
ಕಲಬುರಗಿ,ಆ.18: ನಗರದ ಎಸ್.ಎಂ. ಕೃಷ್ಣ ಆಶ್ರಯ ಕಾಲೋನಿಯಲ್ಲಿ ಬಡವರಿಗೆ ಬದಲು ಶ್ರೀಮಂತರಿಗೆ ಹಕ್ಕುಪತ್ರಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಜೈ ಕನ್ನಡಿಗರ ರಕ್ಷಣಾ ವೇದಿಕೆಯ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.
ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ನಗರದ ಸರ್ವೆ ನಂಬರ್ 75 ಮತ್ತು 76ರ ಎಸ್.ಎಂ. ಕೃಷ್ಣಾ ಆಶ್ರಯ ಕಾಲೋನಿಯ 200 ಮನೆಗಳ ನಿವಾಸಿಗಳಿಗೆ ಅವರ ಹೆಸರಿಗೆ ಮಂಜೂರಾಗಿರುವ ಸುಮಾರು 12 ವರ್ಷಗಳಿಂದ ಹಕ್ಕು ಪತ್ರ ವಿತರಣೆ ಮಾಡದೇ ಅದೇ ನಂಬರಿನ ಮನೆಗಳನ್ನು ಶ್ರೀಮಂತರಿಗೆ ವಿತರಣೆ ಮಾಡಲಾಗಿದೆ ಎಂದು ಆರೋಪಿಸಿದರು.
ಆಶ್ರಯ ಮನೆಗಳು ಮಂಜೂರಾಗಿ ಸುಮಾರು 12 ವರ್ಷಗಳು ಗತಿಸಿವೆ. ಅಲ್ಲಿ ಯಾವುದೇ ರೀತಿಯಲ್ಲಿ ಮೂಲಭೂತ ಸೌಲಭ್ಯಗಳಿಲ್ಲ. ರಸ್ತೆಗಳು, ಬೀದಿ ದೀಪಗಳು, ಕುಡಿಯುವ ನೀರು ಮುಂತಾದ ಹತ್ತು ಹಲವು ಸಮಸ್ಯೆಗಳ ನಡುವೆಯೂ ಹನ್ನೆರಡು ವರ್ಷಗಳಿಂದ ವಾಸವಾಗಿದ್ದಾರೆ. ಆದಾಗ್ಯೂ, ಮಹಾನಗರ ಪಾಲಿಕೆಯವರು ನಿರ್ಗತಿಕರಿಗೆ ಇನ್ನುವರೆಗೂ ಹಕ್ಕುಪತ್ರಗಳನ್ನು ನೀಡದೇ ಅವರಿಗೆ ಕತ್ತಲಲ್ಲಿ ಇಟ್ಟು ಹಣದ ದುರಾಸೆಯಿಂದ ಅವರಿಗೆ ಹಕ್ಕುಪತ್ರಗಳನ್ನು ಕೊಡದೇ ಸಂಬಂಧವಿಲ್ಲದ ಶ್ರೀಮಂತರಿಗೆ ಅದೇ ಮನೆಗಳ ಹಕ್ಕುಪತ್ರಗಳನ್ನು ನೀಡಿ ದ್ರೋಹ ಬಗೆದಿದ್ದಲ್ಲದೇ ಬಡವರು ಮತ್ತಷ್ಟು ಬಡತನದ ಕೂಪಕ್ಕೆ ಉದ್ದೇಶಪೂರ್ವಕವಾಗಿ ನೂಕಲಾಗಿದೆ ಎಂದು ಅವರು ಆಕ್ರೋಶ ಹೊರಹಾಕಿದರು.
ಕೂಡಲೇ ಆ ನಿರ್ಗತಿಕರಿಗೆ ಹಕ್ಕು ಪತ್ರಗಳನ್ನು ಕೊಡುವಂತೆ ಒತ್ತಾಯಿಸಿದ ಅವರು, ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ನ್ಯಾಯ ದೊರಕಿಸಿಕೊಡಬೇಕು. ಬೇಡಿಕೆಗಳಿಗೆ ಸ್ಪಂದಿಸದೇ ಹೋದಲ್ಲಿ ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ನಗರಕ್ಕೆ ಬಂದಾಗ ಅವರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.
ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಸಚಿನ್ ಎಸ್. ಫರತಾಬಾದ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸುರೇಶ್ ಹನಗುಡಿ, ಅಂಬು ಮಸ್ಕಿ, ಅಕ್ಷಯ್, ನವೀನ್, ಸಾಯಿಕುಮಾರ್ ಸಿಂಧೆ, ಪ್ರವೀಣ್ ಸಿಂಧೆ ಮುಂತಾದವರು ಪಾಲ್ಗೊಂಡಿದ್ದರು.