ಚಿತ್ರದುರ್ಗ.ಜೂ.೧: ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಚಿತ್ರದುರ್ಗ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿದೆ. ಜಿಲ್ಲೆಯ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳ ಸಾಧನೆ ಉತ್ತಮವಾಗಿದೆ. ಪೋಷಕರು ನಂಬಿಕೆಯಿಟ್ಟು ಮಕ್ಕಳನ್ನು ಸರ್ಕಾರಿ ಶಾಲೆ ದಾಖಲಿಸಬಹುದು ಎಂದು ಜಿ.ಪಂ ಸಿಇಓ ಎಂ.ಎಸ್.ದಿವಾಕರ ಹೇಳಿದರು.ಇಲ್ಲಿನ ಮೆದೇಹಳ್ಳಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಸರ್ಕಾರಿ ಶಾಲೆಗಳಲ್ಲಿ ಪ್ರತಿಭಾನ್ವಿತ ಶಿಕ್ಷಕರು ಕೆಲಸ ನಿರ್ವಹಿಸುತ್ತಿದ್ದಾರೆ. ಕಠಿಣ ಸಿಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಸರ್ಕಾರಿ ಶಾಲೆಗಳ ಶಿಕ್ಷಕ ಹುದ್ದೆಗೆ ಆಯ್ಕೆಯಾಗುತ್ತಾರೆ. ಸರ್ಕಾರದಿಂದ ಉಚಿತವಾಗಿ ಸಮವಸ್ತ್ರ, ಶೂ, ಸಾಕ್ಸ್, ಪಠ್ಯ ಪುಸ್ತಕಗಳನ್ನು ನೀಡಲಾಗುತ್ತಿದೆ. ಮಧ್ಯಾಹ್ನದ ಬಿಸಿ ಊಟ ಸಹ ನೀಡಲಾಗುತ್ತಿದೆ. ಜಿಲ್ಲೆಯ ಸಾವಿರಾರು ಶಾಲಾ ಕೊಠಡಿಗಳನ್ನು ಕೆ.ಎಂ.ಇ.ಆರ್.ಸಿ ಅನುದಾನದಡಿ ದುರಸ್ಥಿ ಮಾಡಲಾಗುತ್ತಿದೆ. ಸೋರುತ್ತಿರುವ ಶಾಲಾ ಕೊಠಡಿ ದುರಸ್ಥಿಗೆ ಮೊದಲ ಆದ್ಯತೆ ನೀಡಲಾಗಿದೆ ಎಂದರು.ಪೋಷಕರು ಆರ್ಥಿಕವಾಗಿ ಹೊರೆ ಮಾಡಿಕೊಂಡು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಬಾರದು. ಖಾಸಗಿ ಶಾಲೆಗಳಲ್ಲಿ ಡೊನೇಷನ್ ಹಾಗೂ ಶುಲ್ಕಗಳು ಹೆಚ್ಚಿವೆ. ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲ. ಸರ್ಕಾರಿ ಶಾಲಾ ಶಿಕ್ಷಕರ ಮಗನಾಗಿ, ಸರ್ಕಾರಿ ಶಾಲೆಯಲ್ಲಿ ಓದಿ, ಇಂದು ಭಾರತೀಯ ಆಡಳಿತ ಸೇವೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಸರ್ಕಾರಿ ಶಾಲೆಗಳ ಬಗ್ಗೆ ಮಕ್ಕಳು ಹಾಗೂ ಪೋಷಕರ ಮನಸ್ಸಿನಲ್ಲಿ ಯಾವುದೇ ಕೀಳರಿಮೆ ಸಲ್ಲದು ಎಂದರು.ಸರ್ಕಾರಿ ಶಾಲಾ ಶಿಕ್ಷಕರು ಚಟುವಟಿಕೆ ಆಧಾರದಲ್ಲಿ ಮಕ್ಕಳಿಗೆ ಪಾಠ ಮಾಡಬೇಕು. ಮಕ್ಕಳಿಗೆ ಪಾಠದ ಜೊತೆ ಸಂಸ್ಕಾರವನ್ನು ಸಹ ಕಲಿಸಬೇಕು. ಉತ್ತಮ ಶಿಕ್ಷಣ ನೀಡಬೇಕು. ಜಿಲ್ಲೆ ಎಸ್.ಎಸ್.ಎಲ್.ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದ್ದು, ಇದನ್ನು ಮುಂದುವರಿಸಿಕೊಂಡು ಹೋಗಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುವುದು ಎಂದರು.