ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಸಾಧನೆ: ಸನ್ಮಾನ


ಗುಳೇದಗುಡ್ಡ,ಮೇ.13: ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಮಿನಾಜ್ ಕುರಡಗಿ ಅವರು ತಮ್ಮ ಅಪಾರ ಪರಿಶ್ರಮ ಹಾಗೂ ತಂದೆ ತಾಯಿಯರ ಪ್ರೋತ್ಸಾಹ, ಶಿಕ್ಷಕರ ಮಾರ್ಗದರ್ಶನದಲ್ಲಿ ಗುಳೇದಗುಡ್ಡದ ಇತಿಹಾಸದಲ್ಲಿ 625ಕ್ಕೆ 622 ಅಂಕ ಪಡೆಯುವ ಮೂಲಕ ಪಟ್ಟಣದ ಕೀರ್ತಿ ಹೆಚ್ಚಿಸಿದ್ದಾಳೆ. ಮನೆ ವಾತಾವರಣದಲ್ಲಿ ಉರ್ದು ಇದ್ದರೂ ಕನ್ನಡ ಮಾಧ್ಯಮದಲ್ಲಿ ಸಾಧನೆ ಮಾಡಿದ್ದು ವಿಶೇಷ ಸಾಧನೆ ಎಂದು ಬಾಗಲಕೋಟೆ ಡಿಡಿಪಿಐ ಬಿ.ಕೆ. ನಂದನೂರ ಹೇಳಿದರು.
ಅವರು ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ನಾಲ್ಕನೇ ರ್ಯಾಂಕ್ ಪಡೆದ ಮಿನಾಜ್ ಕುರಡಗಿ ಅವರ ಮನೆಗೆ ಭೇಟಿ ನೀಡಿ, ವಿದ್ಯಾರ್ಥಿನಿಯನ್ನು ಸನ್ಮಾನಿಸಿ ಮಾತನಾಡಿ, ಜಿಲ್ಲೆಗೆ ಕೀರ್ತಿ ತಂದ ಮಿನಾಜ್ ಕುರುಡಗಿ ಅವರ ಸಾಧನೆ ಮುಂಬರುವ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬುತ್ತದೆ. ಇನ್ನು ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಈ ಜಿಲ್ಲೆಯಿಂದ ವಿಶೇಷ ಸಾಧನೆ ಮಾಡಲಿ ಎಂದರು.
ವಿದ್ಯಾರ್ಥಿನಿ ಮಿನಾಜ್ ಕುರುಡಗಿ ಮಾತನಾಡಿ, ಶಾಲೆಯಲ್ಲಿ ಹೇಳಿದ ಪಾಠವನ್ನು ಅಂದೇ ಅಭ್ಯಾಸ ಮಾಡಿದರೆ ಮುಂದೆ ಪರೀಕ್ಷೆಯನ್ನು ನಿರ್ಭೀತಿಯಿಂದ ಎದುರಿಸಲು ಸಾಧ್ಯ. ನನ್ನ ಈ ಸಾಧನೆಗೆ ನನ್ನ ತಂದೆತಾಯಿ, ಶಿಕ್ಷಕರು ಶ್ರಮವೂ ಇದೆ. ಮುಂದೆ ನಾನು ವೈದ್ಯಳಾಗುವ ಕನಸು ಕಂಡಿದ್ದೇನೆ ಎಂದಳು.
ಈ ಸಂದರ್ಭದಲ್ಲಿ ಬಿಇಓ ಎನ್.ವೈ. ಕುಂದರಗಿ, ರಮೇಶ ಬಳ್ಳಾ, ಚನ್ನಬಸಪ್ಪ ಕುರುಬರ, ವೈ.ಜಿ. ತಳವಾರ, ಮಂಜುನಾಥ ಉಂಕಿ, ಭಾಗೀರಥಿ ಆಲೂರ, ರಾಜಶೇಖರ ಪಾಗಿ, ಸಿದ್ದು ಕೊರವರ, ಎಸ್.ಎಸ್. ಬಿರಾದಾರ, ಧನಂಜಯ ಕೊಪ್ಪಳ, ಸಂಜಯ ನಡುವಿಮನಿ, ಸಲೀಂ ಇಲಕಲ್ಲ ಮತ್ತಿತರರು ಇದ್ದರು.