ಎಸ್ ಎಸ್ ಎಲ್ ಸಿ ಫಲಿತಾಂಶಕ್ಕೂ ಮುನ್ನ ಪ್ರಥಮ ಪಿಯುಸಿಗೆ ದಾಖಲು ಮಾಡುವಂತಿಲ್ಲ

ದಾವಣಗೆರೆ.ಜೂ.10; ಪ್ರಥಮ ಪಿಯುಸಿ ತರಗತಿಗಳಿಗೆ ವಿದ್ಯಾರ್ಥಿಗಳ ದಾಖಲಾತಿಯನ್ನು ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶದ ನಂತರವೇ ದಾಖಲು ಮಾಡಿಕೊಳ್ಳಬೇಕೆಂಬ ಆದೇಶವಿದ್ದರೂ ಕೂಡ ದಾವಣಗೆರೆ ನಗರದ ಬಹುತೇಕ ಖಾಸಗಿ ಕಾಲೇಜುಗಳಲ್ಲಿ ದಾಖಲಾತಿ ಪ್ರಕ್ರಿಯೆ ಪೂರ್ಣಗೊಂಡಿದೆ.ಅಷ್ಟೇ ಅಲ್ಲದೇ ಕೆಲ ಕಾಲೇಜುಗಳಲ್ಲಿ ಆನ್ ಲೈನ್ ತರಗತಿಗಳು ಪ್ರಾರಂಭಗೊಂಡಿವೆ. ನಗರದ ಖಾಸಗಿ ಕಾಲೇಜುಗಳಲ್ಲಿ ಈಗಾಗಲೇ ದಾಖಲಾತಿ ಪ್ರಕ್ರಿಯೆ ಪೂರ್ಣಗೊಂಡಿದೆ.ಕಳೆದ ಒಂದು ತಿಂಗಳಿನಿಂದಲೇ ಖಾಸಗಿ ಕಾಳೆಜುಗಳಲ್ಲಿ ದಾಖಲಾತಿಯ ಚಟುವಟಿಕೆಗಳು ಮೊಬೈಲ್ ಮೂಲಕ ನಡೆದಿದ್ದು.ಖಾಸಗಿ ಕಾಲೇಜುಗಳಲ್ಲಿ ಆನ್ ಲೈನ್ ಟೆಸ್ಟ್ ನಡೆಸಿ ಅದರ ಗ್ರೇಡ್ ಆಧಾರದಲ್ಲಿ ಶುಲ್ಕ ನಿಗದಿ ಮಾಡಿ ದಾಖಲಾತಿ ಮಾಡಿಕೊಂಡಿದ್ದಾರೆ ಎಂಬುದು ತಿಳಿದುಬಂದಿದೆ.ಈಗಾಗಲೇ ನಗರ ಸೇರಿದಂತೆ ಗ್ರಾಮೀಣಭಾಗದ ವಿದ್ಯಾರ್ಥಿಗಳ ದಾಖಲಾತಿ ಸಂಪೂರ್ಣಗೊಂಡಿದ್ದು ಖಾಸಗಿ ಕಾಲೇಜುಗಳಲ್ಲಿ ಸೀಟು ದೊರೆಯುತ್ತಿಲ್ಲ.
ಸರ್ಕಾರ 2021-22 ನೇ ಸಾಲಿನ ಪ್ರಥಮ ಪಿಯುಸಿ ತರಗತಿಗಳಿಗೆ ವಿದ್ಯಾರ್ಥಿಗಳಿಗೆ ದಾಖಲಾತಿಯನ್ನು 2020-21ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಬಂದ ನಂತರ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯು ದಾಖಲಾತಿ ಮಾರ್ಗಸೂಚಿ-2021-22 ಬಿಡುಗಡೆ ಮಾಡಿದ ನಂತರವೇ ಕಾಲೇಜುಗಳಲ್ಲಿ ದಾಖಲಾತಿ ಮಾಡಿಕೊಳ್ಳಬೇಕು ಎಂದು ಆದೇಶ ಹೊರಡಿಸಲಾಗಿದೆ.ಅಲ್ಲದೇ
ಅಲ್ಲಿಯವರೆಗೂ ಯಾವುದೇ ರೀತಿಯಲ್ಲಿ ಪ್ರಥಮ ಪಿಯುಸಿಗೆ ದಾಖಲಾತಿ ನೀಡುವಂತಿಲ್ಲ ಹಾಗೂ ಆನ್ ಲೈನ್ ತರಗತಿಗಳನ್ನು ಸಹ ನಡೆಸುವಂತಿಲ್ಲ ಎಂದು ತಿಳಿಸಲಾಗಿದೆ.ಒಂದು ವೇಳೆ ದಾಖಲಾತಿ ಮಾಡಿಕೊಂಡು ಆನ್ ಲೈನ್ ತರಗತಿ ನಡೆಯುತ್ತಿರುವ ಬಗ್ಗೆ ಇಲಾಖೆಯ ಗಮನಕ್ಕೆ ಬಂದಲ್ಲಿ ಸಂಬAಧಿಸಿದ ಕಾಲೇಜುಗಳ ಮೇಲೆ ಕಠಿಣ ಶಿಸ್ತುಕ್ರಮ ಕೈಗೊಳ್ಳಲಾಗುವುದು ಹಾಗೂ ಆ ಕಾಲೇಜುಗಳ ಮಾನ್ಯತೆ ರದ್ದುಪಡಿಸಲಾಗುವುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಸೂಚನೆ ನೀಡಿದ್ದಾರೆ.ಆದರೂ ಕೂಡ ಇಂತಹ ಪ್ರಕ್ರಿಯೆ ದಾವಣಗೆರೆ ಸೇರಿದಂತೆ ರಾಜ್ಯದೆಲ್ಲೆಡೆ ನಡೆಯುತ್ತಿದೆ.ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆಯೋ ಅಥವಾ ಕೇವಲ ನೋಟಿಸ್ ನೀಡಿ ಅದಕ್ಕೆ ಉತ್ತರ ಪಡೆಯುವ ಪ್ರಕ್ರಿಯೆ ನಡೆಯುತ್ತದೆಯೋ ಕಾದು ನೋಡಬೇಕಿದೆ.
ಬಾಕ್ಸ್
ಖಾಸಗಿ ಕಾಲೇಜುಗಳಲ್ಲಿ ದಾಖಲಾತಿ ಹಾಗೂ ಆನ್ ಲೈನ್ ಮೂಲಕ ತರಗತಿ ನಡೆಯುವ ಬಗ್ಗೆ ದೂರು ಬಂದರೆ ಮಾತ್ರ ಕ್ರಮ ಕೈಗೊಳ್ಳಲಾಗುವುದು. ಸಂಬಂಧ ಪಟ್ಟ ಕಾಲೇಜಿನವರಿಗೆ ನೋಟಿಸ್ ನೀಡಲಾಗುವುದು. ಜಿಲ್ಲಾಧಿಕಾರಿಗಳೇ ಟಾಸ್ಕ್ ಫೋರ್ಸ್ ಸಮಿತಿಗೆ ಅಧ್ಯಕ್ಷರಾಗಿದ್ದಾರೆ.ಪೋಷಕರು ಈ ಬಗ್ಗೆ ದೂರು ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
– ರಾಜು.ಡಿಡಿಪಿಯು ದಾವಣಗೆರೆ.