ಎಸ್.ಎಸ್.ಎಲ್.ಸಿ ಪರೀಕ್ಷೆ ರದ್ದಾಗಬೇಕೆಂದು ಒತ್ತಾಯಿಸಿ ವಾಟಾಳ್ ಪ್ರತಿಭಟನೆ

ಮೈಸೂರು. ಜೂ.2: ಕನ್ನಡ ಚಳವಳಿ ವಾಟಾಳ್ ಪಕ್ಷದದ ಅಧ್ಯಕ್ಷರಾದ ವಾಟಾಳ್ ನಾಗರಾಜ್ ಅವರು ಇಂದು ನಗರದ ಆರ್ ಗೇಟ್ ಬಳಿ ಕೊರೋನ ಸೋಂಕು ಇರುವುದರಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ರದ್ದಾಗಬೇಕು, ಪರೀಕ್ಷೆ ನಡೆಸದೆ ವಿದ್ಯಾರ್ಥಿಗಳನ್ನು ಪಾಸ್ ಮಾಡಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಏಕಾಂಗಿಯಾಗಿ ಕಪ್ಪು ಬಟ್ಟೆಯ ಮಲಗಿ ಪ್ರತಿಭಟನೆ ನಡೆಸಿದರು.
ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು ಕೊರೋನಾ ನಿಯಂತ್ರಿಸುವ ವಿಚಾರದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜನರೇ ಸ್ವಯಂ ಲಾಕ್ ಡೌನ್ ಮಾಡಿಕೊಂಡಿದ್ದಾರೆ. ಕಳೆದ ಒಂದು ತಿಂಗಳಲ್ಲಿ 25 ಸಾವಿರ ಜನರು ಸತ್ತಿದ್ದಾರೆ ಹಾಗೂ ಸಾವಿರಾರು ಜನರು ಆಮ್ಲಜನಕ ಇಲ್ಲದೆ ಸತ್ತಿದ್ದಾರೆ. ಆಸ್ಪತ್ರೆ ವ್ಯವಸ್ಥೆ ಇಲ್ಲದೆ ಅನೇಕ ಜನರು ಸತ್ತಿದ್ದಾರೆ. ಸಚಿವರಾದ ಅರ್.ಅಶೋಕ ಅವರು ಅನಾಥ ಶವಗಳ ಬೂದಿ ಬಿಡಲು ಬಂದಿದ್ದಾರೆ. ಪ್ರಾಮಾಣಿಕ ವಾಗಿ ಹೇಳಿ ಸೋಂಕು ತಗುಲಿದ ಜನರಿಗೆ ಏನು ವ್ಯವಸ್ಥೆ ಮಾಡಿದ್ದೀರಿ ಎಂದು ಪ್ರಶ್ನಿಸಿದ ಅವರು ಸಾವಿನ ಹೊಣೆ ಸಿಎಂ ಹೊರಬೇಕು ಹಾಗೂ ಅಧಿಕಾರದಿಂದ ಕೇಳಗಿಳಿಯಬೇಕೆಂದು ಒತ್ತಾಯಿಸಿದರು.
ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ 24 ಅಮಾಯಕ ಜನರು ಸತ್ತರು. ಯಾರಿಗೆ ಶಿಕ್ಷೆ ಕೊಟ್ಟಿದ್ದೀರಿ. ಮುಖ್ಯಮಂತ್ರಿಗಳು ಚಾಮರಾಜನಗರಕ್ಕೆ ಹೋಗೇ ಇಲ್ಲ. ಚಾಮರಾಜನಗರವನ್ನು ಕಡೆಗಣಿಸಿದ್ದೀರಿ. ನಿಮ್ಮ ಮೌಢ್ಯಕ್ಕೆ ಏನು ಹೇಳಲಿ. 24 ಜನರ ಸಾವಿಗೆ ಸರ್ಕಾರವೇ ನೇರ ಕಾರಣ, ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಉಸ್ತುವಾರಿ ಸಚಿವರು ಹಾಗೂ ಸಿಎಂ ರಾಜೀನಾಮೆ ನೀಡಬೇಕು. ಶೀಘ್ರವಾಗಿ ತನಿಖೆ ನಡೆಸಿ ತಪ್ಪಿತಸ್ಥರನ್ನು ನೇರವಾಗಿ ಜೈಲಿಗೆ ಕಳಿಸಿ ಎಂದು ಆಗ್ರಹಿಸಿದರು.
ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆ ಬಗ್ಗೆ ನಿಮ್ಮ ನಿರ್ಧಾರ ಏನು ಆನ್ಲೈನ್ ಗ್ರಾಮೀಣ ವಿದ್ಯಾರ್ಥಿಗಳಿಗೆ ನರಕ, ಕೇಂದ್ರ ಸರ್ಕಾರ ಸಿಬಿಎಸ್ ಸಿ ಸಂಪೂರ್ಣ ರದ್ದು ಮಾಡಿದ್ದಾರೆ. ಮಕ್ಕಳ ಆರೋಗ್ಯ ಪ್ರಾಣ ಮುಖ್ಯ ಮಕ್ಕಳ ವಿಚಾರದಲ್ಲಿ ಚೆಲ್ಲಾಟ ಆಡಬೇಡಿ ಎಂದು ಎಚ್ಚರಿಕೆ ನೀಡಿದರು.
ಮೈಸೂರಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ದಕ್ಷ ಆಡಳಿತಗಾರರು. ಇಂತಹ ದಕ್ಷ ಅಧಿಕಾರಿಗಳಿಗೆ ನಾವು ಗೌರವ ನೀಡಬೇಕು ಹಾಗೂ ಅವರ ಕೆಲಸಕ್ಕೆ ಗೌರವ ನೀಡಬೇಕು. ಇವತ್ತು ಅವರನ್ನು ಟೀಕೆ ಮಾಡುವುದರಲ್ಲಿ ಯಾವುದೇ ಪ್ರಯೋಜನ ಇಲ್ಲ. ಇಂತಹವರು ಮೈಸೂರಿಗೆ ಬೇಕು. ಮೈಸೂರಿನ 25 ವರ್ಷದ ಭೂ ಮಾಫಿಯಾ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು. ಇದರಿಂದ ಎಷ್ಟು ಲಕ್ಷ ಕೋಟಿ ಸರ್ಕಾರಕ್ಕೆ ಬರಬೇಕು ಸಮಗ್ರವಾಗಿ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಸಾರ್ವಜನಿಕ ಲೆಕ್ಕಪತ್ರ ಸಮಿತಿ ಮೈಸೂರಿಗೆ ಬಂದು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.