ಎಸ್.ಟಿ ಸಮಾವೇಶಕ್ಕೆ- ಕೆಎಸ್‌ಎನ್ ರಿಂದ ೨೦೦ ಬಸ್ ವ್ಯವಸ್ಥೆ – ಮಲ್ಲಿಕಾರ್ಜುನ ಜಕ್ಕಲದಿನ್ನಿ

ಸಿರವಾರ.ನ.೧೬- ಬಳ್ಳಾರಿಯಲ್ಲಿ ಇದೇ ತಿಂಗಳು ೨೦ರಂದು ನಡೆಯಲಿರುವ ಎಸ್.ಟಿ. ಸಮಾವೇಶದ ಪ್ರಯುಕ್ತ ಭಾರತೀಯ ಜನತಾ ಪಕ್ಷದ ಮಾನವಿ ಮಂಡಲದ ವತಿಯಿಂದ ತಾಲೂಕಿನ ಕಲ್ಲೂರು ಜಿ.ಪಂ ವ್ಯಾಪ್ತಿಯ ಅತ್ತನೂರು, ಕಲ್ಲೂರು, ಹೊಕ್ರಾಣಿ, ಮಾಚನೂರು, ಮಾಡಗಿರಿ, ಶಾಖಾಪುರ, ಗಣದಿನ್ನಿ, ಬೇವಿನೂರು, ತುಪ್ಪದೂರು, ಹರವಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಬಿಜೆಪಿ ಮಾನ್ವಿ ಮಂಡಲದ ಅಧ್ಯಕ್ಷ ಮಲ್ಲಿಕಾರ್ಜುನ ಜಕ್ಕಲದಿನ್ನಿ ಅವರು ಮಾತನಾಡಿ, ವಾಲ್ಮೀಕಿ ಗುರುಪೀಠದ ಗುರುಗಳಾದ ಪ್ರಸನ್ನಾನಂದ ಶ್ರೀಗಳು ೨೪೦ ದಿನಗಳ ಕಾಲ ಮಳೆ, ಬಿಸಿಲು, ಚಳಿಯನ್ನು ಲೆಕ್ಕಿಸದೆ ನಿರಂತರ ಹೋರಾಟ ಮಾಡಿದ್ದಾರೆ. ಶ್ರೀಗಳ ಹೋರಾಟಕ್ಕೆ ಮಣಿದು ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಎಸ್.ಸಿ ಮತ್ತು ಎಸ್.ಟಿ ಜನಾಂಗದ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡುವ ಮೂಲಕ ಹಿಂದುಳಿದ ಮತ್ತು ತಳ ಸಮುದಾಯದ ಪರ ನಿಂತಿದೆ. ಮೀಸಲಾತಿಯನ್ನು ಹೆಚ್ಚಳ ಮಾಡಿದ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವ ಉದ್ದೇಶದಿಂದ ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ವಾಲ್ಮೀಕಿ ಸಮುದಾಯದ ಜನರು, ಮುಖಂಡರು, ಪ್ರಜ್ಞಾವಂತರು, ಪಕ್ಷಬೇಧವನ್ನು ಮರೆತು ಸಮಾವೇಶದಲ್ಲಿ ಭಾಗವಹಿಸಬೇಕು. ಮಾನ್ವಿ ವಿಧಾನ ಸಭಾ ಕ್ಷೇತ್ರದ ಜನರಿಗಾಗಿ ದೇವದುರ್ಗ ಕ್ಷೇತ್ರದ ಶಾಸಕ ಕೆ.ಶಿವನಗೌಡ ನಾಯಕ ಅವರು ಸಮಾವೇಶಕ್ಕೆ ಆಗಮಿಸಲು ೨೦೦ ಬಸ್ ವ್ಯವಸ್ಥೆ ಕಲ್ಪಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮೌಲಾಸಾಬ್ ಗಣದನ್ನಿ, ಹನ್ಮಂತ್ರಾಯ ಗಚ್ಚಿನಮನೆ, ಬಸವರಾಜ ಮ್ಯಾತ್ರಿ, ಬಸವರಾಜ ಸಜ್ಜನ್, ವೀರನಗೌಡ ಮಾಚನೂರು, ಖಾಸಿಂ ಈರಲಗಡ್ಡಿ, ನಟರಾಜ ಹೊಕ್ರಾಣಿ, ರಾಚಪ್ಪ ನಾಯಕ, ಅಮರೇಶ ಜಗ್ಲಿ, ಹನುಮಂತ್ರಾಯ ನಾಯಕ, ಅಂಬಣ್ಣ ಕಡದೊಡ್ಡಿ, ಮಲ್ಲಿಕಾರ್ಜುನ ನಾಯಕ, ಶಿವಪ್ಪ ನಾಯಕ ಕಲ್ಲೂರು, ಸೇರಿದಂತೆ ಹಲವು ಕಾರ್ಯಕರ್ತರು ಇದ್ದರು.