ಎಸ್.ಜೆ.ಜೆ.ಎಂ ಶಾಲೆಯ ಶತಮಾನೋತ್ಸವ ಲಾಂಛನ ಬಿಡುಗಡೆ

ಬ್ಯಾಡಗಿ,ಏ5: ಪಟ್ಟಣದ ಎಸ್’ಜೆಜೆಎಂ ಶಾಲೆಯ ಶತಮಾನೋತ್ಸವವನ್ನು ಇದೇ ವರ್ಷ ಅಕ್ಟೋಬರ್ 22ರಿಂದ 25ರವರೆಗೆ ಆಚರಿಸಲು ನಿರ್ಧರಿಸಿದ್ದು, ಈ ಹಿನ್ನಲೆಯಲ್ಲಿ ಶಾಲೆಯ ಶತಮಾನೋತ್ಸವದ ಲಾಂಛನವನ್ನು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಬಿಡುಗಡೆಗೊಳಿಸಿದರು.

ಎಸ್’ಜೆಜೆಎಂ ಶಾಲೆಯಲ್ಲಿ ಶತಮಾನೋತ್ಸವ ಕಾರ್ಯಕ್ರಮದ ಕಾರ್ಯ ಚಟುವಟಿಕೆಗಳಿಗಾಗಿ ತೆರೆಯಲಾಗಿರುವ ಕಾರ್ಯಾಲಯವನ್ನು ಉದ್ಘಾಟಿಸುವ ಜೊತೆಗೆ ಲಾಂಛನವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಈ ಶಾಲೆಯ ಶತಮಾನೋತ್ಸವ ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ ನೆರವೇರಿಸಲು ನಿರ್ಧರಿಸಿದ್ದು, ಕಾರ್ಯಕ್ರಮದ ರೂಪು ರೇಷೆಗಳ ಬಗ್ಗೆ ಶಿಕ್ಷಣ ಸಚಿವ ಸುರೇಶಕುಮಾರ್ ಅವರ ಜೊತೆ ತಾವು ಈಗಾಗಲೇ ಮಾತುಕತೆ ನಡೆಸಿದ್ದೇವೆ. ಕಾರ್ಯಕ್ರಮಕ್ಕೆ ರಾಜ್ಯಪಾಲರು, ಮುಖ್ಯಮಂತ್ರಿಗಳು ಸೇರಿದಂತೆ ವಿವಿಧ ಗಣ್ಯರನ್ನು ಆಹ್ವಾನಿಸಲು ನಿರ್ಧರಿಸಿರುವುದಾಗಿ ತಿಳಿಸಿದರು.
ಸ್ಮಾರಕ ಭವನ, ಕಂಚಿನ ಪ್ರತಿಮೆ ನಿರ್ಮಾಣ:
ಶತಮಾನೋತ್ಸವದ ಸವಿ ನೆನಪಿಗಾಗಿ ಶಾಲಾ ಆವರಣದಲ್ಲಿ ಸುಸಜ್ಜಿತವಾದ ಸ್ಮಾರಕ ಭವನವನ್ನು ನಿರ್ಮಿಸಲು ಉದ್ದೇಶಿಸಿದ್ದು, ಇದಕ್ಕಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿದ್ದು, ಅನುದಾನ ಒದಗಿಸುವ ಬಗ್ಗೆ ಸಕಾರಾತ್ಮಕ ಸ್ಪಂದನೆ ದೊರೆತಿದೆ. ಅಲ್ಲದೇ ಶಾಲೆಯ ಸಂಸ್ಥಾಪಕರಾದ ಚಿತ್ರದುರ್ಗದ ಜಗದ್ಗುರು ಜಯದೇವ ಮುರುಘಾರಾಜೇಂದ್ರ ಶ್ರೀಗಳ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮ ಈ ಸಂದರ್ಭದಲ್ಲಿ ಜರುಗಲಿದೆ ಎಂದರು.

ಈ ಸಂದರ್ಭದಲ್ಲಿ ಮುರಿಗೆಪ್ಪ ಶೆಟ್ಟರ, ಜಿ.ಸಿ.ಹಿರೇಮಠ, ಸುರೇಶ ಉದ್ಯೋಗಣ್ಣನವರ, ಮಲ್ಲೇಶಪ್ಪ ಚಿಕ್ಕಣ್ಣನವರ, ರಾಜು ಮೊರಗೇರಿ, ಕೊಟ್ರೇಶ ಸೊಪ್ಪಿನಮಠ, ಎಸ್.ಎನ್. ಯಮುನಕ್ಕನವರ, ಜಿತೇಂದ್ರ ಸುಣಗಾರ, ಮಾಲತೇಶ ಅರಳಿಮಟ್ಟಿ, ಡಿ.ಬಿ.ಕುಸುಗೂರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.