುರಿತು ಜನರಿಗೆ ಮನವರಿಕೆ ಮಾಡುವ ಮೂಲಕ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವ ಪ್ರಯತ್ನವನ್ನು ಕಾರ್ಯಕರ್ತರು ಮಾಡಬೇಕು,ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಬೇಕು ಹಾಗೂ ಪ್ರಸ್ತುತ ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷವು ಮತ್ತು ಅದರ  ಧುರೀಣರು ಸಂಪೂರ್ಣವಾಗಿ ಭ್ರಷ್ಟಾಚಾರ, ಮಿತಿಮೀರಿದ ಕೋಮುವಾದ ಚಿಂತನೆಗಳಂತಹ ಅರಾಜಕತೆಯಲ್ಲಿ ಮುಳುಗಿಹೋಗಿದ್ದಾರೆ. ಈ ಎಲ್ಲಾ ಸತ್ಯದ ಸಂಗತಿಗಳನ್ನು ಪಕ್ಷದ ಕಾರ್ಯಕರ್ತರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆಗೆ ಎಳೆಎಳೆಯಾಗಿ ಬಿಚ್ಚಿಡುವ ಮೂಲಕ ಭಾಜಪಾವನ್ನು ಅಧಿಕಾರದಿಂದ  ನಿರ್ಮೂಲನೆ ಮಾಡುವಲ್ಲಿ ನಿರತರಾಗಬೇಕು ಕರೆ ಕೊಟ್ಟರು. ಈ ಸಂಧರ್ಭ ಎಸ್.ಡಿ.ಪಿ.ಐ ರಾಜ್ಯ ಸಮಿತಿ ಸದಸ್ಯ ರಿಯಾಜ್ ಕಡಬು, ದಾವಣಗೆರೆ ಜಿಲ್ಲಾದ್ಯಕ್ಷ ಇಸ್ಮಾಯಿಲ್ ಜಬಿವುಲ್ಲಾ, ಮಜಾಜ಼್ ಹುಣಸೂರು ನಗರ ಸಮಿತಿ ಸದಸ್ಯರು ಮತ್ತು ಜಿಲ್ಲಾ ಸಮಿತಿ ನಾಯಕರು ಉಪಸ್ಥಿತರಿದ್ದರು.