ಎಸ್ ಟಿ, ಜಾತಿ ಪ್ರಮಾಣ ಪತ್ರದ ಸದುಪಯೋಗ ಪಡೆದುಕೊಳ್ಳಿ : ಶಾಸಕ ಮಹೇಶ ಕುಮಠಳ್ಳಿ

ಅಥಣಿ : ನ.11:ತಳವಾರ ಮತ್ತು ಪರಿವಾರ ಸಮುದಾಯ ಬಾಂಧವರಿಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಲ್ಪಿಸಿದ ಎಸ್.ಟಿ ಮೀಸಲಾತಿ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಹಾಗೂ ಶಾಸಕ ಮಹೇಶ ಕುಮಠಳ್ಳಿ ಹೇಳಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಳವಾರ ಮತ್ತು ಪರಿವಾರ ಸಮಾಜ ಬಾಂಧವರಿಗೆ ಸಾಂಕೇತಿಕವಾಗಿ ಜಾತಿ ಪ್ರಮಾಣ ಪತ್ರ ವಿತರಿಸಿ ಮಾತನಾಡುತ್ತಿದ್ದರು.
ಅವರು ಮುಂದೆ ಮಾತನಾಡುತ್ತಾ ಎಸ್.ಟಿ. ಮೀಸಲಾತಿ ಸೌಲಭ್ಯ ತಳವಾರ ಹಾಗೂ ಪರಿವಾರ ಸಮಾಜ ಬಾಂಧವರು ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಬಲರಾಗಲು ಸಹಕಾರಿಯಾಗುತ್ತದೆ ಎಂದರು.
ತಳವಾರ ಹಾಗೂ ಪರಿವಾರ ಸಮಾಜ ಬಾಂಧವರು ತಮ್ಮನ್ನು ಪ್ರವರ್ಗ 1 ರಿಂದ ಎಸ್.ಟಿ ಸಮುದಾಯಕ್ಕೆ ಸೇರ್ಪಡೆ ಮಾಡಬೇಕು ಎಂದು ಹಲವಾರು ವರ್ಷಗಳಿಂದ ಬೇಡಿಕೆ ಇಟ್ಟಿದ್ದರು. ಈ ಸಮುದಾಯದವರ ಬೇಡಿಕೆ ಮನ್ನಿಸಿದ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಸಮುದಾಯಗಳಿಗೆ ಎಸ್.ಟಿ ಜಾತಿ ಪ್ರಮಾಣ ಪತ್ರ ಕೊಡಲು ಕಂದಾಯ ಇಲಾಖೆಯ ಮೂಲಕ ಎಲ್ಲ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದ್ದಾರೆ ಎಂದ ಅವರು ಎಸ್.ಟಿ ಮೀಸಲಾತಿ ಪ್ರಮಾಣ ಪತ್ರ ನೀಡಲು ಸಹಕರಿಸಿದ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವರನ್ನು ಅಭಿನಂದಿಸಿದರು .
ಅಖಿಲ ಕರ್ನಾಟಕ ನಾಯಿಕ ತಳವಾರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ರಾಮಗೊಂಡ ಜಂಗಿ ಮಾತನಾಡಿ, ನಮ್ಮ ಸಮುದಾಯಕ್ಕೆ ಎಸ್.ಟಿ ಮೀಸಲಾತಿ ದೊರಕಿರುವುದು ನಮ್ಮಸಮಾಜಕ್ಕೆ ಪುಷ್ಟಿ ದೊರಕಿದೆ ಎಂದ ಅವರು ನಮಗೆ ಪ್ರಮಾಣ ಪತ್ರ ವಿತರಿಸಲು ಸಹಕರಿಸಿದ ಶಾಸಕರಾದ ಮಹೇಶ್ ಕುಮಠಳ್ಳಿ ಇವರಿಗೆ ಧನ್ಯವಾದ ಅರ್ಪಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ರಮೇಶಗೌಡಾ ಪಾಟೀಲ, ನಿಂಗಪ್ಪಾ ನಂದೇಶ್ವರ, ಮಲ್ಲಪ್ಪಾ ಹಂಚಿನಾಳ, ಲಕ್ಕಪ್ಪಾ ಮುಡಸಿ, ತಳವಾರ ಸಮಾಜದ ಮುಖಂಡರಾದ ವಿಶ್ವನಾಥ ಖೇಮಲಾಪುರ, ಬರಮಣ್ಣ ಹಕ್ಕಿ, ರಾಜು ಪೂಜಾರಿ, ಮಹಾದೇವ ನಾಯಿಕ, ಅನೀಲ ನಂದೇಶ್ವರ, ಮಾಳು ಹಕ್ಕಿ, ಆಕಾಶ ಹಕ್ಕಿ, ಮುತ್ತುರಾಜ ತುಬಚಿ, ಈಶ್ವರ ಚಿಪ್ಪಾಡಿ, ಸಿದ್ದು ತಳವಾರ, ತಮ್ಮಣ್ಣ ಮೀಸಿ, ನೀಲಕಂಠ ಈಟಿ, ದಶರಥ ತಳವಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.