ಎಸ್.ಎಸ್.ಎಲ್.ಸಿ, ಪಿಯುಸಿ ಹಾಗೂ ವಿದ್ಯಾಗಮ ತರಗತಿ ಜ.1 ರಿಂದ ಆರಂಭ

ವಿಜಯಪುರ, ಡಿ.30-ಇದೇ ಜನೇವರಿ 1 ರಿಂದ ಎಸ್.ಎಸ್.ಎಲ್.ಸಿ ಮತ್ತು ಪಿಯು ತರಗತಿಗಳ ಆರಂಭಕ್ಕೆ ನಿರ್ಧರಿಸಲಾಗಿದ್ದು, ಇದಕ್ಕಾಗಿ ಸರ್ಕಾರದ ಮಾರ್ಗಸೂಚಿಯನ್ವಯ ಕೊರೋನಾ ಹಿನ್ನೆಲೆ ಅವಶ್ಯಕ ಮುಂಜಾಗ್ರತೆಯೊಂದಿಗೆ ತರಗತಿ ನಡೆಯುವಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಶಾಲಾ ಕಾಲೇಜು ಆರಂಭಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಎಸ್.ಎಸ್.ಎಲ್.ಸಿ ಹಾಗೂ ಪಿಯು ತರಗತಿಗಳು ಜನೇವರಿ 1 ರಿಂದ ಕಾರ್ಯಾರಂಭಗೊಳ್ಳಲಿದ್ದು, 6 ರಿಂದ 9 ನೇ ತರಗತಿಗಳಿಗೆ ವಿದ್ಯಾಗಮ ತರಗತಿಗಳು ಸಾಮಾಜಿಕ ಅಂತರ, ಅವಶ್ಯಕ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ನಡೆಸುವಂತೆ ಅವರು ಸೂಚನೆ ನೀಡಿದರು.
ಎಸ್.ಎಸ್.ಎಲ್.ಸಿ ಹಾಗೂ ಪಿಯು ತರಗತಿಗಳು ಶಾಲಾ ಕೊಠಡಿಗಳಲ್ಲಿ ನಡೆಯುವ ಹಿನ್ನೆಲೆಯಲ್ಲಿ ಗ್ರಾಮಗಳ ವ್ಯಾಪ್ತಿಯಲ್ಲಿ ಆಯಾ ಪಿಡಿಓ ಗಳು ಮತ್ತು ಪಟ್ಟಣಗಳ ವ್ಯಾಪ್ತಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಮೂಲಕ ಸ್ವಚ್ಛತೆ ಮತ್ತು ಸ್ಯಾನಿಟೈಜೇಶನ್‍ಗೆ ಕ್ರಮ ಕೈಗೊಳ್ಳಬೇಕು. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಕೋವಿಡ್ ಹಿನ್ನೆಲೆ ತಪಾಸಣೆಗೆ ಒಳಪಡಿಸಿದ ಬಗ್ಗೆ ಕೋಡಿಂಗ್ ಆಧಾರದ ಮೇಲೆ ದಾಖಲಿಸಬೇಕು. ಎಸ್.ಎಸ್.ಎಲ್.ಸಿ ಹಾಗೂ ವಿದ್ಯಾಗಮ ವಿದ್ಯಾರ್ಥಿಗೆ “ಎಕ್ಸ್-ಎಸ್” ಮತ್ತು ಶಿಕ್ಷಕರಿಗೆ “ಎಕ್ಸ್-ಟಿ” ಹಾಗೂ ಪಿಯು ವಿದ್ಯಾರ್ಥಿಗೆ “ರೋಮನ್ ಸಂಖ್ಯೆ 12” ಹಾಗೂ ಶಿಕ್ಷಕರಿಗೆ “ರೋಮನ್ ಸಂಖ್ಯೆ 12- ಟಿ” ಎಂದು ಕೋಡ್ ನಿಗದಿಪಡಿಸುವಂತೆ ಅವರು ಸೂಚನೆ ನೀಡಿದರು.
ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳ ಶಿಕ್ಷಕರು ಕಡ್ಡಾಯವಾಗಿ ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ತಪಾಸಣೆ ನಡೆಸಿಕೊಂಡು ಕರ್ತವ್ಯಕ್ಕೆ ಹಾಜರಾಗಬೇಕು. ಅದರಂತೆ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ವ್ಯಾಪ್ತಿಯಲ್ಲಿ ಬರುವಂತಹ ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ಆಯಾ ವಸತಿ ನಿಲಯಗಳಲ್ಲಿ ಕಡ್ಡಾಯವಾಗಿ ಕೋವಿಡ್ ಹಿನ್ನೆಲೆ ಆರೋಗ್ಯ ತಪಾಸಣೆ ಪ್ರತ್ಯೇಕ ಕೊಠಡಿಗಳಲ್ಲಿ ನಡೆಸಿ ನಂತರ ಅವರವರ ಕೊಠಡಿಗಳಿಗೆ ತೆರಳಲು ಅವಕಾಶ ಮಾಡಿಕೊಡಬೇಕು. ಆರೋಗ್ಯ ತಪಾಸಣೆಗೆ ತಪಾಸಣಾ ತಂಡಗಳನ್ನು ನಿಯೋಜಿಸಿ ಆರೋಗ್ಯ ಪರಿಶೀಲನೆ ನಡೆಸಬೇಕು. ವಿದ್ಯಾಗಮ ತರಗತಿಯ ಕೋವಿಡ್ -19 ಲಕ್ಷಣವುಳ್ಳ ವಿದ್ಯಾರ್ಥಿಗಳಿಗೆ ಮಾತ್ರ ತಪಾಸಣೆಗೆ ಒಳಪಡಿಸಬೇಕು. ಮಾರ್ಗಸೂಚಿಯನ್ವಯ ಪ್ರತಿ 10 ವಿದ್ಯಾರ್ಥಿಗಳ ಮೇಲೆ ನಿಗಾ ಇಡಲು ಮಾನಿಟರ್ ಆಗಿ ಶಿಕ್ಷಕರನ್ನು ಗುರುತಿಸಬೇಕೆಂದು ಅವರು ಸೂಚಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಸರ್ಕಾರಿ, ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಶಿಕ್ಷಕರನ್ನು ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರಗಳೊಂದಿಗೆ ಸಂಪರ್ಕ ಸಾಧಿಸಿ ಆರೋಗ್ಯ ತಪಾಸಣೆಗೆ ಒಳಪಡಿಸಬೇಕು. ಕೋವಿಡ್-19 ಪಾಸಿಟಿವ್ ಹಾಗೂ ನೆಗೆಟಿವ್ ತಪಾಸಣೆಗೆ ಸಂಬಂಧಿಸಿದಂತೆ ಸೂಕ್ತ ಸಮನ್ವಯತೆ ಸಾಧಿಸಿ ಕಾರ್ಯನಿರ್ವಹಿಸಬೇಕು. ಶಾಲಾ ವಾಹನಗಳ ಮೂಲಕ ಬರುವ ವಿದ್ಯಾರ್ಥಿಗಳಿಗೆ ಮಾರ್ಗಸೂಚಿಯನ್ವಯ ಮುಂಜಾಗ್ರತೆಯೊಂದಿಗೆ ಕರೆತರುವ ವ್ಯವಸ್ಥೆ ಮಾಡಿಕೊಳ್ಳಬೇಕು. ಭೌತಿಕ ಅಂತರ, ಬಸ್ಸಿನ ಒಟ್ಟು ಆಸನ ಸಾಮಥ್ರ್ಯದ ಶೇ 50 ರಷ್ಟು ವಿದ್ಯಾರ್ಥಿಗಳನ್ನು ಮಾತ್ರ ಶಾಲಾ ಬಸ್ಸುಗಳಲ್ಲಿ ಕೊಂಡೊಯ್ಯಬೇಕು. ಪ್ರತಿದಿನ ಬಸ್‍ನ್ನು ಸ್ಯಾನಿಟೈಜ್ ಮಾಡಿ ಮರುದಿನದ ಪ್ರಯಾಣಕ್ಕೆ ಸಜ್ಜುಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಅದರಂತೆ ಜಿಲ್ಲೆಯ ಶಾಲೆಗಳ ಪ್ರತಿ ಮಗುವನ್ನೂ ಥರ್ಮಲ್ ಸ್ಕ್ಯಾನರ್ ಮೂಲಕ ಪರೀಕ್ಷಿಸಿ ದಾಖಲಿಸಬೇಕು. ಪ್ರತಿ ವಿದ್ಯಾರ್ಥಿ ಮಾಸ್ಕ್ ಧರಿಸುವಂತೆ ನೋಡಿಕೊಳ್ಳಬೇಕು. ಹಾಗೂ ಭೌತಿಕ ಅಂತರ ಕಾಪಾಡಿಕೊಳ್ಳಲು ಕ್ರಮ ಕೈಗೊಳ್ಳಬೇಕು. ಎಸ್.ಎಸ್.ಎಲ್.ಸಿ, ಪಿಯುಸಿ ಶಾಲಾ ಕೊಠಡಿಗಳ ಸ್ವಚ್ಛತೆಗೆ ಹಾಗೂ 6 ರಿಂದ 9 ನೇ ತರಗತಿಯ ವಿದ್ಯಾಗಮ ತರಗತಿಗಳ ಆವರಣ ಸ್ವಚ್ಛತೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಅವರು ಆವರಣದಲ್ಲಿ ವಿದ್ಯಾರ್ಥಿಗಳಿಗೆ ಬಿಸಿಲು ತಾಗದಂತೆ ತರಗತಿಗಳನ್ನು ನಡೆಸಲು ಅವರು ಸಲಹೆ ನೀಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶ್ರೀ ಹೊಸೂರ ಅವರು ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಅದರಂತೆ ಎಸ್.ಎಸ್.ಎಲ್.ಸಿ ತರಗತಿಗಳು ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 10 ರಿಂದ 12-30 ರವರೆಗೆ (ಪ್ರತಿ ದಿನ 45 ನಿಮಿಷಗಳ 3 ಅವಧಿಗಳು) ನಡೆಯಲಿವೆ.
ಪ್ರಾಥಮಿಕ ಶಾಲೆಗಳಲ್ಲಿ 6 ಮತ್ತು 7 ತರಗತಿ ಇರುವ ಶಾಲೆಗಳ ವಿದ್ಯಾಗಮ ವೇಳಾಪಟ್ಟಿಯನ್ವಯ ಬೆಳಿಗ್ಗೆ 10-00 ರಿಂದ 12-30 ರವರೆಗೆ ಹಾಗೂ ಮಧ್ಯಾಹ್ನ 2-00 ರಿಂದ 4-30 ರವರೆಗೆ ನಡೆಯಲಿದ್ದು, 6 ನೇ ತರಗತಿ ಸೋಮವಾರ, ಬುಧವಾರ, ಶುಕ್ರವಾರ ಹಾಗೂ 7 ನೇ ತರಗತಿ ಮಂಗಳವಾರ, ಬುಧುವಾರ, ಶನಿವಾರ ನಡೆಯಲಿವೆ.
ಪ್ರಾಥಮಿಕ ಶಾಲೆಗಳಲ್ಲಿ 6 ಮತ್ತು 8 ತರಗತಿ ಇರುವ ಶಾಲೆಗಳ ವಿದ್ಯಾಗಮ ವೇಳಾಪಟ್ಟಿಯನ್ವಯ ಬೆಳಿಗ್ಗೆ 10-00 ರಿಂದ 12-30 ರವರೆಗೆ ಹಾಗೂ ಮಧ್ಯಾಹ್ನ 2-00 ರಿಂದ 4-30 ರವರೆಗೆ ನಡೆಯಲಿದ್ದು, 6 ನೇ ತರಗತಿ ಸೋಮವಾರ, ಗುರುವಾರ ಹಾಗೂ 7 ನೇ ತರಗತಿ ಮಂಗಳವಾರ, ಶುಕ್ರವಾರ ನಡೆಯಲಿವೆ. 8 ನೇ ತರಗತಿ ಬುಧವಾರ,ಶನಿವಾರ ನಡೆಯಲಿವೆ.
ಪ್ರಾಥಮಿಕ ಶಾಲೆಗಳಲ್ಲಿ 8 ಮತ್ತು 9 ತರಗತಿ ಇರುವ ಶಾಲೆಗಳ ವಿದ್ಯಾಗಮ ವೇಳಾಪಟ್ಟಿಯನ್ವಯ ಬೆಳಿಗ್ಗೆ 10-00 ರಿಂದ 12-30 ರವರೆಗೆ ಹಾಗೂ ಮಧ್ಯಾಹ್ನ 2-00 ರಿಂದ 4-30 ರವರೆಗೆ ನಡೆಯಲಿದ್ದು, 9 ನೇ ತರಗತಿ ಸೋಮವಾರ, ಬುಧವಾರ, ಶುಕ್ರವಾರ ಹಾಗೂ 8 ನೇ ತರಗತಿ ಮಂಗಳವಾರ, ಗುರುವಾರ ನಡೆಯಲಿವೆ. ಎಸ್,ಎಸ್,ಎಲ್,ಸಿ ತರಗತಿಗಳು ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ಬೆಳಿಗ್ಗೆ 10-00 ರಿಂದ 12-30 ರವರೆಗೆ ನಡೆಯಲಿವೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.