ಎಸ್‍ಡಿಎಂ ಹೊರ-ಒಳ ರೋಗಿಗಳ ವಿಭಾಗ ಸೇವೆಗಳ ಪುನರಾರಂಭ


ಧಾರವಾಡ, ಡಿ.4: ಸತ್ತೂರಿನ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ(ಎಸ್‍ಡಿಎಂಸಿಹೆಚ್)ಯ ಆವರಣದಲ್ಲಿ ಕಳೆದ ನವೆಂಬರ್ ಕೊನೆಯ ವಾರದಲ್ಲಿ ಕಾಣಿಸಿಕೊಂಡ ಕೋವಿಡ್ ಪ್ರಕರಣಗಳ ಕಾರಣದಿಂದ, ಸ್ಥಗಿತಗೊಳಿಸಲಾಗಿದ್ದ ಆಸ್ಪತ್ರೆಯ ಹೊರ ಮತ್ತು ಒಳರೋಗಿಗಳ ವಿಭಾಗದ ಸೇವೆಗಳನ್ನು ರಾಜ್ಯ ಮಟ್ಟದ ತಾಂತ್ರಿಕ ತಜ್ಞರ ಸಲಹಾ ಸಮಿತಿಯ ಶಿಫಾರಸ್ಸು ಆಧರಿಸಿ ಪುನರಾರಂಭಿಸಲು ಷರತ್ತುಬದ್ಧ ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಕಳೆದ ನವೆಂಬರ್ 17 ರಂದು ಎಸ್ ಡಿ ಎಂ ಆವರಣದ ಬಳಿ ಇರುವ ಡಾ.ವಿರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ವೈದ್ಯಕೀಯ ಪದವಿ ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ದೃಢಪಟ್ಟಿತ್ತು. ನವೆಂಬರ್ 24 ರಿಂದ ಕಾಲೇಜಿನ ಆವರಣದ ಎರಡು ಹಾಸ್ಟೇಲುಗಳನ್ನು ಸೀಲ್‍ಡೌನ್ ಮಾಡಲಾಗಿತ್ತು. ನವೆಂಬರ್ 26 ರಿಂದ ಎಸ್‍ಡಿಎಂ ಆಸ್ಪತ್ರೆಯ ಹೊರ ಮತ್ತು ಒಳರೋಗಿಗಳ ವಿಭಾಗದ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ನವೆಂಬರ್ 23 ರಿಂದ ಡಿಸೆಂಬರ್ 1 ರವರೆಗೆ ವಿದ್ಯಾರ್ಥಿಗಳು,ವೈದ್ಯರು ,ಸಿಬ್ಬಂದಿ ಹಾಗೂ ಅವರ ಸಂಪರ್ಕಕ್ಕೆ ಬಂದ ವ್ಯಕ್ತಿಗಳು ಸೇರಿ ಒಟ್ಟು 7868 ಜನರ ಸ್ವ್ಯಾಬ್ ಸಂಗ್ರಹಿಸಿ,ಕೋವಿಡ್ ತಪಾಸಣೆ ಮಾಡಿದಾಗ 306 ಜನರಲ್ಲಿ ಸೋಂಕು ದೃಢಪಟ್ಟಿತ್ತು. ನಂತರ ಇವುಗಳನ್ನು ಜಿನೋಮ್ ಸಿಕ್ವೆನ್ಸಿಂಗ್ ಪರೀಕ್ಷೆಗಾಗಿ ಬೆಂಗಳೂರಿನ ರಾಷ್ಟ್ರೀಯ ಜೀವವಿಜ್ಞಾನ ಪ್ರಯೋಗಾಲಯಗಳಿಗೆ ಕಳುಹಿಸಲಾಗಿತ್ತು. ಈ ಪ್ರಕರಣಗಳಲ್ಲಿ ಯಾವುದೇ ಹೊಸ ಪ್ರಬೇಧದ ವೈರಾಣು ಇಲ್ಲವೆಂಬುದು ದೃಢಪಟ್ಟಿದೆ.
ಎಸ್‍ಡಿಎಂ ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿಯು ಆಸ್ಪತ್ರೆಯ ಓಪಿಡಿ ಮತ್ತು ಐಪಿಡಿಗಳ ಪುನರಾರಂಭಕ್ಕೆ ಅನುಮತಿ ಕೋರಿ ನವೆಂಬರ್ 30 ರಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತ್ತು. ಈ ಕುರಿತು ರಾಜ್ಯ ಮಟ್ಟದ ತಾಂತ್ರಿಕ ತಜ್ಞರ ಸಲಹಾ ಸಮಿತಿಯ ಅಭಿಪ್ರಾಯ ಕೋರಲಾಗಿತ್ತು, ಸಮಿತಿಯು ಡಿಸೆಂಬರ್ 2 ರಂದು ಸಭೆ ನಡೆಸಿ ಎಸ್‍ಡಿಎಂ ಆಸ್ಪತ್ರೆಯ ಹೊರ ಮತ್ತು ಒಳರೋಗಿಗಳ ವಿಭಾಗದ ಸೇವೆಗಳ ಪುನರಾರಂಭಕ್ಕೆ ಅನುಮತಿ ನೀಡಬಹುದು ಎಂದು ಶಿಫಾರಸ್ಸು ಮಾಡಿದೆ.
ಸಮಿತಿಯ ಶಿಫಾರಸ್ಸುಗಳನ್ನು ಆಧರಿಸಿ, ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ 1897 ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ 2005 ರಡಿ ಕೆಲವು ಷರತ್ತುಗಳನ್ನು ವಿಧಿಸಿ ಎಸ್‍ಡಿಎಂ ಆಸ್ಪತ್ರೆಯ ಸೇವೆಗಳ ಪುನರಾರಂಭಕ್ಕೆ ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.