
ಧಾರವಾಡ, ಮಾ.24: 2022-23 ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಗಳು ಬರುವ ಮಾರ್ಚ 31 ರಿಂದ ಏಪ್ರಿಲ್-15 ರವರೆಗೆ ನಡೆಯಲಿದ್ದು, ಈ ಕುರಿತು ಈಗಾಗಲೇ ಎಲ್ಲ ಪೂರ್ವಭಾವಿ ಸಿದ್ದತೆಯನ್ನು ಜಿಲ್ಲಾಡಳಿತ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿಯಾಗಿ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಅವರು ಸಭೆಗೆ ತಿಳಿಸಿದರು.
ಅವರು ಧಾರವಾಡ ವಿದ್ಯಾಗಿರಿಯಲ್ಲಿರುವ ಜೆ.ಎಸ್.ಎಸ್. ಕಾಲೇಜಿನ ಉತ್ಸವ ಹಾಲ್‍ದಲ್ಲಿ ಜರುಗಿದ ಎಸ್.ಎಸ್.ಎಲ್.ಸಿ. ಪೂರ್ವಸಿದ್ದತಾ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ 112 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿದ್ದು, ಜಿಲ್ಲೆಯಲ್ಲಿ ಒಟ್ಟು 28,598 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.
ಪರೀಕ್ಷಾ ಕಾರ್ಯಗಳು ಸುಗಮವಾಗಿ ನಡೆಯುವ ಕುರಿತು ಜಿಲ್ಲಾ ಪರೀಕ್ಷಾ ನೋಡಲ್ ಅಧಿಕಾರಿಯಾಗಿ ಶಿಕ್ಷಣಾಧಿಕಾರಿ ರವಿಕುಮಾರ ಬಾರಾಟಕ್ಕ್ಕೆ ಅವರನ್ನು ನೇಮಕ ಮಾಡಲಾಗಿರುವದಾಗಿ ತಿಳಿಸಿದರು. ಅಲ್ಲದೇ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿ.ಸಿ.ಟಿವಿ ಕಡ್ಡಾಯವಾಗಿ ಅಳವಡಿಸುವದು, ಆಸನಗಳು ಸರಿಯಾದ ರೀತಿಯಲ್ಲಿ ಇರುವಂತೆ ನೋಡಿಕೊಳ್ಳುವದು ಹಾಗೂ ಕುಡಿಯುವ ನೀರು ಇನ್ನಿತರ ಎಲ್ಲ ಮೂಲಭೂತ ಸೌಕರ್ಯಗಳು ಸರಿಯಾಗಿ ಇರುವಂತೆ ನೋಡಿಕೊಳ್ಳುವಂತೆ ಎಲ್ಲ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರಿಗೆ ತಿಳಿಸಿದರು. ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಸಂಗ್ರಹ ಕೊಠಡಿ ಕಡ್ಡಾಯವಾಗಿ ಇರುವಂತೆ ನೋಡಿಕೊಳ್ಳುವದು ಹಾಗೂ ಯಾವುದೇತರಹದ ಪರೀಕ್ಷಾ ನಕಲು ಆಗದಂತೆ ತಡೆಗಟ್ಟುವ ಕುರಿತು ಕಟ್ಟುನಿಟ್ಟಿನ ಕ್ರಮ ಜರುಗಿಸಲು ತಿಳಿಸಿದರು.
ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ, ಎನ್.ಕೆ.ಸಾವಕಾರ, ಪೋಲೀಸ್ ಅಧಿಕಾರಿಗಳು, ಖಜಾನೆ ಅಧಿಕಾರಿಗಳು, ಡಿವೈಪಿಸಿ ಹುಡೇದಮನಿ, ಜಿಲ್ಲೆಯ ಎಲ್ಲ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು, ಪ್ರಶ್ನೆಪತ್ರಿಕೆ ಪಾಲಕರು, ತಾಲೂಕಾ ನೋಡಲ್ ಅಧಿಕಾರಿಗಳು, ವಿಷಯ ಪರಿವೀಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಭಾಗವಹಿಸಿದ್ದರು.