ಎಸ್.ಎಸ್.ಎಲ್.ಸಿ., ದ್ವಿತೀಯ ಪಿಯುಸಿ ಪರೀಕ್ಷೆ ರದ್ಧತಿಗೆ ಆಗ್ರಹ

ಕಲಬುರಗಿ,ಜೂ.3-ಕೊವಿಡ್ ಎರಡನೇ ಅಲೆಯ ತೀವ್ರತೆಯ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಸಿಬಿಎಸ್ಇ ಹತ್ತನೇ ಮತ್ತು ಹನ್ನೆರಡನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಿದೆ. ಆದರೆ, ರಾಜ್ಯ ಸರ್ಕಾರ ಹತ್ತನೇ ತರಗತಿ ಹಾಗೂ ದ್ವಿತೀಯ ಪಿಯು ಪರೀಕ್ಷೆಗಳನ್ನು ಸದ್ಯಕ್ಕೆ ಮುಂದೂಡಿದ್ದು, ಇನ್ನೂ ಪರೀಕ್ಷೆ ಕುರಿತು ನಿರ್ದಿಷ್ಟ ನಿರ್ಧಾರ ಕೈಗೊಂಡಿಲ್ಲ. ಸಿಬಿಎಸ್ಇ ಮಾದರಿಯಲ್ಲಿಯೇ ರಾಜ್ಯ ಸರ್ಕಾರ ಹತ್ತನೇ ತರಗತಿ ಮತ್ತು ದ್ವಿತೀಯ ಪಿಯು ಪರೀಕ್ಷೆಗಳನ್ನು ರದ್ದುಗೊಳಿಸಬೇಕೆಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎ.ಐ.ಡಿ.ಎಸ್.ಓ) ಜಿಲ್ಲಾ ಸಮಿತಿ ಆಗ್ರಹಿಸಿದೆ.
ಪರೀಕ್ಷೆಯ ಬಗೆಗಿನ ಗೊಂದಲ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಒತ್ತಡ ಹೇರುತ್ತದೆ. ಜೊತೆಗೆ, ಕೋವಿಡ್ ಸಾಂಕ್ರಾಮಿಕ ಇದೀಗ ಗ್ರಾಮಗಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಸಾವಿನ ಸಂಖ್ಯೆ ಸಹ ಹೆಚ್ಚುತ್ತಲೇ ಇದೆ. ಮುಂದಿನ ದಿನಗಳಲ್ಲಿ ಸರ್ಕಾರ ಪರೀಕ್ಷೆ ನಡೆಸಲು ನಿರ್ಧರಿಸಿದರೂ ಕೆಲವು ದಿನಗಳು ತರಗತಿ ನಡೆಸಿಯೇ ಪರೀಕ್ಷೆ ನಡೆಸಬೇಕು. ಆದರೆ, ಮುಂದೆ ಮೂರನೇ ಅಲೆಯ ಅಪಾಯ ಗಮನದಲ್ಲಿ ಇಟ್ಟುಕೊಂಡು, ತರಗತಿ ಅಥವಾ ಪರೀಕ್ಷೆ ನಡೆಸುವುದು ಕಷ್ಟಸಾಧ್ಯ. ಆದ್ದರಿಂದ ಪರೀಕ್ಷೆಗಳನ್ನು ರದ್ದುಗೊಳಿಸಿ, ಅನುಭವಿ ಶಿಕ್ಷಕರು ಹಾಗೂ ಶಿಕ್ಷಣ ತಜ್ಞರ ಸಲಹೆ ಮೇರೆಗೆ ಒಂದು ವೈಜ್ಞಾನಿಕ ಮೌಲ್ಯಮಾಪನ ಪದ್ಧತಿ ರಚಿಸಿ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು.
ಪ್ರಥಮ ಪಿಯು ಮತ್ತು ಎಂಜಿನಿಯರಿಂಗ್ ಸೇರಿದಂತೆ ಇತರ ಉನ್ನತ ಶಿಕ್ಷಣದ ದಾಖಲಾತಿಯಲ್ಲಿ ಪರೀಕ್ಷೆ ಬರೆಯದೇ ಇರುವ ಸಿಬಿಎಸ್ಇ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಲಾಭ ದೊರೆಯಲಿದೆ. ಇದು ರಾಜ್ಯದ ಪಠ್ಯಕ್ರಮದಲ್ಲಿ ಅಭ್ಯಸಿಸುವ ವಿದ್ಯಾರ್ಥಿಗಳಿಗೆ ಸಂಕಷ್ಟ ಉಂಟುಮಾಡುತ್ತದೆ. ಸಿಇಟಿ ದಾಖಲಾತಿಯಲ್ಲಿ ಸಹ, ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಅನಾನುಕೂಲ ಎದುರಾಗುತ್ತದೆ. ಈ ಎಲ್ಲಾ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ, ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಆರೋಗ್ಯ ಮತ್ತು ವಿಧ್ಯಾಭ್ಯಾಸದ ಹಿತದೃಷ್ಟಿಯಿಂದ ಪರೀಕ್ಷೆ ರದ್ದುಗೊಳಿಸುವ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಆರ್ಗನೈಸೇಷನ್ ಜಿಲ್ಲಾ ಸಮಿತಿ ಅಧ್ಯಕ್ಷ ಹಣಮಂತ ಎಸ್.ಹೆಚ್, ಜಿಲ್ಲಾ ಕಾರ್ಯದರ್ಶಿ ಈರಣ್ಣಾ ಇಸಬಾ ಅವರು ಆನ್ ಲೈನ್ ಪ್ರತಿಭಟನೆ ಮೂಲಕ ಆಗ್ರಹ ಪಡಿಸಿದರು.