ಎಸ್.ಟಿ ಮೀಸಲಾತಿಗಾಗಿ ಶಿಕಾರಿಪುರದಲ್ಲಿ ಬೃಹತ್ ಸಮಾವೇಶ

ಹೊನ್ನಾಳಿ.ಜ.೩; ಎಸ್‌ಟಿ ಮೀಸಲಾತಿಗಾಗಿ ಶಿಕಾರಿಪುರದಲ್ಲಿ ನಡೆಯುವ ಬೃಹತ್ ಸಮಾವೇಶಕ್ಕೆ ಕುರುಬ ಸಮುದಾಯದ ಜನರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಎಂ. ರಮೇಶ್ ಹೇಳಿದರು.ಎಸ್‌ಟಿ ಮೀಸಲಾತಿಗಾಗಿ ಶಿಕಾರಿಪುರದಲ್ಲಿ ನಡೆಸಲುದ್ದೇಶಿಸಿರುವ ಬೃಹತ್ ಸಮಾವೇಶದ ಕರಪತ್ರಗಳನ್ನು ಪಟ್ಟಣದ ಸರ್ವರ್‌ಕೇರಿಯಲ್ಲಿನ ಶ್ರೀ ಕರಿಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಅನಾವರಣಗೊಳಿಸಿ ಅವರು ಮಾತನಾಡಿದರು.ಕಾಗಿನಲೆ ಮಹಾಸಂಸ್ಥಾನ ಕನಕ ಗುರು ಪೀಠ ಸಮಾಜದ ಎಲ್ಲಾ ಗುರುಗಳು ಹಾಗೂ ಕರ್ನಾಟಕ ಪ್ರದೇಶ ಕುರುಬರ ಸಂಘದ ಸಂಯುಕ್ತ ಆಶ್ರಯದಲ್ಲಿ ಶಿವಮೊಗ್ಗ ವಿಭಾಗ ಮಟ್ಟದ ಶಿಕಾರಿಪುರದ ಹೊಸ ಸಂತೆ ಮೈದಾನದಲ್ಲಿ ಬೃಹತ್ ಸಮಾವೇಶವನ್ನು ಜನವರಿ 7ರ  ಬೆಳಿಗ್ಗೆ 11 ಗಂಟೆಗೆ ನಡೆಸಲು ತೀರ್ಮಾನಿಸಲಾಗಿದೆ. ಸಮಾವೇಶಕ್ಕೆ ಹೊನ್ನಾಳಿ ಪಟ್ಟಣ, ತಾಲೂಕು ಹಾಗೂ ನ್ಯಾಮತಿ ತಾಲೂಕಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ತಿಳಿಸಿದರು.ಹೊನ್ನಾಳಿ ಪಟ್ಟಣದ ಸರ್ವರ್‌ಕೇರಿ, ಹೊಸಕೇರಿ, ದೊಡ್ಡಗಣ್ಣಾರ ಕೇರಿ, ಸಿದ್ಧಪ್ಪನಕೇರಿ, ಕಲ್ಕೇರಿ, ಕುಂಬಾರಗುಂಡಿಕೇರಿ, ದುರ್ಗಿಗುಡಿ ಭಾಗಗಳಲ್ಲಿ ಹಾಲುಮತ ಸಮಾಜದ ಮುಖಂಡರು ಮನೆ-ಮನೆಗೆ ತೆರಳಿ ಜಾಗೃತಿ ಮೂಡಿಸಿದರು. ಪಟ್ಟಣದ ಹೊಸಕೇರಿಯಲ್ಲಿನ ಕೊಲ್ಲಾಪುರದ ಶ್ರೀ ವರಮಹಾಲಕ್ಷ್ಮೀದೇವಾಲಯ, ಸರ್ವರ್‌ಕೇರಿಯ ಶ್ರೀ ರೇವಣಸಿದ್ಧೇಶ್ವರ ದೇವಾಲಯಗಳ ಆವರಣದಲ್ಲಿಯೂ ಮುಖಂಡರು ಕರಪತ್ರಗಳನ್ನು ಅನಾವರಣಗೊಳಿಸಿ ಜನಜಾಗೃತಿ ಮೂಡಿಸಿದರು.ಜಿಪಂ ಮಾಜಿ ಉಪಾಧ್ಯಕ್ಷ ಕೆ.ವಿ. ಚನ್ನಪ್ಪ, ಮುಖಂಡರಾದ ಎಚ್.ಎ. ಉಮಾಪತಿ, ಫಾಲಾಕ್ಷಪ್ಪ, ಕುಬೇಂದ್ರಪ್ಪ, ಚನ್ನಪ್ಪ, ಎ. ರವಿ, ಎಂ. ಸಿದ್ಧಪ್ಪ, ರಾಜು ಕಣಗಣ್ಣಾರ, ರಂಗಪ್ಪ, ಎಚ್.ಎಸ್. ರಂಜಿತ, ಹೊಸಕೇರಿ ಸುರೇಶ್, ಡಿ. ಮಂಜಪ್ಪ, ಮಂಜುನಾಥ ಮತ್ತಿತರರು ಉಪಸ್ಥಿತರಿದ್ದರು.