
ಅಫಜಲಪುರ: ಎ.4:ತಾಲೂಕಿನ ಅತನೂರು ಗ್ರಾಮದ ಆದರ್ಶ ವಿದ್ಯಾಲಯ ಪರೀಕ್ಷಾ ಕೇಂದ್ರಕ್ಕೆ ಕಲಬುರ್ಗಿ ಎಸ್. ಪಿ ಇಶಾ ಪಂತ್ ದಿಢೀರ್ ಭೇಟಿ ನೀಡಿದರು.
ರಾಜ್ಯದಲ್ಲಿ ಮಾರ್ಚ್ 31 ರಿಂದ 2022-23 ನೇ ಸಾಲಿನ ಎಸ್. ಎಸ್. ಎಲ್. ಸಿ ಪರೀಕ್ಷೆ ಆರಂಭಗೊಂಡಿದ್ದು ಸೋಮವಾರ ಗಣಿತ ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಕೇಂದ್ರಕ್ಕೆ ಭೇಟಿ ನೀಡಿದ ವೇಳೆ ನಕಲು ನಡೆಯುತ್ತಿರುವುದನ್ನು ಗಮನಿಸಿದ ಎಸ್.ಪಿ ಅವರು ಕೂಡಲೇ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರನ್ನು ಕರೆಸಿ ತರಾಟೆಗೆ ತೆಗೆದುಕೊಂಡು ಇದೇ ರೀತಿ ಮುಂದುವರಿದರೆ ನಿಮ್ಮ ಮೇಲೆ ಶಿಸ್ತು ಕಾನೂನು ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಎಚ್ಚರಿಸಿದರು.
ಹಾಗೂ ಸ್ಥಳದಲ್ಲಿ ನಿಯೋಜನೆಗೊಂಡಿದ್ದ ಪೆÇಲೀಸ್ ಸಿಬ್ಬಂದಿಗಳು ನಕಲು ನಡೆಯದಂತೆ ಸೂಕ್ತ ಎಚ್ಚರಿಕೆ ವಹಿಸಬೇಕು. ಪರೀಕ್ಷಾ ಕೇಂದ್ರದ ಸುತ್ತಮುತ್ತ ಪುಂಡ ಪೆÇೀಕರಿಗಳು ಕಂಪೌಂಡ್ ಹಾರದಂತೆ ಮತ್ತು ಗಲಾಟೆ ಮಾಡುವುದನ್ನು ತಡೆಯಬೇಕು ಎಂದು ಸೂಚಿಸಿದರು.
ನಂತರ ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ತಾಲೂಕಿನ ಬಹುತೇಕ ಪರೀಕ್ಷಾ ಕೇಂದ್ರಗಳಲ್ಲಿ ನಕಲು ನಡೆಯುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಹೀಗಾಗಿ ಇದರಿಂದ ಪ್ರತಿಭಾವಂತ ವಿದ್ಯಾರ್ಥಿಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಕೂಡಲೇ ತಾವು ಎಚ್ಚೆತ್ತುಕೊಂಡು ಪರೀಕ್ಷೆ ಕೇಂದ್ರಕ್ಕೆ ಭೇಟಿ ನೀಡಿ ಸೂಕ್ತ ಕಟ್ಟೆಚ್ಚರ ವಹಿಸಿ ಎಂದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಇಂದಿನ ಮಕ್ಕಳು ನಕಲು ಮಾಡದಂತೆ ಪಾಲಕರು ಹಾಗೂ ಶಿಕ್ಷಕರು ತಿಳಿ ಹೇಳಬೇಕು. ಇಂತಹ ಅಡ್ಡ ದಾರಿಗಳಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕುಂಠಿತಗೊಳ್ಳುತ್ತದೆ. ಹಾಗೂ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಅವರಿಂದ ಸಾಧ್ಯವಾಗುವುದಿಲ್ಲ ಎಂದು ತಮ್ಮ ಅಸಮಾಧಾನ ಹೊರಹಾಕಿದರು.