ಎಸ್.ಎಸ್.ಎಲ್.ಸಿ. ಪರೀಕ್ಷೆ: ಬ್ಯಾಡಗಿ ತಾಲೂಕಿಗೆ ಪ್ರಥಮ ಸ್ಥಾನ


ಬ್ಯಾಡಗಿ,ಮೇ.10: ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬ್ಯಾಡಗಿ ತಾಲೂಕು ಶೇ.90.85ರಷ್ಟು ಫಲಿತಾಂಶ ಪಡೆಯುವ ಮೂಲಕ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ.
ಕಳೆದ ಸಾಲಿನಲ್ಲಿ 5ನೇ ಸ್ಥಾನದಲ್ಲಿದ್ದ ಬ್ಯಾಡಗಿ ತಾಲೂಕು ಪ್ರಸಕ್ತ ವರ್ಷದಲ್ಲಿ ಮತ್ತೆ ಉತ್ತಮ ಫಲಿತಾಂಶದ ಸಾಧನೆಯನ್ನು ಮಾಡುವ ಮೂಲಕ ಪ್ರಥಮ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಪರೀಕ್ಷೆಯನ್ನು ಎದುರಿಸಿದ 2055 ವಿದ್ಯಾರ್ಥಿಗಳ ಪೈಕಿ 874 ಗಂಡು ಮತ್ತು 993 ಹೆಣ್ಣು ಮಕ್ಕಳು ಸೇರಿದಂತೆ ಒಟ್ಟು 1867 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ತಾಲೂಕಿನ ಮೋಟೆಬೆನ್ನೂರ ಗ್ರಾಮದ ನವೋದಯ ವಿದ್ಯಾಸಂಸ್ಥೆಯ ವಿ.ಬಿ.ಕಳಸೂರಮಠ ಪ್ರೌಢಶಾಲೆಯ ವಿದ್ಯಾರ್ಥಿನಿ ಸನ್ನತಿ ಚಂದ್ರಪ್ಪ ಕೆಂಗೊಂಡ (611) ಅಂಕಗಳನ್ನು ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಹಾಗೂ ಜಿಲ್ಲೆಗೆ ತೃತೀಯ ಸ್ಥಾನ ಪಡೆಯುವ ಮೂಲಕ ಸಾಧನೆಗೈದಿದ್ದಾಳೆ, ಕದರಮಂಡಲಗಿ ಗ್ರಾಮದ ಸ್ಪಂದನ ಪ್ರೌಢಶಾಲೆಯ ವಿದ್ಯಾರ್ಥಿ ಮಂಜುನಾಥ ರಾಮಪ್ಪ ಹಲಗೇರಿ (609) ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಹಾಗೂ ಇದೇ ಶಾಲೆಯ ವಿದ್ಯಾರ್ಥಿನಿ ಮಾನ್ಯ ಪರಮೇಶಪ್ಪ ಸಣ್ಣತಮ್ಮಣ್ಣನವರ (606) ಅಂಕಗಳನ್ನು ಪಡೆದು ತೃತೀಯ ಸ್ಥಾನವನ್ನು ಪಡೆದಿದ್ದಾರೆ.